ಹೈದರಾಬಾದ್: ತೆಲಂಗಾಣ (Telangana) ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ತಮ್ಮ ಮೊಮ್ಮಗನಿಗಾಗಿ ಅಡುಗೆ ಮನೆಯಲ್ಲಿ ಸ್ವತಃ ತಾವೇ ಪೂರಿ ತಯಾರಿಸುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ.
ರಾಜಕಾರಣಿಗಳು ಸಾಮಾನ್ಯವಾಗಿ ರ‍್ಯಾಲಿಗಳು, ಸಭೆಗಳು ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮನೆಯವರ ಜೊತೆ ಸಮಯ ಕಳೆಯುವುದು ತುಂಬಾ ಕಡಿಮೆ. ಆಡಳಿತದಲ್ಲಿ ಸದಾ ಬ್ಯುಸಿಯಾಗಿರುವ ತೆಲಂಗಾಣ ಸಿಎಂ ಬಿಡುವು ಮಾಡಿಕೊಂಡು ಮನೆಯವರ ಜೊತೆ ಸಮಯ ಕಳೆದಿದ್ದಾರೆ. ಅಡುಗೆ ಮನೆಯಲ್ಲಿ ತಮ್ಮ ಕೈಚಳಕ ಕೂಡ ತೋರಿಸಿದ್ದಾರೆ. ಮೊಮ್ಮಗ ರೇಯಾನ್ಶ್‌ಗಾಗಿ ತಾವೇ ಪೂರಿ ತಯಾರಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ
ರೇಯಾನ್ಶ್ ಅಡುಗೆಮನೆಯ ಸ್ಲ್ಯಾಬ್ ಮೇಲೆ ಕುಳಿತು ತಾತ ಅಡುಗೆ ಮಾಡುವುದನ್ನು ಗಮನಿಸಿದ್ದಾನೆ. ತಾತ ಪೂರಿ ತಯಾರಿಸಲು ತಾನು ಕೂಡ ಸಹಾಯ ಮಾಡಿದ್ದಾನೆ. ವಿಡಿಯೋ ಹಂಚಿಕೊಂಡ ಮುಖ್ಯಮಂತ್ರಿ, ʼನನ್ನ ಮೊಮ್ಮಗ ‘ಅಜ್ಜ, ನೀವು ಮಾಡಿದರೆ ಮಾತ್ರ ನಾನು ಪೂರಿ ತಿನ್ನುತ್ತೇನೆ’ ಎಂದು ಹೇಳಿದಾಗ ನಾನು ಇಲ್ಲ ಎಂದು ಹೇಗೆ ಹೇಳಲಿ?” ಎಂದು ಬರೆದುಕೊಂಡಿದ್ದಾರೆ. ಮೊಮ್ಮಗನ ಒತ್ತಾಸೆಗೆ ತಾನು ಅಡುಗೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ʼಪಕ್ಕದಲ್ಲಿ ನನ್ನ ಮೊಮ್ಮಗ, ಅವನ ಪುಟ್ಟ ಕೈಯಲ್ಲಿ ಒಂದು ಹಿಡಿ ಹಿಟ್ಟು, ಅಡುಗೆಮನೆ ತುಂಬ ನಗು, ಪೂರ್ಣವಾಗಿ ರೌಂಡಾಗಿಲ್ಲದ ಒಂದು ಡಜನ್ ಪೂರಿಗಳು. ಕಾರ್ಯನಿರತ ಸಾರ್ವಜನಿಕ ಜೀವನದ ನಡುವೆ, ನನ್ನ ಮೊಮ್ಮಗನೊಂದಿಗೆ ಪೂರಿ ತಯಾರಿಸಲು ಕಳೆದ ಈ ಕೆಲವು ಕ್ಷಣಗಳು ನಿಜವಾಗಿಯೂ ಅಮೂಲ್ಯವಾದ ನೆನಪುಗಳಾಗಿವೆ ಎಂದು ಸಿಎಂ ಬರೆದುಕೊಂಡಿದ್ದಾರೆ.
ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಹೃದಯಸ್ಪರ್ಶಿ ಎಮೋಜಿಗಳು ಮತ್ತು ಆತ್ಮೀಯ ಸಂದೇಶಗಳೊಂದಿಗೆ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತಾತ ಮತ್ತು ಮೊಮ್ಮಗನ ಬಾಂಧವ್ಯವನ್ನು ಅನೇಕರು ಹೊಗಳಿದ್ದಾರೆ. ಇನ್ನೂ ಕೆಲವರು ಅಡುಗೆ ಮನೆಯಲ್ಲಿ ಸಿಎಂ ಕುಟುಂಬದವರೊಂದಿಗೆ ಸುಂದರ ಕ್ಷಣಗಳನ್ನು ಆನಂದಿಸುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚೆನ್ನೈನಲ್ಲಿ ಬಿಗ್ ಬ್ಯಾಷ್ ಲೀಗ್ ಉದ್ಘಾಟನಾ ಪಂದ್ಯ – ಆಸೀಸ್ ಪ್ರಧಾನಿ ಅಧಿಕೃತ ಘೋಷಣೆ
