ಚೆನ್ನೈ: ನಾನು ನಂಬಿದ್ದ ಪೊಲೀಸರೇ ನನ್ನ ಮೇಲೆ ಕಾಲ್ತುಳಿತದ ಆರೋಪ ಹಾಕಿದರು ಎಂದು ತಮಿಳುನಾಡು ಸಿಎಂ ವಿಜಯ್ (CM Vijay) ಕರೂರಿನಲ್ಲಿ (Karur stampede) ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ವರ್ಷದಲ್ಲಿ ನಡೆದ TVK ಸಮಾವೇಶದಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿದ ಅವರು, ಪೊಲೀಸರ ನಡೆ ಹಾಗೂ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕರೂರು ಸಮಾವೇಶದಲ್ಲಿ ಮಾತನಾಡಿ, ನಾನು ಪೊಲೀಸರನ್ನು ನಂಬಿದ್ದೆ. ಆದರೆ ಅವರು ನನ್ನ ಮೇಲೆಯೇ ಕಾಲ್ತುಳಿತದ ಆರೋಪ ಹೊರಿಸಿದರು. ಸಭೆ ರದ್ದುಗೊಳಿಸುವ ಅಧಿಕಾರ ಪೊಲೀಸರಿಗೆ ಇತ್ತು. ಆದರೆ, ಅವರು ಹಾಗೆ ಮಾಡದೇ ಕಾರ್ಯಕ್ರಮ ಮುಂದುವರಿಯಲು ಅವಕಾಶ ನೀಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು
ಕಾಲ್ತುಳಿತ ದುರಂತ ತನ್ನ ಜೀವನದ ಅತ್ಯಂತ ನೋವಿನ ಘಟನೆ ಎಂದು ಹೇಳಿದ ವಿಜಯ್, ಅಂದು ನಡೆದ ದುರಂತ ಇಂದಿಗೂ ನನ್ನನ್ನು ಕಾಡುತ್ತಿದೆ. ಇದಕ್ಕೆ ನಿಜವಾದ ಹೊಣೆ ಯಾರು ಎಂಬುದು ಹೊರಬರಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: ರಾಮ ಮಂದಿರದ ಕಠಿಣ ನಿಯಮಕ್ಕೆ ಬೇಸತ್ತು ದೇಣಿಗೆ ಎಣಿಕೆ ಸಿಬ್ಬಂದಿಯ ಸಾಮೂಹಿಕ ರಾಜೀನಾಮೆ
ದುರಂತದ ಬಳಿಕ ತಾವು ಸಾರ್ವಜನಿಕವಾಗಿ ಮಾತನಾಡದ ವಿಚಾರವಾಗಿ ಟೀಕಿಸಿದವರಿಗೂ ಪ್ರತಿಕ್ರಿಯಿಸಿ, ನಾನು ಮನೆಯಲ್ಲಿ ದುಃಖದಲ್ಲಿದ್ದಾಗ, ಕೆಲವರು ನಾನು ಅಡಗಿಕೊಂಡಿದ್ದೇನೆ ಎಂದು ಆರೋಪ ಮಾಡಿದ್ದರು. ನನ್ನ ಮೇಲೆಯೇ ಸುಳ್ಳು ಆರೋಪ ಹಾಕಿ ರಾಜಕೀಯ ಮಾಡಿದ್ದರು ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಮತ್ತೆ ಡಿಲಿಮಿಟೇಷನ್ ಪ್ರಕ್ರಿಯೆ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ಆದರೆ ಯಾವುದೇ ಕಾರಣಕ್ಕೂ ತಮಿಳುನಾಡಿನಲ್ಲಿ ಡಿಲಿಮಿಟೇಷನ್ ಜಾರಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸಿಎಂ ಜೋಸೆಫ್ ವಿಜಯ್ ಸ್ಪಷ್ಟಪಡಿಸಿದರು.
ಸಂತ್ರಸ್ತ ಕುಟುಂಬಗಳಿಗೆ ಪರಿಹಾರ
ಕಾಲ್ತುಳಿತದಲ್ಲಿ ಮೃತಪಟ್ಟ 41 ಕುಟುಂಬಗಳ ಪೈಕಿ 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶಗಳನ್ನು ಸಿಎಂ ವಿಜಯ್ ವಿತರಿಸಿದರು. ಈ ಮೂಲಕ ತಾನು ಕೊಟ್ಟ ಮಾತನ್ನು ಅವರು ಈಡೇರಿಸಿದ್ದಾರೆ.
ಈ ಉದ್ಯೋಗ ನೀಡುವ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು. ಆದರೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸರ್ಕಾರದ ನೀತಿ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿ, ನೇಮಕಾತಿ ಪತ್ರ ವಿತರಣೆಗೆ ಅನುಮತಿ ನೀಡಿತು. ಆದರೆ ಈ ನೇಮಕಾತಿಗಳು ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಳೆದ ವರ್ಷದ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ (TVK) ಸಮಾವೇಶದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 41 ಮಂದಿ ಮೃತಪಟ್ಟಿದ್ದರು. ಈ ದುರಂತದ ಬಳಿಕ ಮೊದಲ ಬಾರಿಗೆ ಕರೂರಿಗೆ ಭೇಟಿ ನೀಡಿದ ಸಿಎಂ ವಿಜಯ್, ಘಟನೆಯ ಬಗ್ಗೆ ಮಾತನಾಡಿದರು. ಅಲ್ಲದೆ, ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ತಾವು ನೀಡಿದ್ದ ಭರವಸೆಯನ್ನೂ ಈಡೇರಿಸಿದ್ದಾರೆ.ಇದನ್ನೂ ಓದಿ: Gurugram Encounter – ಪೊಲೀಸರು, ದುಷ್ಕರ್ಮಿಗಳ ನಡುವೆ ಭಾರೀ ಗುಂಡಿನ ಚಕಮಕಿ – ನಂದಲ್ ಗ್ಯಾಂಗ್‌ನ ನಾಲ್ವರು ಬಲಿ
