ನವದೆಹಲಿ: ಅಸ್ಸಾಂನಲ್ಲಿ (Assam) ವಿದೇಶಿಯರ ನ್ಯಾಯಾಧಿಕರಣದಿಂದ (Foreigners Tribunal) ವಿದೇಶಿಯರು ಎಂದು ಘೋಷಿಸಲ್ಪಟ್ಟಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸುವ ಮೂಲಕ 27 ಮಂದಿಗೆ ದೊಡ್ಡ ರಿಲೀಫ್ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಒಬ್ಬ ವ್ಯಕ್ತಿಯ ಪೌರತ್ವವನ್ನು(Citizenship) ಅತ್ಯಂತ ನ್ಯಾಯಯುತ ಮತ್ತು ವ್ಯವಸ್ಥಿತವಾದ ಕಾನೂನು ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಪೌರತ್ವವು ಒಬ್ಬ ವ್ಯಕ್ತಿಯ ಅಸ್ತಿತ್ವಕ್ಕೆ ಅತ್ಯಂತ ಪ್ರಮುಖವಾದುದಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿಯನ್ನು ವಿದೇಶಿ ಎಂದು ಘೋಷಿಸುವ ಮುನ್ನ ಆತನಿಗೆ ತನ್ನ ವಾದವನ್ನು ಮಂಡಿಸಲು ಸೂಕ್ತ ಮತ್ತು ನ್ಯಾಯಯುತವಾದ ಅವಕಾಶವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.
ಸೂಕ್ತ ದಾಖಲೆಗಳ ಪರಿಶೀಲನೆ ನಡೆಸದೆ ಅಥವಾ ಆರೋಪಿಗಳಿಗೆ ನೋಟಿಸ್ ತಲುಪದೆ ಏಕಪಕ್ಷೀಯವಾಗಿ (Ex-parte) ನೀಡಲಾದ ಆದೇಶಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ನ್ಯಾಯಾಧಿಕರಣದ ಆದೇಶ ರದ್ದಾಗಿದ್ದು, ಎಲ್ಲಾ 27 ಜನರ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಮತ್ತು ಕಾನೂನುಬದ್ಧವಾಗಿ, ನ್ಯಾಯಯುತವಾಗಿ ವಿಚಾರಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಮೂಲಕ ಅಸ್ಸಾಂನಲ್ಲಿ ಪೌರತ್ವದ ಗುರುತಿಸುವಿಕೆಯ ಪ್ರಕ್ರಿಯೆಯಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮಗಳನ್ನು ಪಾಲಿಸುವುದು ಅತ್ಯಂತ ಕಡ್ಡಾಯ ಎಂದು ನ್ಯಾಯಾಲಯವು ಪುನರುಚ್ಚರಿಸಿದೆ.
ಏನಿದು ಪ್ರಕರಣ?
ಅಸ್ಸಾಂನ ವಿದೇಶಿಯರ ನ್ಯಾಯಾಧಿಕರಣವು ಈ 27 ಜನರನ್ನು ಭಾರತೀಯ ನಾಗರಿಕರಲ್ಲ, ಬದಲಿಗೆ ಅಕ್ರಮ ವಲಸಿಗರು ಅಥವಾ ‘ವಿದೇಶಿಯರು’ ಎಂದು ಘೋಷಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಂತ್ರಸ್ತರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ವಿರುದ್ಧದ ವಿಚಾರಣೆಯ ಸಂದರ್ಭದಲ್ಲಿ ತಮಗೆ ಸರಿಯಾದ ನೋಟಿಸ್ ಸಿಕ್ಕಿರಲಿಲ್ಲ ಮತ್ತು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಸಲ್ಲಿಸಲು ನ್ಯಾಯಾಧಿಕರಣವು ನ್ಯಾಯಯುತ ಅವಕಾಶ ನೀಡಿರಲಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
