ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್(Stephen Fleming) ಕೆಳಗಿಳಿದಿದ್ದಾರೆ. ಈ ಮೂಲಕ ಸ್ಟೀಫನ್ ಫ್ಲೆಮಿಂಗ್ ಅವರ 17 ವರ್ಷಗಳ ಸಿಎಸ್‌ಕೆ ಪ್ರಯಾಣ ಕೊನೆಯಾಗಿದೆ.
ಮೂಲಗಳ ಪ್ರಕಾರ, ಸಿಎಸ್‌ಕೆ ತನ್ನ ಕ್ರಿಕೆಟ್ ಕಾರ್ಯಾಚರಣೆಗಳ ಪರಾಮರ್ಶೆ ನಡೆಸುತ್ತಿದ್ದು, ಭಾರತದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ(Hemang Badani) ಹೊಸ ಕೋಚಿಂಗ್ ಬಳಗವನ್ನು ಸೇರಿಕೊಳ್ಳುವ ಪ್ರಮುಖ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ (CSKCL) ಪೂರ್ಣಾವಧಿ ನಿರ್ದೇಶಕಿ ಹಾಗೂ ಎನ್. ಶ್ರೀನಿವಾಸನ್ ಅವರ ಪುತ್ರಿ ರೂಪಾ ಗುರುನಾಥ್ ಈ ಮಹತ್ವದ ನಿರ್ಧಾರದ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ್ದಾರೆ.
OFFICIAL ANNOUNCEMENT
The Super Kings and Head Coach Stephen Fleming have mutually decided to part ways.
Together, we shared one of the most successful and enduring partnerships in IPL history. The legacy you’ve built will continue to inspire us.With immense respect and… pic.twitter.com/qjvb4oZUuU
— Chennai Super Kings (@ChennaiIPL) July 13, 2026
ನಮ್ಮ ಫ್ರಾಂಚೈಸಿಯ ಇಡೀ ಜರ್ನಿಯಲ್ಲಿ ಸ್ಟೀಫನ್ ಫ್ಲೆಮಿಂಗ್ ನಮ್ಮ ಕೋಚಿಂಗ್ ವಿಭಾಗದ ಹೃದಯ ಬಡಿತದಂತಿದ್ದರು. ಸುಮಾರು ಎರಡು ದಶಕಗಳ ಕಾಲ ಅವರು ನಮ್ಮ ತಂಡದ ಗುರುತು, ದೃಷ್ಟಿಕೋನ ಮತ್ತು ಶ್ರೇಷ್ಠತೆಯನ್ನು ರೂಪಿಸಲು ನೆರವಾಗಿದ್ದಾರೆ. ಮೈದಾನದಲ್ಲಿ ನಮ್ಮ ಜಂಟಿ ಪಯಣ ಮುಕ್ತಾಯಗೊಂಡಿದ್ದರೂ ಅವರು ಯಾವಾಗಲೂ ಸಿಎಸ್‌ಕೆ ಪರಂಪರೆಯ ಅವಿಭಾಜ್ಯ ಅಂಗವಾಗಿರುತ್ತಾರೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
2008 ರಲ್ಲಿ ಚೆನ್ನೈ ತಂಡವನ್ನು ಆಟಗರಾನಗಿ ಸೇರಿದ್ದ ಫ್ಲೆಮಿಂಗ್ 2009 ರಲ್ಲಿ ಕೋಚ್ ಹುದ್ದೆಯನ್ನು ಅಲಂಕರಿಸಿದರು. ಆರಂಭಿಕ ವರ್ಷಗಳಲ್ಲಿ ಸಿಎಸ್‌ಕೆ ತಂಡವನ್ನು 11 ಬಾರಿ ಫೈನಲ್‌ಗೆ ಮುನ್ನಡೆಸಿ, 6 ಪ್ರಶಸ್ತಿಗಳನ್ನು (10 ಐಪಿಎಲ್ ಫೈನಲ್ಸ್, 1 ಚಾಂಪಿಯನ್ಸ್ ಲೀಗ್) ತಂದುಕೊಟ್ಟಿದ್ದ ಫ್ಲೆಮಿಂಗ್ ಅವರಿಗೆ ಇತ್ತೀಚಿನ ವರ್ಷಗಳು ನಿರಾಶಾದಾಯಕವಾಗಿದ್ದವು. 2024ರಲ್ಲಿ ಪ್ಲೇಆಫ್ ತಪ್ಪಿಸಿಕೊಂಡಿದ್ದ ಸಿಎಸ್‌ಕೆ, ಆನಂತರದ ಸೀಸನ್‌ಗಳಲ್ಲಿ ಕ್ರಮವಾಗಿ 10ನೇ ಮತ್ತು 8ನೇ ಸ್ಥಾನಕ್ಕೆ ಕುಸಿದಿತ್ತು. ಇದನ್ನೂ ಓದಿ: 1,605 ದಿನಗಳ ಬಳಿಕ ನಂ.1 ಪಟ್ಟ ಕಳೆದುಕೊಂಡ ಭಾರತ – ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಆಂಗ್ಲಪಡೆ

ಫ್ಲೆಮಿಂಗ್ ಹೆಡ್ ಕೋಚ್ ಆಗಿರುವ ದಕ್ಷಿಣ ಆಫ್ರಿಕಾದ ಜೋಬರ್ಗ್ ಸೂಪರ್ ಕಿಂಗ್ಸ್ (SA20) ಹಾಗೂ ಅಮೆರಿಕದ ಟೆಕ್ಸಾಸ್ ಸೂಪರ್ ಕಿಂಗ್ಸ್ (MLC) ತಂಡಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲವಾಗಿದ್ದವು. ಟೆಕ್ಸಾಸ್ ತಂಡವು ಪ್ರಸ್ತುತ ಸೀಸನ್‌ನಲ್ಲಿ 10 ಪಂದ್ಯಗಳಲ್ಲಿ ಕೇವಲ 3 ಗೆಲುವಿನೊಂದಿಗೆ ಕೊನೆಯ ಸ್ಥಾನ ಪಡೆದಿತ್ತು.
ಪ್ರಸ್ತುತ ಡಲ್ಲಾಸ್‌ನಲ್ಲಿ ಬೀಡುಬಿಟ್ಟಿರುವ ಸಿಎಸ್‌ಕೆ ಉನ್ನತಾಧಿಕಾರಿಗಳು ತಂಡದ ಭವಿಷ್ಯದ ಕಾರ್ಯತಂತ್ರಗಳು, ಆಟಗಾರರ ಟ್ರೇಡಿಂಗ್ ಹಾಗೂ ನಾಯಕತ್ವದ ಬದಲಾವಣೆಯ ಬಗ್ಗೆಯೂ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ರೇಸ್‌ನಲ್ಲಿ ಬದಾನಿ:
ಕಳೆದ ಎರಡು ಸೀಸನ್‌ಗಳಲ್ಲಿ (2025 ಮತ್ತು 2026) ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಭಾರತದ ಮಾಜಿ ಆಟಗಾರ ಹೇಮಂಗ್ ಬದಾನಿ ಅವರನ್ನು ಸಿಎಸ್‌ಕೆ ಕೋಚಿಂಗ್ ಜವಾಬ್ದಾರಿಗೆ ತರಲು ಮಾತುಕತೆಗಳು ನಡೆಯುತ್ತಿವೆ. ಬದಾನಿ ಮಾರ್ಗದರ್ಶನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ 2025 ಹಾಗೂ 2026 ರಲ್ಲಿ ಕ್ರಮವಾಗಿ 5ನೇ ಮತ್ತು 6ನೇ ಸ್ಥಾನ ಪಡೆದುಕೊಂಡಿತ್ತು.
