ತುಮಕೂರು: ಮಗ ಮತ್ತು ಸೊಸೆಯ ಕಾಟ ತಾಳಲಾರದೆ ಮನೆ ಬಿಟ್ಟು ಬಂದು ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ಅಜ್ಜಿಯನ್ನು ಜಿಲ್ಲೆಯ ಐಡಿ ಹಳ್ಳಿ ಗ್ರಾಮಸ್ಥರು ರಕ್ಷಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಗ್ರಾಮಸ್ಥರು ವೃದ್ಧೆಯನ್ನು ರಕ್ಷಿಸಿ ವೃದ್ಧಾಶ್ರಮಕ್ಕೆ ಬಿಟ್ಟಿದ್ದಾರೆ. ಬೆಂಗಳೂರಿನ ಹಾರೋಹಳ್ಳಿಯಿಂದ ಮನೆ ಬಿಟ್ಟು ಬಂದ ವೃದ್ಧೆ ಐಡಿಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಓಡಾಡಿಕೊಂಡಿದ್ದಳು.
Advertisement
Advertisement
ಅಜ್ಜಿಯನ್ನು ಕಂಡು ಹಲವು ಯುವಕರು ಯಾರೋ ಭಿಕ್ಷುಕರು ಬಂದಿರಬೇಕು ಎಂದು ಸುಮ್ಮನಾಗಿದ್ದಾರೆ. ಅಜ್ಜಿ ಕುಸಿದು ಬಿದ್ದಾಗ ಅವರನ್ನು ರಕ್ಷಿಸಿ ಊಟ ಮಾಡಿಸಿ ನಂತರ ಅವರ ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಅಜ್ಜಿ ತಮ್ಮ ಮಗ ಹಾಗೂ ಸೊಸೆಯ ಕುರಿತು ವಿವರಿಸಿದ್ದಾರೆ.
Advertisement
ಆಗ ಗ್ರಾಮಸ್ಥರಿಗೆ ನಿಜಾಂಶ ಗೊತ್ತಾಗಿದ್ದು, ಮಗ ಸೊಸೆಯ ಕಾಟ ತಾಳಲಾರದೆ ಮನೆ ಬಿಟ್ಟು ಬಂದಿದ್ದಾರೆ ಎಂದು ತಿಳಿದಿದೆ. ಅಜ್ಜಿ ಬೆಂಗಳೂರಿನ ಹಾರೋಹಳ್ಳಿಯ ಶಾಂತಮ್ಮ ಎಂದು ತಿಳಿದು ಬಂದಿದ್ದು, ನಂತರ ಮನೆಗೆ ಸೇರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಆಗ ಮಗ ಸೊಸೆ ನನ್ನನ್ನು ಹೊಡೆಯುತ್ತಾರೆ ನಾನು ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ನಂತರ ಗ್ರಾಮಸ್ಥರೆಲ್ಲ ಸೇರಿ ತುಮಕೂರಿನ ಶಾರದಾಂಬಾ ವೃದ್ಧಾಶ್ರಮದ ಅಧ್ಯಕ್ಷೆ ಯಶೋಧ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನೆರವಿಗೆ ಬಂದ ಸಂಸ್ಥೆಯ ಅಧ್ಯಕ್ಷೆ ಯಶೋಧ ಅಜ್ಜಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ.