ಕೋಲ್ಕತ್ತಾ: ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಟಾಟಾ ಗ್ರೂಪ್ (Tata Group) ಅನ್ನು ಮರಳಿ ಪಶ್ಚಿಮ ಬಂಗಾಳಕ್ಕೆ (West Bengal) ತರಲಿದೆ. ಸಿಂಗೂರು ಹಾಗೂ ನಂದಿಗ್ರಾಮ ಚಳವಳಿಗಳಿಗೆ ಕಾರಣವಾದ ವಿವಾದ ಮರುಕಳಿಸದಂತೆ ಕೈಗಾರಿಕಾ ಪ್ರಗತಿ ಸಾಧಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಭರವಸೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದಿನ ಎಡರಂಗ ಹಾಗೂ ತೃಣಮೂಲ ಕಾಂಗ್ರೆಸ್ ಎರಡೂ ಸರ್ಕಾರಗಳು ರಾಜ್ಯದಲ್ಲಿ ಕೈಗಾರಿಕಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಎಡರಂಗ ಸರ್ಕಾರ ಭೂಸ್ವಾಧೀನಕ್ಕೆ ಮುಂದಾಯಿತು. ಇತ್ತ ಟಿಎಂಸಿ (TMC) ಸರ್ಕಾರ ಹೂಡಿಕೆ ಮಾಡಲು ಕಂಪನಿಗಳನ್ನು ರಾಜ್ಯದತ್ತ ಆಕರ್ಷಿಸುವ ಬದಲು ಕೇವಲ ಪ್ರಚಾರಕ್ಕೆ ಸೀಮಿತವಾಗಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಭೂಸ್ವಾಧೀನ ವಿವಾದದ ಹಿನ್ನೆಲೆಯಲ್ಲಿ 2008ರಲ್ಲಿ ಹೂಗ್ಲಿ ಜಿಲ್ಲೆಯ ಸಿಂಗೂರಿನಿಂದ ಗುಜರಾತ್‌ಗೆ ಸ್ಥಳಾಂತರಗೊಂಡಿದ್ದ ಟಾಟಾ ಮೋಟಾರ್ಸ್ ನ್ಯಾನೋ ಯೋಜನೆಯ ಕುರಿತು ಮಾತನಾಡಿ, ನಾವು ಟಾಟಾ ಸಂಸ್ಥೆಯನ್ನು ಬಂಗಾಳಕ್ಕೆ ಮರಳಿ ತರುತ್ತೇವೆ. ಟಿಎಂಸಿ ಸರ್ಕಾರ ಕೈಗಾರಿಕೀಕರಣದ ಕುರಿತು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹಿಂದಿನ ಸರ್ಕಾರಗಳಂತೆ ನಾವು ಸುಳ್ಳು ಹೇಳುವುದಿಲ್ಲ ಮತ್ತು ಪ್ರಚಾರಕ್ಕಾಗಿ ಫೋಟೋ ಸೆಷನ್ ಮಾಡಿ ಸುಮ್ಮನಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ನ್ಯಾನೋ ಕೇಸ್, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್

ಭೂಸ್ವಾಧೀನ ನೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ತಮ್ಮ ಸರ್ಕಾರವು ರೈತರು ಮತ್ತು ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ಕೈಗಾರಿಕಾ ಅಭಿವೃದ್ಧಿ ಎರಡನ್ನೂ ಸರಿದೂಗಿಸುವ ಹೊಸ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಈ ಹಿಂದಿನ ಎಡರಂಗ ಸರ್ಕಾರದ ಅವಧಿಯಲ್ಲಿ ಸಿಂಗೂರು ಮತ್ತು ನಂದಿಗ್ರಾಮದ ವಿವಾದದ ರೀತಿಯಲ್ಲಿ ನಾವು ಬಲವಂತದ ಭೂಸ್ವಾಧೀನ ಮಾಡುವುದಿಲ್ಲ. ಕೈಗಾರಿಕೆಗಳನ್ನು ತರುತ್ತೇವೆ ಎಂದು ಸುಳ್ಳು ಹೇಳುತ್ತಾ, ಕೇವಲ ಫೋಟೋ ಸೆಷನ್‌ಗಳನ್ನು ಮಾಡುತ್ತಾ ಕುಳಿತುಕೊಂಡಿದ್ದ ಟಿಎಂಸಿ ಹಾಗೇ ಮಾಡುವುದಿಲ್ಲ. ಕೈಗಾರಿಕಾ ಬೆಳವಣಿಗೆಯ ಜೊತೆಗೆ ಯೋಜನೆಗಳಿಗೆ ಸಾರ್ವಜನಿಕರ ಒಪ್ಪಿಗೆ ಪಡೆಯುವ ವಿಧಾನವನ್ನು ಬಿಜೆಪಿ ಅನುಸರಿಸುತ್ತದೆ ಎಂದರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್ ಆಗಿದ್ದು ಯಾಕೆ?
