– ಪತ್ನಿ ದೇಹವನ್ನು ಸುಟ್ಟು ಮೂರು ತುಂಡು ಮಾಡಿದ್ದ ಪತಿ
ಪಾಟ್ನಾ: ವರದಕ್ಷಿಣೆಯಾಗಿ ಎಮ್ಮೆ ಮತ್ತು ಮೋಟಾರ್‌ಸೈಕಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನೇ ಕೊಲೆ ಮಾಡಿದ್ದ ಪ್ರಕರಣದಲ್ಲಿ ಬಿಹಾರದ ವ್ಯಕ್ತಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರು ವರ್ಷಗಳ ಬಳಿಕ ಪ್ರಕರಣದ ತೀರ್ಪು ಹೊರಬಿದ್ದಿದ್ದು, ದಂಪತಿಯ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಆರ್ಥಿಕ ನೆರವು ನೀಡುವಂತೆಯೂ ಕೋರ್ಟ್ ಆದೇಶಿಸಿದೆ.
ಪಶ್ಚಿಮ ಚಂಪಾರಣ್ ಜಿಲ್ಲೆಯ ಬಾಗಹಾದಲ್ಲಿ ಈ ಘಟನೆ ನಡೆದಿತ್ತು. 2020ರಲ್ಲಿ ರೀನಾ ದೇವಿಯನ್ನು ಆಕೆಯ ಪತಿ ಸುಭಾಷ್ ಯಾದವ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ವರದಕ್ಷಿಣೆಯಾಗಿ ಎಮ್ಮೆ ಮತ್ತು ಮೋಟಾರ್‌ಸೈಕಲ್ ನೀಡುವಂತೆ ಸುಭಾಷ್ ಪತ್ನಿಯ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದ.
2020ರ ಜುಲೈ 30ರಂದು ರೀನಾಳ ತಾಯಿ ಮಂಜು ದೇವಿ ನೀಡಿದ ದೂರಿನ ಆಧಾರದ ಮೇಲೆ ಧನಹಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ರೀನಾಳ ದೇಹವನ್ನು ಸುಟ್ಟು, ಮೂರು ತುಂಡುಗಳಾಗಿ ಕತ್ತರಿಸಿ ಪ್ರತ್ಯೇಕ ಚೀಲಗಳಲ್ಲಿ ಹಾಕಲಾಗಿತ್ತು. ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ; ವಿಸಿ ನಾಲೆಗೆ ನೀರು ನಿಲ್ಲಿಸಿ ನದಿಗೆ ಮಾತ್ರ ರಿಲೀಸ್
ಪ್ರಕರಣದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆ ಹಾಗೂ ತನಿಖೆಯಲ್ಲಿ ಸಂಗ್ರಹಿಸಿದ್ದ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಿತ್ತು. ಸಾಕ್ಷಿಗಳ ಹೇಳಿಕೆಗಳು ಕೂಡ ಪ್ರಾಸಿಕ್ಯೂಷನ್ ಪರವಾಗಿದ್ದವು.
ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಬಾಗಹಾ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮನ್ವೇಂದ್ರ ಮಿಶ್ರಾ ಅವರ ಕೋರ್ಟ್ ಸುಭಾಷ್‌ನನ್ನು ಪತ್ನಿಯ ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಜೀವಾವಧಿ ಶಿಕ್ಷೆ, ದಂಡ
ಕೊಲೆ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಸುಭಾಷ್‌ಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು.
ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲೂ ಆತ ತಪ್ಪಿತಸ್ಥ ಎಂದು ಕೋರ್ಟ್ ಹೇಳಿದ್ದು, ಐಪಿಸಿ ಸೆಕ್ಷನ್ 201ರ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದರೆ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದನ್ನೂ ಓದಿ: ದಾವಣಗೆರೆ | ಬೈಕ್‌ಗಳು ಮುಖಾಮುಖಿ ಡಿಕ್ಕಿ; ಮಗುವಿಗೆ ಔಷಧಿ ತರುತ್ತಿದ್ದ ವ್ಯಕ್ತಿ ಸೇರಿ ಇಬ್ಬರು ಸಾವು
ಮಕ್ಕಳಿಗೆ ಸರ್ಕಾರದಿಂದ ನೆರವು
ಈ ಪ್ರಕರಣದಲ್ಲಿ ಅತ್ಯಂತ ನೋವಿನ ಸಂಗತಿ ಎಂದರೆ ದಂಪತಿಯ ಇಬ್ಬರು ಅಪ್ರಾಪ್ತ ಮಕ್ಕಳು ಇದೀಗ ಪೋಷಕರ ಆರೈಕೆಯಿಂದ ವಂಚಿತರಾಗಿದ್ದಾರೆ. ತಾಯಿ ಮೃತಪಟ್ಟಿದ್ದು, ತಂದೆಗೆ ಜೀವಾವಧಿ ಶಿಕ್ಷೆಯಾಗಿದೆ. ಮಕ್ಕಳ ಪರಿಸ್ಥಿತಿಯನ್ನು ಗಮನಿಸಿದ ಕೋರ್ಟ್, ಬಿಹಾರ ಸರ್ಕಾರಕ್ಕೆ ಇಬ್ಬರು ಮಕ್ಕಳಿಗೂ ತಲಾ ತಿಂಗಳಿಗೆ 4,000 ರೂ. ಆರ್ಥಿಕ ನೆರವು ನೀಡುವಂತೆ ನಿರ್ದೇಶನ ನೀಡಿದೆ.

