ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನ (Monsoon Session) ನಾಳೆಯಿಂದ (ಜು.20) ಆರಂಭವಾಗುತ್ತಿದೆ. ಸೋಮವಾರಿಂದ ಆಗಸ್ಟ್ 13ರ ವರೆಗೆ ನಡೆಯಲಿರುವ ಮುಂಗಾರು ಅಧಿವೇಶನ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ.
ಲೋಕಸಭೆಯ ಡಿಲಿಮಿಟೇಷನ್ (Delimitation Bill) ಕುರಿತಾದ ಸಂವಿಧಾನದ 131 ನೇ ತಿದ್ದುಪಡಿ ಮಸೂದೆ, ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನ ಮತ್ತು ದೇಶಾದ್ಯಂತ ಏಕಕಾಲದಲ್ಲಿ ಚುನಾವಣೆಗಳನ್ನ ಕೋರುವ ಸಂವಿಧಾನದ 129ನೇ ತಿದ್ದುಪಡಿ ಮಸೂದೆ ಸೇರಿದಂತೆ ಹೆಗ್ಗುರುತು ಪ್ರಸ್ತಾಪಗಳ ಕುರಿತು ಅಧಿವೇಶನವು ತೀವ್ರ ರಾಜಕೀಯ ಸ್ಪರ್ಧೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.
2/3 ಬಹುಮತಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಸದ್ಯ ಸದನದ ವ್ಯವಹಾರಗಳ ಪಟ್ಟಿಯಲ್ಲಿ ಮಸೂದೆಗಳನ್ನು ಉಲ್ಲೇಖಿಸದಿದ್ದರೂ, ಸರ್ಕಾರವು ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನ ಪರಿಚಯಿಸುವ ಸಾಧ್ಯತೆ ಇದೆ.

ಸಂವಿಧಾನದ 368ನೇ ವಿಧಿಯ ಅಡಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಪ್ರತ್ಯೇಕವಾಗಿ ಪ್ರತಿ ಸದನದ ಒಟ್ಟು ಸದಸ್ಯತ್ವದ ಬಹುಮತದೊಂದಿಗೆ ಮತ್ತು ಹಾಜರಿರುವ ಮತ್ತು ಮತ ಚಲಾಯಿಸುವ ಕನಿಷ್ಠ 3ನೇ ಎರಡರಷ್ಟು ಸದಸ್ಯರೊಂದಿಗೆ ಅಂಗೀಕರಿಸಬೇಕಿದೆ. ರಾಜ್ಯಸಭೆಯಲ್ಲಿ ಎನ್‌ಡಿಎಗೆ ಸಮಸ್ಯೆ ಇಲ್ಲದಿದ್ದರೂ ಲೋಕಸಭೆಯಲ್ಲಿ ಮೋದಿ ಸರ್ಕಾರಕ್ಕೆ ಇನ್ನಷ್ಟು ಸಂಖ್ಯೆ ಬೇಕಾಗಬಹುದು. ಇದರ ಜೊತೆಗೆ 7 ಪ್ರಮುಖ ಬಿಲ್‌ಗಳ ಮಂಡನೆ ಆಗಲಿದೆ.
ಲೋಕಸಭೆ ಬಲಾಬಲ ಹೇಗಿದೆ?
* ಒಟ್ಟು ಸದಸ್ಯರ ಸಂಖ್ಯೆ : 545
* ಸಂವಿಧಾನ ತಿದ್ದುಪಡಿಗೆ ಅಗತ್ಯ ಮತ : 360 (2/3 ಬಹುಮತ)
* ಪ್ರಸ್ತುತ ಎನ್‌ಡಿಎ ಬಲ : 336
(2/3 ಬಹುಮತಕ್ಕೆ ಇನ್ನೂ 24 ಮತಗಳ ಕೊರತೆ ಇದೆ. ಮಾಹಿತಿಗೆ: ಬಿಜೆಪಿ ನೇತೃತ್ವದ ಎನ್‌ಡಿಎ: 298, ಎನ್‌ಸಿಪಿ (ಅಜಿತ್ ಪವಾರ್): 20, ಶಿವಸೇನೆ (ಶಿಂಧೆ ಬಣ/ಯುಬಿಟಿ ರೆಬೆಲ್ಸ್): 6, ಎನ್‌ಸಿಪಿ:8, ಎಸ್‌ಪಿ : 8, ವೈಎಸ್‌ಆರ್‌ಸಿಪಿ : 4 )

ರಾಜ್ಯಸಭೆ ಬಲಾಬಲ ಹೇಗಿದೆ?
* ಒಟ್ಟು ಸದಸ್ಯರ ಸಂಖ್ಯೆ : 244
* ಸಂವಿಧಾನ ತಿದ್ದುಪಡಿಗೆ ಅಗತ್ಯ: 162 ಮತ (2/3 ಬಹುಮತ)
* ಎನ್‌ಡಿಎ & ಬೆಂಬಲಿಗರ ಬಲ : 168
(2/3 ಬಹುಮತಕ್ಕಿಂತ 5 ಮತಗಳು ಹೆಚ್ಚಿವೆ: ಮಾಹಿತಿಗೆ: ಎನ್‌ಡಿಎ : 149, ವೈಎಸ್‌ಆರ್‌ಸಿಪಿ: 4, ಪಕ್ಷೇತರರು: 3, ಬಿಜೆಡಿ: 5, ಬಿಆರ್‌ಎಸ್: 3, ಯುಪಿಪಿಎಲ್: 2, ಬಿಎಸ್‌ಪಿ: 1, ಆರ್‌ಎಲ್‌ಎಂ: 1)
ಯಾವ್ಯಾವ ಮಸೂದೆಗಳ ಮಂಡನೆ ಸಾಧ್ಯತೆ?
* ಅಭಿವೃದ್ಧಿ ಹೊಂದಿದ ಭಾರತ ಶಿಕ್ಷಣ ಪ್ರತಿಷ್ಠಾನ ಮಸೂದೆ
* ಡೋಪಿಂಗ್ ವಿರೋಧಿ ಮಸೂದೆ
* ಆದಾಯ ತೆರಿಗೆ (ತಿದ್ದುಪಡಿ) ಮಸೂದೆ
* ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ
* ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ
* ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ
* ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (ತಿದ್ದುಪಡಿ) ಮಸೂದೆ
* ಸರ್ಕಾರವು ರಾಜ್ಯಸಭೆಯಲ್ಲಿ ವಂದೇ ಮಾತರಂ ಮಸೂದೆಯನ್ನು ಸಹ ಪರಿಚಯಿಸುವ ಸಾಧ್ಯತೆಯಿದೆ
* ಈ ವರ್ಷದ ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಪರಿಚಯಿಸಲಾದ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026 ಮತ್ತು
* ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾದ ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ, 2025 ಎಂಬ ಎರಡು ಬಾಕಿ ಇರುವ ಮಸೂದೆಗಳನ್ನ ಕೈಗೆತ್ತಿಕೊಳ್ಳಬಹುದು.
