ಮುಂಬೈ: ಐಐಟಿ ಬಾಂಬೆಯ(IIT Bombay) 22 ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ(Sahil Wakode) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ವ್ಯವಹಾರಗಳ ಡೀನ್ ಸ್ಥಾನದಿಂದ ಮುಕ್ತಗೊಳಿಸಲಾಗಿದ್ದ ಪ್ರೊ. ಸೂರ್ಯನಾರಾಯಣ ದೂಲ್ಲಾ(Prof Suryanarayana Doolla) ಅವರ ಬೆಂಬಲಕ್ಕೆ ಸಂಸ್ಥೆಯ ಬೋಧಕ ವರ್ಗದ ವೇದಿಕೆ ನಿಂತಿದೆ.
ವಿದ್ಯಾರ್ಥಿ ಸಾವಿನ ಕುರಿತು ಮುಕ್ತ ಹಾಗೂ ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರೊ. ದೂಲ್ಲಾ ಅವರನ್ನು ಕೇವಲ ಆಡಳಿತಾತ್ಮಕ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆಯೇ ಹೊರತು, ಅವರು ಎಂದಿನಂತೆ ಸಂಸ್ಥೆಯ ಬೋಧಕರಾಗಿ ಮುಂದುವರಿಯಲಿದ್ದಾರೆ ಎಂದು ವೇದಿಕೆ ಸ್ಪಷ್ಟಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಫ್ಯಾಕಲ್ಟಿ ಫೋರಂ ಅಧ್ಯಕ್ಷ ಪ್ರೊ. ರಾಜಕುಮಾರ್ ಎಸ್. ಪಂತ್, ಪ್ರೊ. ಸೂರ್ಯನಾರಾಯಣ ದೂಲ್ಲಾ ಅವರನ್ನು ಐಐಟಿ ಬಾಂಬೆ ಸೇವೆಯಿಂದ ಅಮಾನತುಗೊಳಿಸಿಲ್ಲ. ಅವರು ಸಂಸ್ಥೆಯ ಗೌರವಾನ್ವಿತ ಬೋಧಕ ಸದಸ್ಯರಾಗಿಯೇ ಮುಂದುವರಿದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಮಾಧ್ಯಮಗಳ ವರದಿ ಸುಳ್ಳು ಎಂದಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಆಗಿದ್ದ ಅವಧಿಯಲ್ಲಿ ದೂಲ್ಲಾ ಅವರು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಲವು ಉಪಕ್ರಮಗಳನ್ನು ಜಾರಿಗೆ ತಂದಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರೊ. ದೂಲ್ಲಾ ಕುರಿತ ಸುಳ್ಳು ಹಾಗೂ ಹಾದಿತಪ್ಪಿಸುವ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವೇದಿಕೆ, ಅವರ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಎಂದು ಹೇಳಿತು. ಅಲ್ಲದೆ ಪ್ರೊಫೆಸರ್ ದೂಲ್ಲಾ ಅವರಿಗೆ ಬೆಂಬಲ ಸೂಚಿಸಲು ನಂದನ್ ನಿಲೇಕಣಿ ಮುಖ್ಯ ಕಟ್ಟಡದಿಂದ ಕ್ಯಾಂಪಸ್‌ನಲ್ಲಿ ಸಾಂಕೇತಿಕ ಮೆರವಣಿಗೆಯನ್ನೂ ನಡೆಸಿದೆ.

ಎಫ್‌ಐಆರ್‌ನಲ್ಲಿ ಹೆಸರು
ವಿದ್ಯಾರ್ಥಿ ಸಾಹಿಲ್ ಸಾವಿನ ಬೆನ್ನಲ್ಲೇ ಕ್ಯಾಂಪಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಐಐಟಿ ಬಾಂಬೆ ಆಡಳಿತ ಮಂಡಳಿಯು ಪ್ರೊ. ದೂಲ್ಲಾ ಅವರನ್ನು ಆಡಳಿತ ವ್ಯವಹಾರಗಳ ಡೀನ್ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿತ್ತು. ವಿದ್ಯಾರ್ಥಿಯ ಕುಟುಂಬ ನೀಡಿದ ದೂರಿನನ್ವಯ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪ್ರೊ. ದೂಲ್ಲಾ ಹೆಸರನ್ನು ಸೇರಿಸಲಾಗಿದೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ (ಎಸ್‌ಸಿ/ಎಸ್‌ಟಿ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗ (ಕ್ರೈಂ ಬ್ರ್ಯಾಂಚ್) ಕೈಗೆತ್ತಿಕೊಂಡಿದೆ.
ಎನರ್ಜಿ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಸಾಹಿಲ್ ವಾಕೋಡೆ, ಸೆಪ್ಟೆಂಬರ್ 18 ರಂದು ಪೊವೈ ಕ್ಯಾಂಪಸ್‌ನ ತನ್ನ ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಸಾಹಿಲ್ ಸಾವಿನ ಬಳಿಕ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಶೈಕ್ಷಣಿಕ ಒತ್ತಡ, ಜಾತಿ ಆಧಾರಿತ ತಾರತಮ್ಯ ಮತ್ತು ಸಾಂಸ್ಥಿಕ ಕಿರುಕುಳವೇ ಸಾವಿಗೆ ಕಾರಣ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಸೋಮವಾರ ಐಐಟಿ ಬಾಂಬೆ ಮುಖ್ಯದ್ವಾರದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕ್ಯಾಂಪಸ್ ಮತ್ತು ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಸಾಹಿಲ್ ಅವರ ತಂದೆ ರವೀಂದ್ರ ವಾಕೋಡೆ ಮಾತನಾಡಿ, ಓರ್ವ ಪ್ರೊಫೆಸರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯಿಂದ ನನ್ನ ಮಗ ಜಾತಿ ಆಧಾರಿತ ನಿಂದನೆ ಮತ್ತು ಕಿರುಕುಳ ಎದುರಿಸುತ್ತಿದ್ದ. ಜಾತಿಯ ಕಾರಣಕ್ಕೆ ತನ್ನನ್ನು ಪದೇಪದೇ ಹೀಯಾಳಿಸಿ ಗುರಿಯಾಗಿಸಲಾಗುತ್ತಿದೆ ಎಂದು ಆತ ಹೇಳಿಕೊಂಡಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಮಗನ ನಿಗೂಢ ಸಾವಿನ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
Mumbai, Maharashtra | IIT Bombay student suicide | IIT Bombay Faculty Forum stages a campus march to support Professor Suryanarayana Doolla, who has been suspended from the deanship of IIT Bombay.
(Picture Source: A student from IIT) https://t.co/PJ6HiyiJNY pic.twitter.com/junX3KSLZN
— ANI (@ANI) September 21, 2026

