ಬೆಂಗಳೂರು: ಪಶ್ಚಿಮಘಟ್ಟದ ಸಂಪೂರ್ಣ ಪ್ರದೇಶವನ್ನು ಒಂದೇ ನಿಯಮದಡಿ ತರುವ ಬದಲು, ದಟ್ಟ ಅರಣ್ಯ ಪ್ರದೇಶಗಳಿಗೆ ಮಾತ್ರ ಕಠಿಣ ಪರಿಸರ ಸಂರಕ್ಷಣಾ ಕ್ರಮಗಳನ್ನು ರೂಪಿಸಬೇಕು. ಈ ಕುರಿತು ರಾಜ್ಯ ಸರ್ಕಾರವೇ ತಜ್ಞರ ಸಮಿತಿ ರಚಿಸಿ ಸಮಗ್ರ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (B.K Hariprasad) ಒತ್ತಾಯಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ಪಶ್ಚಿಮಘಟ್ಟ (Western Ghats) ಹಾಗೂ ಕಸ್ತೂರಿ ರಂಗನ್ ವರದಿ (Kasturirangan Report) ಕುರಿತು ಮಾತನಾಡಿದ ಅವರು, ಪರಿಸರವಾದಿಗಳ ಹೋರಾಟದ ಹಿನ್ನೆಲೆಯಲ್ಲಿ ಗಾಡ್ಗಿಲ್ ಹಾಗೂ ಕಸ್ತೂರಿ ರಂಗನ್ ವರದಿಗಳು ರೂಪುಗೊಂಡಿವೆ. ಗುಜರಾತ್‌ನಿಂದ ಕೇರಳದವರೆಗೆ ಪಶ್ಚಿಮಘಟ್ಟ ವ್ಯಾಪಿಸಿದ್ದು, ವರದಿಗಳ ಪರಿಣಾಮ ಈ ವ್ಯಾಪ್ತಿಯ ಎಲ್ಲ ರಾಜ್ಯಗಳ ಮೇಲೂ ಆಗಲಿದೆ ಎಂದರು.
ಕರ್ನಾಟಕದಲ್ಲಿ ವಿಶೇಷವಾಗಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಲವು ಗ್ರಾಮಗಳಿಗೆ ವರದಿಯಿಂದ ಆತಂಕ ಎದುರಾಗಿದೆ. ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಯ ಜತೆಗೆ ಅಲ್ಲಿನ ಜನರ ಬದುಕು ಹಾಗೂ ಜೀವನೋಪಾಯವನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಸ್ಯಾಟಲೈಟ್ ಮ್ಯಾಪಿಂಗ್ ಒಪ್ಪಲು ಸಾಧ್ಯವಿಲ್ಲ
“ಕಸ್ತೂರಿ ರಂಗನ್ ವರದಿಯ ಸ್ಯಾಟಲೈಟ್ ಮ್ಯಾಪಿಂಗ್ ಅನ್ನು ಒಪ್ಪಲು ಸಾಧ್ಯವಿಲ್ಲ. ಸ್ಯಾಟಲೈಟ್‌ನಲ್ಲಿ ಹಸಿರು ಕಾಣುತ್ತದೆ ಎಂದ ಮಾತ್ರಕ್ಕೆ ಅದು ಸಂಪೂರ್ಣ ಕಾಡು ಎಂದು ಹೇಳಲು ಸಾಧ್ಯವಿಲ್ಲ. ಸ್ಥಳೀಯ ಪರಿಸ್ಥಿತಿ, ಜನಜೀವನ ಹಾಗೂ ಭೌಗೋಳಿಕ ವಾಸ್ತವಾಂಶಗಳನ್ನು ಪರಿಗಣಿಸಬೇಕು” ಎಂದರು.
ಅರಣ್ಯ ಪ್ರದೇಶಗಳಲ್ಲಿ ಹಣವಂತರು ರೆಸಾರ್ಟ್‌ಗಳನ್ನು ನಿರ್ಮಿಸುತ್ತಿರುವುದು ಹಾಗೂ ಅನಿಯಂತ್ರಿತ ಚಟುವಟಿಕೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಇಂತಹ ಬೆಳವಣಿಗೆಗಳೇ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಠಿಣ ವರದಿಗಳು ರೂಪುಗೊಳ್ಳಲು ಕಾರಣವಾಗಿವೆ.
ಜನರು ಜಾಗೃತರಾಗಿರುವುದರಿಂದಲೇ ಪಶ್ಚಿಮಘಟ್ಟದ ಪರಿಸರ ಸಾಕಷ್ಟು ಮಟ್ಟಿಗೆ ಉಳಿದಿದೆ. ನದಿ ಮೂಲಗಳನ್ನು ಸಂರಕ್ಷಿಸಬೇಕು. ಸ್ಥಳೀಯರಿಗೆ ಕೃಷಿ ಆಧಾರಿತ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ಸರ್ಕಾರ ಪರಿಸರವನ್ನು ಕಾಪಾಡುವಲ್ಲಿ ವಿಫಲವಾಗಿದ್ದು, ಹಲವು ಸಂದರ್ಭಗಳಲ್ಲಿ ಅರಣ್ಯವನ್ನು ಜನರೇ ಸಂರಕ್ಷಿಸಿದ್ದಾರೆ ಎಂದು ಅವರು ಆರೋಪಿಸಿದರು.
ಕೈಗಾ ವಿಸ್ತರಣೆಗೆ ವಿರೋಧ
ಈಗಾಗಲೇ ಕೈಗಾದಲ್ಲಿ ಅಣು ವಿದ್ಯುತ್ ಸ್ಥಾವರ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದು ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದಕ್ಕೆ ಅವಕಾಶ ನೀಡಬಾರದು. ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರ ಸಾಗಣೆಗೂ ಸರ್ಕಾರದ ವ್ಯವಸ್ಥೆಯಲ್ಲಿನ ಲೋಪಗಳು ಕಾರಣವಾಗಿವೆ. ಮರಗಳ ಕಳ್ಳಸಾಗಣೆದಾರರಿಗೆ ಅವಕಾಶ ಸಿಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬ ನಿಲುವನ್ನು ಒಪ್ಪಬೇಕಾಗಿದೆ. ಆದರೆ ಮರಳು ಗಣಿಗಾರಿಕೆಗೆ ಅವಕಾಶ ನೀಡಬೇಕೇ, ಬೇಡವೇ ಎಂಬುದನ್ನು ಸ್ಥಳೀಯ ಪರಿಸರ ಹಾಗೂ ಜನಜೀವನದ ವಾಸ್ತವಾಂಶಗಳನ್ನು ಆಧರಿಸಿ ನಿರ್ಧರಿಸಬೇಕು ಎಂದರು. ಹೋಂಸ್ಟೇ ಹಾಗೂ ಪ್ರವಾಸೋದ್ಯಮದಿಂದ ಪಶ್ಚಿಮಘಟ್ಟ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆಯ ಜತೆಗೆ ಸ್ಥಳೀಯರ ಜೀವನೋಪಾಯಕ್ಕೂ ಆದ್ಯತೆ ನೀಡಬೇಕು.
ಶರಾವತಿ ಯೋಜನೆ – ಸಮರ್ಪಕ ಪುನರ್ವಸತಿ ಕಲ್ಪಿಸಲಾಗಿಲ್ಲ
ಶರಾವತಿ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಈವರೆಗೂ ಸಮರ್ಪಕ ಪುನರ್ವಸತಿ ಕಲ್ಪಿಸಲಾಗಿಲ್ಲ. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಭೂಮಿ ಕಳೆದುಕೊಳ್ಳುವ ಸ್ಥಳೀಯರ ಸಮಸ್ಯೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
“ಪಶ್ಚಿಮಘಟ್ಟದ ಸಂಪೂರ್ಣ ಪ್ರದೇಶವನ್ನು ಒಂದೇ ರೀತಿಯಲ್ಲಿ ಪರಿಗಣಿಸುವ ಬದಲು, ಪರಿಸರ ಸೂಕ್ಷ್ಮ ಮತ್ತು ದಟ್ಟ ಅರಣ್ಯ ಪ್ರದೇಶಗಳನ್ನು ಗುರುತಿಸಿ ಪ್ರತ್ಯೇಕ ಸಂರಕ್ಷಣಾ ಕ್ರಮ ರೂಪಿಸಬೇಕು. ರಾಜ್ಯದ ತಜ್ಞರ ಸಮಿತಿ ರಚಿಸಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಅದರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುವುದು ಸೂಕ್ತ” ಎಂದರು.


