ಉತ್ತರ ಕರ್ನಾಟಕದ ಸೊಗಡಿನ ಕಥೆಯೊಂದಿಗೆ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ (Hubballi Hunters) ಸಿನಿಮಾ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. (Sandalwood) ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಇದೀಗ ಡಬ್ಬಿಂಗ್ ಕೆಲಸವೂ ಮುಗಿದಿದೆ.
‘ಬೆಲ್ ಬಾಟಮ್’ ಸಿನಿಮಾದ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರ ನಿರ್ಮಾಣದಲ್ಲಿ ‘ಗೋಲ್ಡನ್ ಹಾರ್ಸ್ ಸಿನಿಮಾ’ ಬ್ಯಾನರ್‌ನಡಿ ಸಿನಿಮಾ ಮೂಡಿಬರುತ್ತಿದೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಮೂಲಕ ಗಮನ ಸೆಳೆದ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಶೀರ್ಷಿಕೆಯೇ ಹೇಳುವಂತೆ ಸಿನಿಮಾ ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ನೆಲದ ಸೊಗಡನ್ನು ಒಳಗೊಂಡಿದೆ. ಹುಬ್ಬಳ್ಳಿಯಲ್ಲೇ ಮುಹೂರ್ತ ನೆರವೇರಿಸಿ ಚಿತ್ರೀಕರಣ ಆರಂಭಿಸಿದ್ದ ಚಿತ್ರತಂಡ, ಜುಲೈ ಆರಂಭದಲ್ಲೇ ಶೂಟಿಂಗ್ ಮುಗಿಸಿದೆ.
ಮೊದಲ ಹಂತದಲ್ಲಿ ಹುಬ್ಬಳ್ಳಿಯ ವಿವಿಧ ಸ್ಥಳಗಳಲ್ಲಿ 14 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಬಳಿಕ ಶಿರಸಿಯಲ್ಲಿ 22 ದಿನಗಳು ಹಾಗೂ ಧಾರವಾಡದಲ್ಲಿ 2 ದಿನಗಳ ಕಾಲ ಶೂಟಿಂಗ್ ನಡೆಸಿ ಸಂಪೂರ್ಣ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ.
ಕಥೆಗೆ ನೈಜತೆ ಬರಲಿ ಎಂಬ ಕಾರಣಕ್ಕೆ ಹುಬ್ಬಳ್ಳಿ, ಶಿರಸಿ ಹಾಗೂ ಧಾರವಾಡದ ನೈಜ ತಾಣಗಳಲ್ಲೇ ಹೆಚ್ಚಿನ ದೃಶ್ಯಗಳನ್ನು ಚಿತ್ರೀಕರಿಸಿರುವುದು ಸಿನಿಮಾದ ವಿಶೇಷತೆ. ಹೀಗಾಗಿ ಉತ್ತರ ಕರ್ನಾಟಕದ ಸ್ಥಳೀಯ ವಾತಾವರಣ ಸಿನಿಮಾದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದೆ. ಇದನ್ನೂ ಓದಿ: ಹೆಚ್‌ಡಿಕೆ ಕರೆ ಬೆನ್ನಲ್ಲೇ ನೈಸ್ ರೋಡ್ ಟೋಲ್ ಕಟ್ಟಲು ಜನರ ಹಿಂದೇಟು
ಚಿತ್ರದಲ್ಲಿ ಚೇತನ್ ಮಾರಂಬೀಡ್, ಪವನ್ ಕುಲಕರ್ಣಿ, ಸುಮಿತ್ ಸಂಕೋಜಿ, ನಮನ್ ಅರೋರ, ದೀಪಕ್ ರಾವ್, ಶಿವು ಗುಂಡಣ್ಣನವರ್, ವಿನಯ್ ದೊಡ್ಡಮನಿ, ಧನ್ಯ ಸುಜೀತ್, ಪವನ್ ಅಣ್ಣೆಗೇರಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
‘ಮಹಾನಟಿ’ ರಿಯಾಲಿಟಿ ಶೋ ಖ್ಯಾತಿಯ ಧನ್ಯಶ್ರೀ ಸುಜಿತ್ ಹಾಗೂ ವನು ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತು ಕೃಷ್ಣ ಹೆಬ್ಬಾಳೆ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಹಲವು ಕಂಟೆಂಟ್ ಕ್ರಿಯೇಟರ್‌ಗಳು ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚಿರುವುದು ಮತ್ತೊಂದು ವಿಶೇಷ. ಇದರಿಂದ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾ ಪ್ರೇಕ್ಷಕರಲ್ಲೂ ಕುತೂಹಲ ಮೂಡಿದೆ.
ಸಮರ್ಥ್ ಬಿ. ಕಡಕೊಳ್ ಅವರೇ ಸಿನಿಮಾದ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಹಾಗೂ ಚೇತನ್ ಮರಂಬೀದ್ ಅವರೊಂದಿಗೆ ಸೇರಿ ಸಂಭಾಷಣೆ ರಚಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಹರಿದ ಕಾವೇರಿ; ವಿಸಿ ನಾಲೆಗೆ ನೀರು ನಿಲ್ಲಿಸಿ ನದಿಗೆ ಮಾತ್ರ ರಿಲೀಸ್
ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಪ್ರಸನ್ನ ಕೇಶವ ಸಂಗೀತ ನಿರ್ದೇಶನವಿದೆ. ಚಿತ್ರೀಕರಣ ಮತ್ತು ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿರುವುದರಿಂದ ಇದೀಗ ಚಿತ್ರತಂಡ ಮುಂದಿನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಶೀಘ್ರದಲ್ಲೇ ‘ಹುಬ್ಬಳ್ಳಿ ಹಂಟರ್ಸ್’ ತೆರೆಗೆ ಬರಲು ಸಿದ್ಧವಾಗುತ್ತಿದೆ.

