ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಬಂಗಾಳದ ಮಾಜಿ ಸಚಿವ ಹಾಗೂ ಟಿಎಂಸಿಯ ಹಿರಿಯ ನಾಯಕ ಮಾನಸ್ ಭುನಿಯಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ (Sudip Bandyopadhyay) ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ದೀದಿಗೆ ಮತ್ತೊಂದು ಆಘಾತ ನೀಡಿದೆ.
ಮಾನಸ್ ಭುನಿಯಾ (Manas Bhunia) ತಮ್ಮ ರಾಜೀನಾಮೆ ಪತ್ರದಲ್ಲಿ ಪ್ರಸ್ತುತ ಪಕ್ಷದ ಆಂತರಿಕ ಬಿಕ್ಕಟ್ಟಿನಿಂದ ತಮಗೆ ತೀವ್ರ ಅಸಮಾಧಾನವಿದೆ ಎಂದು ತಿಳಿಸಿದ್ದಾರೆ. ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಪಶ್ಚಿಮ ಬಂಗಾಳಕ್ಕೆ ಟಾಟಾ ಗ್ರೂಪ್ ಮರಳಲಿದೆ – ಸುವೇಂದು ಅಧಿಕಾರಿ ಭರವಸೆ
ಈಗಾಗಲೇ ಟಿಎಂಸಿ ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಇಬ್ಭಾಗವಾಗಿದೆ. ಈ ಮಧ್ಯೆ ಟಿಎಂಸಿಯ ಇನ್ನೊಬ್ಬ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಶನಿವಾರ ಬಂಡಾಯ ಸಂಸದೆ ಶತಾಬ್ದಿ ರಾಯ್ ಅವರೊಂದಿಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಪಕ್ಷದ 20 ಬಂಡಾಯ ಸಂಸದರು ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ. ಈ ಸಭೆಯಲ್ಲಿ ಅವರು ತಮ್ಮ ಬಣವನ್ನು ಮೂಲ ತೃಣಮೂಲ ಕಾಂಗ್ರೆಸ್‌ನಿಂದ ಪ್ರತ್ಯೇಕ ಗುಂಪು ಎಂದು ಗುರುತಿಸಬೇಕು. ಅಷ್ಟೇ ಅಲ್ಲದೇ ಸಂಸತ್ತಿನಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿಕೊಡಬೇಕೆಂದು ಅಧಿಕೃತವಾಗಿ ವಿನಂತಿಸಲಿದ್ದಾರೆ. ಪಕ್ಷದ ಒಟ್ಟು 28 ಲೋಕಸಭಾ ಸದಸ್ಯರಲ್ಲಿ ಈಗಾಗಲೇ 19 ಸಂಸದರು ಈ ಬಂಡಾಯ ಗುಂಪನ್ನು ಬೆಂಬಲಿಸುತ್ತಿದ್ದಾರೆ ಎಂದು ಬಂಡಾಯ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಬಂಡೋಪಾಧ್ಯಾಯ ಕೂಡ ಬಂಡಾಯ ಸಂಸದರ ಬಣಕ್ಕೆ ಸೇರಿರುವುದರಿಂದ ಸಂಸದರ ಸಂಖ್ಯೆ 20ಕ್ಕೆ ಏರಿಕೆಯಾಗಲಿದೆ. ಈ ಬಂಡಾಯ ಬಣದ ನೇತೃತ್ವ ವಹಿಸಿಕೊಂಡಿರುವ ಕಾಕಲಿ ಘೋಷ್ ದಸ್ತಿದಾರ್, ತಮ್ಮ ಗುಂಪಿಗೆ ಅಧಿಕೃತ ಮಾನ್ಯತೆ ಸಿಕ್ಕರೆ ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಮಮತಾ, ಶರದ್ ಪವಾರ್ ಪಕ್ಷಗಳು ವಿಲೀನ – ‘ಅಖಂಡ ಕಾಂಗ್ರೆಸ್’ ರಚನೆಗೆ ಸಿದ್ಧತೆ?
ಸುದೀಪ್ ಅವರ ಈ ರಾಜಕೀಯ ನಡೆಯ ಬಗ್ಗೆ ಟಿಎಂಸಿ ನಾಯಕ ಕುನಾಲ್ ಘೋಷ್ ತೀವ್ರ ವಾಗ್ದಾಳಿ ನಡೆಸಿದ್ದು, ಇದು ಟಿಎಂಸಿಗೆ ಮಾಡುತ್ತಿರುವ ದ್ರೋಹ. ಮಮತಾ ಬ್ಯಾನರ್ಜಿಯವರು ಇವರನ್ನ ಅತ್ಯಂತ ಗೌರವದಿಂದ ನಡೆಸಿಕೊಂಡು ಅಧಿಕಾರ ನೀಡಿದ್ದರು. ಸುದೀಪ್ ಬಂಡೋಪಾಧ್ಯಾಯ ಅವರಿಗೆ ಮೊದಲಿನಿಂದಲೂ ಪಕ್ಷ ಬದಲಾಯಿರುವ ಚಾಳಿಯಿದೆ. ಮಮತಾ ಬ್ಯನರ್ಜಿಯವರು ಈ ಹಿಂದೆಯೇ ಈ ಬಗ್ಗೆ ಸುಳಿವು ನೀಡಿದ್ದರು. ಅದು ಈಗ ಸಾಬೀತಾಗಿದೆ. ಸುದೀಪ್ ಅವರಿಗಿರುವ ಅಧಿಕಾರದ ದುರಾಸೆಯಿಂದಲೇ ಟಿಎಂಸಿಯ ಪ್ರಮುಖ ನಾಯಕರಾದ ತಪಸ್ ರಾಯ್ ಮತ್ತು ಸಜಲ್ ಘೋಷ್ ಬಿಜೆಪಿ ಸೇರಿದರು ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಮಮತಾ ಬ್ಯಾನರ್ಜಿ ನಿವಾಸದ ಮೇಲೆ ಸಿಐಡಿ ದಾಳಿ ನಡೆಸಿದಾಗ ಸುದೀಪ್ ಅವರು ನನಗೆ ಫೋನ್ ಮಾಡಿ ತಮ್ಮ ಪತ್ನಿ ಟಿಎಂಸಿ ಶಾಸಕಿ ನಯನಾ ಅವರನ್ನು ಕರೆದುಕೊಂಡು ದೀದಿ ನಿವಾಸಕ್ಕೆ ಬರುತ್ತೇನೆ ಎಂದು ಹೇಳಿದ್ದರು. ಆದರೆ ಅವರು ಇದೀಗ ನೇರವಾಗಿ ಬಿಜೆಪಿ ಮನೆ ಬಾಗಿಲಿಗೆ ಹೋಗಿ ನಿಂತಿದ್ದಾರೆ ಎಂದು ಕುನಾಲ್ ಘೋಷ್ ವ್ಯಂಗ್ಯವಾಡಿದ್ದಾರೆ.

