– 45 ಸಂಸದರ ಜೊತೆ ಮೋದಿ ಉಪಹಾರ
– ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರಿ
ನವದೆಹಲಿ: ಮುಂಗಾರು ಅಧಿವೇಶನದ ರಾಜಕೀಯ ಬೆಳವಣಿಗೆಗಳ ನಡುವೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (NDA) ಹೊಸದಾಗಿ ಸೇರ್ಪಡೆಗೊಂಡ ಬಂಡಾಯ ಸಂಸದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ದೆಹಲಿಯಲ್ಲಿ ವಿಶೇಷ ಉಪಹಾರ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ, ನಿಮ್ಮ ಬಗ್ಗೆ ಯಾರು ಏನು ಮಾತನಾಡುತ್ತಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ, ನಾನು ನಿಮ್ಮೊಂದಿಗಿದ್ದೇನೆ ಎಂದು ಅಭಯ ನೀಡಿದ್ದಾರೆ.
ಯಾರು ಭಾಗಿ?
ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಸುಮಾರು 45 ಸಂಸದರು ಈ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (ಎನ್‌ಸಿಪಿಐ) ಪಕ್ಷದಲ್ಲಿ ವಿಲೀನಗೊಂಡ ತೃಣಮೂಲ ಕಾಂಗ್ರೆಸ್‌ನ (TMC) 20 ಬಂಡಾಯ ಸಂಸದರು, ಉದ್ಧವ್ ಠಾಕ್ರೆ ಬಣದಿಂದ ಹೊರಬಂದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ ಸಂಸದರು, ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) 20 ಸಂಸದರು ಹಾಗೂ ಅಜಿತ್ ಪವಾರ್ ಬಣದ ಎನ್‌ಸಿಪಿಯ ಇಬ್ಬರು ಸಂಸದರು ಉಪಸ್ಥಿತರಿದ್ದರು.
ಪಶ್ಚಿಮ ಬಂಗಾಳದ (West Bengal) ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಾರ್ವಜನಿಕರೊಂದಿಗೆ ಸಂಪರ್ಕವನ್ನು ಹೆಚ್ಚಿಸುವಂತೆ ಸೂಚಿಸಿದರು. ಪಶ್ಚಿಮ ಬಂಗಾಳ ಬೆಳೆದರೆ ಮಾತ್ರ ಭಾರತ ಬೆಳೆಯುತ್ತದೆ. ಬಂಗಾಳದ ಜೊತೆಗೆ ಈಶಾನ್ಯ ರಾಜ್ಯಗಳ ಸಂಪರ್ಕ ಮತ್ತು ಅಭಿವೃದ್ಧಿಗೂ ಆದ್ಯತೆ ನೀಡಬೇಕಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ
ಪ್ರತಿಯೊಬ್ಬ ಸಂಸದರಿಗೂ ಅವರ ಸೋಶಿಯಲ್ ಮೀಡಿಯಾ ಕಾರ್ಯಕ್ಷಮತೆಯ ವರದಿಯನ್ನು ನೀಡಿ, ಡಿಜಿಟಲ್ ಸಂಪರ್ಕ ಹೆಚ್ಚಿಸಿಕೊಳ್ಳಲು ತಿಳಿಸಿದರು. ಇದನ್ನೂ ಓದಿ: ಮಹಾರಾಷ್ಟ್ರ ಡಿಸಿಎಂ ಸುನೇತ್ರಾ ಭೇಟಿಯಾದ ಪ್ರಶಾಂತ್ ಕಿಶೋರ್ – ಮೈತ್ರಿಗೆ ಸಮಸ್ಯೆಯಾಗಬಾರದು ಎಂದ ಬಿಜೆಪಿ

ಮುಂಬರುವ ಕೆಲಸಗಳ ಪ್ರಮಾಣ ದೊಡ್ಡದಾಗಿರುವುದರಿಂದ ಸಂಸದರು ಪ್ರತಿವರ್ಷ ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
ಸಭೆಯಲ್ಲಿ ಮಚ್ಛಾ ಟೀ ನೀಡಿದಾಗ, ಅದರ ವಿಶೇಷತೆಯನ್ನು ಪ್ರಧಾನಿಗೆ ವಿವರಿಸಿದ ಸಂಸದೆ ಶತಾಬ್ದಿ ರಾಯ್, ಇದು ಪಶ್ಚಿಮ ಬಂಗಾಳದಲ್ಲೂ ಲಭ್ಯವಿದೆ ಎಂದರು. ಇದೇ ವೇಳೆ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ, ಪ್ರಧಾನಿಯವರ ಸುತ್ತ ಶತಾಬ್ದಿ ರಾಯ್, ಸಾಯೋನಿ ಘೋಷ್, ಜೂನ್ ಮಲಿಯಾ ಮತ್ತು ರಚನಾ ಬ್ಯಾನರ್ಜಿ ಅವರಂತಹ ಪ್ರಸಿದ್ಧ ನಟ-ನಟಿಯರೇ ತುಂಬಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
#WATCH | Delhi | After meeting PM Modi, Rebel TMC MP and NCPI leader Shatabdi Roy says, “…We had a discussion on how to work together for the best interests of the nation…” pic.twitter.com/DKkNzA2G5k
— ANI (@ANI) August 7, 2026
ಅನರ್ಹತೆ ಭೀತಿ ಮತ್ತು ಕ್ಷೇತ್ರದ ಮತದಾರರ ಬೆಂಬಲದ ಕುರಿತು ಬಂಡಾಯ ಸಂಸದರಲ್ಲಿದ್ದ ಆತಂಕವನ್ನು ಪ್ರಧಾನಿ ಮೋದಿ ಶಮನಗೊಳಿಸಿದರು. ಅವರು ಉದ್ಧವ್ ಠಾಕ್ರೆ ಬಣದ ಮಾಜಿ ಸಂಸದರೊಂದಿಗೆ ಮರಾಠಿಯಲ್ಲಿ ಹಾಗೂ ಟಿಎಂಸಿ ಬಂಡಾಯ ಸಂಸದರೊಂದಿಗೆ ಅತ್ಯಂತ ಆತ್ಮೀಯವಾಗಿ ಸಂಭಾಷಣೆ ನಡೆಸಿದರು. ಸಭೆಯಲ್ಲಿ ಎನ್‌ಸಿಪಿಐ ಅಧ್ಯಕ್ಷೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ರಾಜನಾಥ್ ಸಿಂಗ್ ಅವರೊಂದಿಗೆ ಮುಂಚೂಣಿ ಸಾಲಿನಲ್ಲಿ ಆಸೀನರಾಗಿದ್ದರು.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಯಂತಹ ಪ್ರಮುಖ ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳನ್ನು ಅಂಗೀಕರಿಸಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ತನ್ನ ಮೈತ್ರಿಕೂಟದ ಸಂಸದರ ಸಂಖ್ಯೆಯನ್ನು ಸಕ್ರಿಯವಾಗಿ ಹೆಚ್ಚಿಸಿಕೊಳ್ಳುತ್ತಿದೆ.
ಇದೇ ವೇಳೆ, ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್ ಕ್ಷೇತ್ರದ ಮೂವರು ಎನ್‌ಸಿಪಿಐ ಸಂಸದರಾದ ಅಬು ತಾಹೇರ್ ಖಾನ್, ಖಲೀಲೂರ್ ರೆಹಮಾನ್ ಮತ್ತು ಯೂಸುಫ್ ಪಠಾಣ್ ಅವರು ತಮ್ಮ ಕ್ಷೇತ್ರದ ಮತದಾರರ ಕಾರಣಗಳಿಂದ ಈ ಸಾಮಾನ್ಯ ಸಭೆಯಿಂದ ದೂರ ಉಳಿದಿದ್ದರೂ, ಅಭಿವೃದ್ಧಿ ವಿಚಾರಗಳ ಕುರಿತು ಪ್ರತ್ಯೇಕವಾಗಿ ನಾಯಕರೊಂದಿಗೆ ಚರ್ಚಿಸಿದ್ದಾರೆ.



