– ಇತಿಹಾಸದಲ್ಲಿ ಫಸ್ಟ್‌ಟೈಮ್ 4-0 ಅಂತರದಲ್ಲಿ ಸರಣಿ ಸೋತ ಇಂಡಿಯಾ
ಸೌತಾಂಪ್ಟನ್: ಕ್ರಿಕೆಟ್ ಶಿಶುಗಳಾದ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ 2-0 ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ್ದ ವಿಶ್ವಚಾಂಪಿಯನ್ ಭಾರತ ತಂಡ (Team India) ಇದೀಗ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡದ ವಿರುದ್ಧ 4-0 ಅಂತರದಲ್ಲಿ ಸರಣಿ ಸೋಲು ಅನುಭವಿಸಿದೆ.

ಸೌಥಾಂಪ್ಟನ್ ನಲ್ಲಿ ನಡೆದ ಸರಣಿಯ 5ನೇ ಟಿ20 ಪಂದ್ಯದಲ್ಲಿ ಭಾರತ ತಂಡ 56 ರನ್ ಗಳಿಂದ ಹೀನಾಯ ಸೋಲು ಕಂಡಿದೆ. ಇತಿಹಾಸದಲ್ಲೇ ಫಸ್ಟ್ ಟೈಮ್ 4-0 ಅಂತರದಲ್ಲಿ ಭಾರತ ಟಿ20 ಸರಣಿಯಲ್ಲಿ ಸೋಲು ಕಂಡಿದೆ. ಇದರೊಂದಿಗೆ 4 ವರ್ಷಗಳಿಂದ ಭಾರತ ಉಳಿಸಿಕೊಂಡಿದ್ದ ನಂ.1 ಪಟ್ಟವನ್ನೂ ಕಳೆದುಕೊಂಡಿತು. 1,605(4 ವರ್ಷ, 4 ತಿಂಗಳು, 20 ದಿನ) ದಿನಗಳ ನಂತರ ಭಾರತ ತಂಡದ ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದೆ. ಸರಣಿ ಪ್ರಾರಂಭಕ್ಕೂ ಮುನ್ನ 2ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ ಇದೀಗ ಭಾರತವನ್ನು ಸೋಲಿಸಿ ನಂ.1 ಸ್ಥಾನವನ್ನೂ ಕಿತ್ತುಕೊಂಡಿದೆ.

ದಿ ರೋಸ್ ಬೌಲ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ (England Team) ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 257 ರನ್ ಕಲೆ ಹಾಕಿತು. ಬೃಹತ್ ರನ್ ಗುರಿ ಬೆನ್ನಟ್ಟಿದ ಭಾರತ 8 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಬಟ್ಲರ್- ಬ್ರೂಕ್ 233 ರನ್ ಜೊತೆಯಾಟ
ಮೊದಲು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ತಂಡ 2ನೇ ಓವರ್ ನಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಜೋಸ್ ಬಟ್ಲರ್ (64 ಎಸೆತದಲ್ಲಿ 131 ರನ್) ಮತ್ತು ನಾಯಕ ಹ್ಯಾರಿ ಬ್ರೂಕ್ (45 ಎಸೆತದಲ್ಲಿ 95 ರನ್ ) ಅವರ 233 ರನ್ ಗಳಾದ ಜೊತೆಯಾಟ ಪಂದ್ಯ ಭಾರತದಿಂದ ಕಸಿದುಕೊಂಡಿತು. ಭಾರತದ ಪರ ಶಿವಂ ದುಬೆ 2 ವಿಕೆಟ್ ಮತ್ತು ಪ್ರಸಿದ್ಧ ಕೃಷ್ಣ 1 ವಿಕೆಟ್ ಪಡೆದರು.

ಇದು ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಟಿ20 ಪಂದ್ಯದಲ್ಲಿ ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಅದೇ ರೀತಿ ಬಟ್ಲರ್ ಗಳಿಸಿದ 131 ರನ್ ಟಿ20 ಮಾದರಿಯಲ್ಲಿ ಇಂಗ್ಲೆಂಡ್ ಬ್ಯಾಟರ್ ಒಬ್ಬ ಭಾರತದ ವಿರುದ್ಧ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಪಂದ್ಯದಲ್ಲಿ ಶತಕದೊಂದಿಗೆ 2 ಕ್ಯಾಚ್ ಗಳನ್ನು ಪಡೆದ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನು ಸರಣಿಯಲ್ಲಿ 229 ರನ್ ಕಲೆ ಹಾಕಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ಸ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಂ.1 ಪಟ್ಟಕ್ಕೇರಿದ ಇಂಗ್ಲೆಂಡ್
ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಭಾರತ ತಂಡ ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 1ನೇ ಸ್ಥಾನದಲ್ಲಿತ್ತು. ಸುಮಾರು 4 ವರ್ಷಗಳಿಗೂ ಅಧಿಕ ಕಾಲ ಈ ಸ್ಥಾನದಿಂದ ಟೀಂ ಇಂಡಿಯಾವನ್ನ ಯಾರಿಂದಲೂ ಇಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸೋಲು ಶ್ರೇಯಾಂಕ ಪಟ್ಟಿಯಲ್ಲಿ ಬದಲಾವಣೆ ತಂದಿದೆ. ಭಾರತ ನಂ.1 ಪಟ್ಟದಿಂದ ಕುಸಿದರೆ, ಇಂಗ್ಲೆಂಡ್ ಅಗ್ರಸ್ಥಾನಕ್ಕೆ ನೆಗೆದಿದೆ.
