-ನಾಡಬಾಂಬ್ ಮೂಲ ಬೆನ್ನತ್ತಿದ್ದ ಪೊಲೀಸರು
ತುಮಕೂರು: ಭಗ್ನಪ್ರೇಮಿಯೊಬ್ಬ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಿನೇ ದಿನೇ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇತ್ತ ಪೊಲೀಸರಿಗೆ ಸ್ಫೋಟಿಸಿದ ನಾಡಬಾಂಬ್ ಸಿಕ್ಕಿದ್ದು ಎಲ್ಲಿ ಎನ್ನುವ ಚಿಂತೆ ಶುರುವಾಗಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ನಾಗೇಂದ್ರನ ಪಾರ್ಥಿವ ಶರೀರ ಊರು ಸೇರಿದೆ. ಅತ್ತ ಪ್ರಿಯಕರನಿಂದ ದಾಳಿಗೆ ಒಳಗಾಗಿದ್ದ ಪ್ರಿಯತಮೆ ರಮ್ಯಾ ಚಿಕಿತ್ಸೆ ಪಡೆದು ಮನೆ ಸೇರಿದ್ದಾಳೆ. ಈ ಮಧ್ಯೆ ಪೊಲೀಸರು ನಾಡಬಾಂಬ್ ಮೂಲ ಬೆನ್ನತ್ತಿದ್ದಾರೆ. ಇದನ್ನೂ ಓದಿ: ನಾಗೇಂದ್ರ ಇತ್ತೀಚೆಗೆ ಸಣ್ಣ ಸಣ್ಣ ವಿಚಾರಕ್ಕೂ ಹಲ್ಲೆ ಮಾಡ್ತಿದ್ದ – ಪಾಗಲ್ ಪ್ರೇಮಿಯ ಕರಾಳ ಮುಖ ಬಿಚ್ಚಿಟ್ಟ ಯುವತಿ
ಭಗ್ನಪ್ರೇಮಿಯ ಆತ್ಮಾಹುತಿ ಪ್ರಕರಣ ಸಂಬಂಧಿಸಿದಂತೆ ಮತ್ತಷ್ಟು ಅಂಶಗಳು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಹೌದು, ರಮ್ಯಾಳನ್ನ ಪ್ರೀತಿಸುತ್ತಿದ್ದ ನಾಗೇಂದ್ರ ಪಕ್ಕಾ ಪ್ಲ್ಯಾನ್ ಮಾಡಿಕೊಂಡೆ ಬೆಂಗಳೂರಿಗೆ ಬಂದಿದ್ದ. ರಮ್ಯಾ ತನ್ನಿಂದ ದೂರ ಆಗುತ್ತಾಳೆ ಎಂದು ನೊಂದ ನಾಗೇಂದ್ರ ಬಾಂಬ್ ಸ್ಪೋಟಿಸಿಕೊಂಡು ಇಬ್ಬರ ಪ್ರಾಣಹೋಗಲೆಂದೇ ಪ್ರಯತ್ನಿಸಿದ್ದ. ಆದರೆ ಪ್ರಿಯತಮೆ ಬಚಾವ್ ಆದಳು. ಈತ ಮಾತ್ರ ಬಾಂಬಿನ ಬೆಂಕಿಯಲ್ಲಿ ಬೆಂದು ಹೋದ. ಈ ದುರಂತಕ್ಕೆ ಕಾರಣವಾಗಿದ್ದು ನಾಗೇಂದ್ರ ತಂದ ಆ ಮೂರು ಬಾಂಬ್. ನಾಗೇಂದ್ರನ ಬಳಿ ಬಾಂಬ್ ಇಲ್ಲದೇ ಇದ್ದರೆ ಆತ ಬದುಕಿರುತಿದ್ದ. ಮತ್ತೇ ಈ ಘಟನೆಯೇ ನಡೆಯುತ್ತಿರಲಿಲ್ಲ.
ನಾಗೇಂದ್ರ ಜೂ.25ರಂದೇ ಬೆಂಗಳೂರಿಗೆ ಬಂದಿದ್ದ. ರಮ್ಯಾಳ ರೂಮಿಗೆ ಬಂದು ಮದುವೆ ಆಗುವಂತೆ ಪೀಡಿಸಿದ್ದ. ಮದುವೆ ಆಗದೇ ಇದ್ದರೆ ಇಬ್ಬರೂ ಜೀವ ಬಿಡೋಣ ಅಂದಿದ್ದ. ನಿನ್ನ ಸಾಯಿಸಿ ನಾನೂ ಸಾಯ್ತಿನಿ ಎಂದು ಬೆದರಿಕೆ ಹಾಕಿದ್ದ. ಇದಕ್ಕೆಲ್ಲ ರಮ್ಯಾ ಸೊಪ್ಪು ಹಾಕದಿದ್ದಾಗ ಮತ್ತೇ ಅಂಕೋಲಾಕ್ಕೆ ಹೋಗಿ 27ನೇ ತಾರೀಕಿನಂದು ಮೂರು ನಾಡಬಾಂಬ್ ತಂದಿದ್ದ. ಮೂರರಲ್ಲಿ ಎರಡು ಸ್ಟೋಟಗೊಂಡಿತ್ತು ಎನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಜೀವಂತವಾಗಿದ್ದ ಇನ್ನೊಂದು ಬಾಂಬನ್ನು ಪೊಲೀಸರು ಸ್ಪೋಟಿಸಿದ್ರು.ಇದನ್ನೂ ಓದಿ:ಸಿನಿ ಮಾ ಮೀರಿಸೋ ಲವ್ ಟ್ರ್ಯಾಜಿಡಿ – 6 ವರ್ಷಗಳ ಪ್ರೇಮ ಪ್ರಿಯಕರನ ಸಾವಿನಲ್ಲಿ ಅಂತ್ಯ!
ಹಾಗಾದ್ರೆ ಈ ಭಯಾನಕ ನಾಡಬಾಂಬ್ ನಾಗೇಂದ್ರನಿಗೆ ಸಿಕ್ಕಿದಾದರೂ ಹೇಗೆ ಅನ್ನೋ ಪ್ರಶ್ನೆ ಎದ್ದಿದೆ. ಉತ್ತರ ಕನ್ನಡದಿಂದಲೇ ಆತ ತಂದಿರುವ ಅನುಮಾನ ಇದೆ. ಅಂಕೋಲಾ, ಯಲ್ಲಾಪುರ, ಹಳಿಯಾಳ, ದಾಂಡೇಲಿಯಿಂದ ಬಾಂಬ್ ತಂದಿರುವ ಸಾಧ್ಯತೆ ಇದೆ. ಕಾರಣ ಆ ಪ್ರದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಿಗೆ ಇದ್ದು, ಕಾಡುಪ್ರಾಣಿಗಳಿಂದ ರಕ್ಷಣೆ ಪಡೆಯಲು ನಾಡಬಾಂಬ್ ಉಪಯೋಗಿಸುತ್ತಾರೆ. ಬಹುಶಃ ಈ ಪ್ರದೇಶದಿಂದಲೇ ಬಾಂಬ್ ತಂದಿರಬೇಕು ಅನ್ನೋ ಅನುಮಾನ ಹುಟ್ಟಿದೆ.
ಅಂಕೋಲಾದಿAದ ಒಟ್ಟು ಮೂರು ನಾಡಬಾಂಬ್ ತಂದಿದ್ದ ನಾಗೇಂದ್ರ ಒಂದು ಬಾಂಬ್ ಅನ್ನು ಹೊರ ತೆಗೆಯುತ್ತಿದ್ದಂತೆಯೇ ಆತನ ಕೈಯಿಂದ ಚಾಲಕ ಪ್ರವೀಣ್ ಹೊರಗೆಸೆದಿದ್ದ. ಆಗ ತಕ್ಷಣ ಬ್ಯಾಗ್ ಒಳಗೆ ಕೈ ಹಾಕಿ ಮತ್ತೊಂದು ಬಾಂಬ್ ಅನ್ನು ನಾಗೇಂದ್ರ ಹೊರತೆಗೆದಿದ್ದಾನೆ. ಒಂದು ಬಾಂಬನ್ನ ಈಚೆ ಎಸೆದ್ರೂ ಮತ್ತೆ ಎರಡು ಬಾಂಬ್‌ಗಳನ್ನ ನಾಗೇಂದ್ರನ ಬ್ಯಾಗ್‌ನಲ್ಲಿ ಗಮನಿಸಿದ ರಮ್ಯಾ, ದಾರಿ ಕಾಣದೇ ಚಾಲಕ ಪ್ರವೀಣ್‌ಗೆ ಗಾಬರಿಯಿಂದ ಗಾಡಿಯಿಂದ ಇಳಿಯಿರಿ ಅಣ್ಣ ಬಾಂಬ್ ಇದೆ ಎಂದು ಕೂಗಿಕೊಂಡಿದ್ದಾಳೆ. ಇಬ್ಬರು ಇಳಿಯುತ್ತಿದ್ದಂತೆಯೇ ನಾಗೇಂದ್ರ ಬಾಂಬ್ ಸಿಡಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಾಡ ಬಾಂಬ್ ಜನವಸತಿ ಪ್ರದೇಶದಲ್ಲಿ ಸ್ಪೋಟಿಸಿದ್ದರೇ ನೂರಾರು ಜನರ ಪ್ರಾಣ ಹೋಗುತಿತ್ತು. ಆದರೆ ಶಿರಾ ಬಳಿಯ ಹೈವೇಯಲ್ಲಿ ಸ್ಫೋಟಿಸಿದ ಕಾರಣ ನಾಗೇಂದ್ರ ಮಾತ್ರ ಸಜೀವ ದಹನಗೊಂಡಿದ್ದಾನೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಾಡಬಾಂಬ್ ಮೂಲದ ಬೆನ್ನತ್ತಿದ ತುಮಕೂರು ಪೊಲೀಸರು ಅಂಕೋಲಾ ಪೊಲೀಸರ ಸಹಾಯ ಪಡೆದಿದ್ದಾರೆ. ವಶಕ್ಕೆ ಪಡೆದ ನಾಡಬಾಂಬ್‌ನ ಸ್ಯಾಂಪಲ್ಸ್ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ. ಎರಡೂ ಠಾಣೆಯ ಪೊಲೀಸರು ಜಂಟಿಯಾಗಿ ಬಾಂಬ್‌ನ ಮೂಲ ಕಂಡುಹಿಡಿಯಲು ಹೊರಟಿದ್ದಾರೆ.ಇದನ್ನೂ ಓದಿ: ಕಾರಲ್ಲೇ ಪ್ರೇಮಿಗಳ ಗಲಾಟೆ – ಪೆಟ್ರೋಲ್ ಬಾಂಬ್ ಸಿಡಿಸಿಕೊಂಡು ಯುವಕ ಆತ್ಮಹತ್ಯೆ
