ನವದೆಹಲಿ: ಜನಪ್ರಿಯ ಟ್ರೂ-ಕ್ರೈಮ್ ವೆಬ್‌ಸಿರೀಸ್ ʻದಿ ಸ್ಟೇರ್‌ಕೇಸ್ʼ (The Staircase) ನಿಂದ ಹತ್ಯೆಯ ತಂತ್ರ ಕಲಿತಿದ್ದೇನೆ ಎಂದು ಹೇಳಿಕೊಂಡಿರುವ 62 ವರ್ಷದ ಟೆಕ್ಕಿಯೊಬ್ಬ (ಸಾಫ್ಟ್‌ವೇರ್ ಕನ್ಸಲ್ಟೆಂಟ್) ತನ್ನ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು, ಸುಮಾರು 12.75 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಆಸ್ತಿ ವಿವಾದಕ್ಕಾಗಿ (Property Dispute) ಹೆಂಡತಿಯನ್ನು ಕೊಂದು, ಕೊಲೆಗೆ ಬಳಸಿದ ಆಯುದ್ಧವನ್ನು ಎಸೆದು ತನಿಖಾಧಿಕಾರಿಗಳನ್ನ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ.
ಘಟನೆ ನಡೆದಿದ್ದು ಹೇಗೆ?
ಪೊಲೀಸರ (Delhi Police) ಮಾಹಿತಿ ಪ್ರಕಾರ, ಘಟನೆ ನಡೆದ ದಿನ ದಂಪತಿ ಮಾತ್ರ ಮನೆಯಲ್ಲಿದ್ದರು. ಪುತ್ರ ಗ್ರಂಥಾಲಯಕ್ಕೆ, ಪುತ್ರಿ ಕಚೇರಿಗೆ ತೆರಳಿದ್ದರೆ, ಮನೆ ಕೆಲಸದವರು ಸಹ ಕೆಲಸ ಮುಗಿಸಿ ಹೊರಟಿದ್ದರು. ಮಧ್ಯಾಹ್ನ ಸುಮಾರು 12.45ರ ವೇಳೆಗೆ ಕೋಮಲ್ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುತ್ತಿದ್ದಾಗ, ಕಮಲ್ ಹಿಂಬದಿಯಿಂದ ಕತ್ತಿಯಿಂದ ತಲೆಗೆ ಹೊಡೆದಿದ್ದಾನೆ.
ಮೊದಲ ಹೊಡೆತದಿಂದ ಕೋಮಲ್ ಕುಸಿದು ಬೀಳಲಿಲ್ಲ, ಜೋರಾಗಿ ಕಿರುಚಿ ಅಡುಗೆಮನೆಗೆ ಓಡಿದ್ದಾರೆ. ಬಳಿಕ ಆರೋಪಿ ಆಕೆಯನ್ನ ಕೂದಲಿನಿಂದ ಎಳೆದು ಹಾಲ್‌ಗೆ ಕರೆತಂದು ಕತ್ತರಿಯಿಂದ ಹಲವು ಬಾರಿ ಇರಿದು ಹತ್ಯೆಗೈದಿದ್ದಾನೆ.

ಪೊಲೀಸರ ಪ್ರಕಾರ, ಮಹಿಳೆಯ ಕಿರುಚಾಟ ನೆರೆಹೊರೆಯವರಿಗೆ ಕೇಳಿಸಿದ್ದರೂ ಯಾರೂ ಮಧ್ಯಪ್ರವೇಶ ಮಾಡಿಲ್ಲ. ಆರೋಪಿಯ ತಂದೆ ವಿಚಾರಿಸಲು ಹೇಳಿದ್ದರೂ, ಅವರ ಪತ್ನಿ ʻಅವರ ವೈಯಕ್ತಿಕ ವಿಚಾರಕ್ಕೆ ಹೋಗಬೇಡಿʼ ಎಂದು ಹೇಳಿದ್ದರಿಂದ ಯಾರೂ ಮನೆಯತ್ತ ಸುಳಿದಿಲ್ಲ ಎಂದು ತಿಳಿದುಬಂದಿದೆ.
ಹತ್ಯೆಯ ಬಳಿಕ ಕಮಲ್ ರಕ್ತದ ಕಲೆಗಳಿದ್ದ ಬಟ್ಟೆ ಹಾಗೂ ಕತ್ತಿಯನ್ನ ಬ್ಯಾಗ್‌ನಲ್ಲಿ ಹಾಕಿ ಸುಮಾರು 15 ನಿಮಿಷಗಳ ಕಾಲ ಸ್ನಾನ ಮಾಡಿ, ಬಳಿಕ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಮಾರ್ಗಮಧ್ಯೆ ಕೊಲೆಗೆ ಬಳಸಿದ ಕತ್ತಿಯಿದ್ದ ಬ್ಯಾಗನ್ನ ಎಸೆದಿದ್ದಾನೆ. ನಂತರ 2 ಬ್ಯಾಂಕ್ ಖಾತೆಗಳಿಂದ ಸುಮಾರು 7 ಲಕ್ಷ ರೂ. ಹಣವನ್ನ ಡ್ರಾ ಮಾಡಿಕೊಂಡಿದ್ದು, ಪತ್ನಿಯ ಕೊಠಡಿಯಿಂದ ಈಗಾಗಲೇ ತೆಗೆದುಕೊಂಡಿದ್ದ 5 ಲಕ್ಷ ರೂ. ನಗದು ಸೇರಿ ಒಟ್ಟು ಸುಮಾರು 12.75 ಲಕ್ಷ ರೂ. ಹಣವನ್ನ ತನ್ನೊಂದಿಗೆ ತೆಗೆದುಕೊಂಡಿದ್ದಾನೆ.
ಇದೇ ವೇಳೆ, ದಂಪತಿಯ 26 ವರ್ಷದ ಪುತ್ರ ಗೌರವ್ ಸಿಂಗ್ ತಾಯಿಗೆ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ರಾತ್ರಿ ಸುಮಾರು 9.15ಕ್ಕೆ ಮನೆಗೆ ಬಂದಾಗ, ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನಾ ಸ್ಥಳದಲ್ಲಿ ಹತ್ಯೆಗೆ ಬಳಸಿದ್ದ ಕತ್ತರಿ ಪತ್ತೆಯಾದರೂ, ಕತ್ತಿ ಮಾತ್ರ ಕಾಣೆಯಾಗಿತ್ತು. ಆರೋಪಿ ನಾಪತ್ತೆಯಾಗಿದ್ದರಿಂದ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ನಿಗಾವಳಿ ಹಾಗೂ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಆರಂಭಿಸಿದರು.

ಮೊದಲಿಗೆ ಮೊಬೈಲ್ ಆನ್ ಮಾಡಿಕೊಂಡು ಗೋರಖ್‌ಪುರದತ್ತ ತೆರಳಿದ್ದ ಕಮಲ್, ಪೊಲೀಸರು ನೇಪಾಳಕ್ಕೆ ಪರಾರಿಯಾಗಿದ್ದಾನೆ ಎಂದು ಭಾವಿಸುವಂತೆ ಮಾಡಿದ್ದ. ಬಳಿಕ ಗೋರಖ್‌ಪುರ ತಲುಪಿದ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಮಥುರಾಕ್ಕೆ ತೆರಳಿ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದಾನೆ.
3 ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ದೆಹಲಿ ಪೊಲೀಸರು ಮಥುರಾ ರೈಲು ನಿಲ್ದಾಣದ ಸಮೀಪ ಆರೋಪಿಯನ್ನ ಬಂಧಿಸಿದರು. ಆತನ ಬಳಿಯಿದ್ದ ಸ್ಕೂಟರ್ ಹಾಗೂ ಸಂಪೂರ್ಣ ಹಣವನ್ನ ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ, ‘ದಿ ಸ್ಟೇರ್‌ಕೇಸ್’ ವೆಬ್‌ಸಿರೀಸ್‌ನಲ್ಲಿ ತೋರಿಸಿದ ರೀತಿಯಲ್ಲೇ ಹತ್ಯೆಯ ಆಯುಧವನ್ನ ನಾಶಪಡಿಸಿದರೆ ಸಾಕ್ಷ್ಯ ದುರ್ಬಲವಾಗುತ್ತದೆ ಎಂಬ ಉದ್ದೇಶದಿಂದ ಕತ್ತಿಯನ್ನು ಬಿಸಾಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಅಲ್ಲದೇ, ನೇಪಾಳಕ್ಕೆ ಪರಾರಿಯಾಗುವ ಯೋಜನೆಯೂ ಇತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರ ತನಿಖೆಯಲ್ಲಿ, ಕಳೆದ 1 ವರ್ಷದಿಂದ ದಂಪತಿಯ ದಾಂಪತ್ಯ ಜೀವನದಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದವು ಎಂಬುದು ಗೊತ್ತಾಗಿದೆ. ಮುಂಬೈ ಪ್ರವಾಸದ ವೇಳೆ ಕಮಲ್ ಮತ್ತೊಬ್ಬ ಮಹಿಳೆಯೊಂದಿಗೆ ಆಪ್ತವಾಗಿದ್ದ ವಿಚಾರವೂ ಕುಟುಂಬ ಕಲಹಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಪ್ರತ್ಯೇಕ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ಜೊತೆಗೆ, ಜಗತ್‌ಪುರಿಯಲ್ಲಿ ಖರೀದಿಸಲು ಉದ್ದೇಶಿಸಿದ್ದ ಆಸ್ತಿಯನ್ನು ತನ್ನ ತಂದೆಯ ಹೆಸರಲ್ಲಿ ನೋಂದಾಯಿಸಲು ಕಮಲ್ ಬಯಸಿದ್ದರೆ, ಅದರಲ್ಲಿ ಪಾಲು ಬೇಕೆಂದು ಪತ್ನಿ ಕೋಮಲ್ ಒತ್ತಾಯಿಸುತ್ತಿದ್ದರು. ಇದೇ ಆಸ್ತಿ ವಿವಾದವೇ ಈ ಭೀಕರ ಹತ್ಯೆಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.



