ಚೆನ್ನೈ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಎಐಎಡಿಎಂಕೆ (AIADMK) ಪಕ್ಷದ ಎಸ್ ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ಬಣದ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.
ಮರಗತಂ ಕುಮಾರ್‌ವೇಲ್ (ಮಧುರಾಂತಕಂ ಕ್ಷೇತ್ರ), ಜಯಕುಮಾರ್ (ಪೆರುಂದುರೈ ಕ್ಷೇತ್ರ), ಸತ್ಯಭಾಮಾ (ಧಾರಾಪುರಂ ಕ್ಷೇತ್ರ) ಅವರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿರುವ ಈ ಮೂವರು ಶಾಸಕರು ಸಚಿವ ಆಧವ್ ಅರ್ಜುನ್ ಅವರನ್ನು ಭೇಟಿಯಾಗಿ ಟಿವಿಕೆ ಸೇರಿದರು. ಇದರೊಂದಿಗೆ ತಮಿಳುನಾಡು ವಿಧಾನಸಭೆಯಲ್ಲಿ ಇನ್ನೂ ಮೂರು ಸ್ಥಾನಗಳು ಖಾಲಿಯಾಗಿವೆ. ಸಿಎಂ ವಿಜಯ್ ರಾಜೀನಾಮೆ ನಂತರ ತಿರುಚ್ಚಿ ಪೂರ್ವ ಕ್ಷೇತ್ರವು ಮೊದಲೇ ಖಾಲಿಯಾಗಿತ್ತು.
ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯ ನಂತರ ಎಐಎಡಿಎಂಕೆಯಲ್ಲಿ ತೀವ್ರ ಆಂತರಿಕ ಕಲಹ ಏರ್ಪಟ್ಟಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರ ವಿರುದ್ಧ ಬಂಡಾಯ ಎದ್ದಿರುವ ಎಸ್ ಪಿ ವೇಲುಮಣಿ ಮತ್ತು ಸಿ.ವಿ ಷಣ್ಮುಗಂ ನೇತೃತ್ವದ ಸುಮಾರು 30 ಶಾಸಕರ ಗುಂಪು, ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರಕ್ಕೆ ಬೆಂಬಲ ಘೋಷಿಸಿತ್ತು.
ಇತ್ತೀಚೆಗೆ ನಡೆದ ವಿಧಾನಸಭೆಯ ಕಲಾಪದಲ್ಲಿ ಈ ಬಂಡಾಯ ಶಾಸಕರು ಎಐಎಡಿಎಂಕೆ ಪಕ್ಷದ ಅಧಿಕೃತ ವಿಪ್ (Whip) ಉಲ್ಲಂಘಿಸಿ, ಮುಖ್ಯಮಂತ್ರಿ ವಿಜಯ್ ಸರ್ಕಾರದ ಪರವಾಗಿ ವಿಶ್ವಾಸಮತ ಚಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ್ರೋಹ ಎಸಗಿದ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಇಪಿಎಸ್ ನೇತೃತ್ವದ ಎಐಎಡಿಎಂಕೆ ನಾಯಕತ್ವವು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿತ್ತು. ಅನರ್ಹತೆಯ ಕಾನೂನು ಕ್ರಮ ಎದುರಿಸುವ ಮುನ್ನವೇ ಎಚ್ಚೆತ್ತುಕೊಂಡಿರುವ ಈ ಮೂವರು ಶಾಸಕರು, ಈಗ ತಾವಾಗಿಯೇ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
