ಗದಗ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ (Selfie Video) ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದಲ್ಲಿ(Gadag) ನಡೆದಿದೆ.
ನಗರದ ಕರೆಮ್ಮಕಲ್ ಬಡಾವಣೆಯ ನಿವಾಸಿ ಸಂಪತ್ ದಂಡಗಿ (38) ಮೃತ ವ್ಯಕ್ತಿ. ಬಡ್ಡಿ ದಂಧೆಕೋರರ ಕಿರುಕುಳ ಮತ್ತು ಬೆದರಿಕೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಧರ್ಮಗೌಡ ಕರಿಯನಗೌಡ್ರ ಎಂಬಾತ ಹಣ ಮತ್ತು ಬಡ್ಡಿಗಾಗಿ ನಿರಂತರವಾಗಿ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಸಂಪತ್ ಪತ್ನಿಗೂ ಕರೆ ಮಾಡಿ ಒತ್ತಡ ಹಾಕುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದಲ್ಲದೆ, ಧರ್ಮಗೌಡ ಕರಿಯನಗೌಡ್ರ ಹಾಗೂ ರವಿ ಶಿವನಗುತ್ತಿ ಎಂಬುವವರು ಸಂಪತ್‌ಗೆ ಕರೆ ಮಾಡಿ, ನಿನ್ನ ಮತ್ತು ನಿನ್ನ ಪತ್ನಿಯ ಹೆಸರಿನ ಚೆಕ್‌ಗಳಿವೆ. ಚೆಕ್ ಬೌನ್ಸ್ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮೃತನ ಪತ್ನಿ ಮತ್ತು ತಾಯಿ ಆರೋಪಿಸಿದ್ದಾರೆ. ಈ ನಿರಂತರ ಕಿರುಕುಳದಿಂದ ಮನನೊಂದ ಸಂಪತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಇದನ್ನೂ ಓದಿ: Gurugram Encounter – ಪೊಲೀಸರು, ದುಷ್ಕರ್ಮಿಗಳ ನಡುವೆ ಭಾರೀ ಗುಂಡಿನ ಚಕಮಕಿ – ನಂದಲ್ ಗ್ಯಾಂಗ್‌ನ ನಾಲ್ವರು ಬಲಿ
ಸೆಲ್ಫಿ ವಿಡಿಯೋದಲ್ಲಿ ಏನಿದೆ?
ಆತ್ಮಹತ್ಯೆಗೆ ಮುನ್ನ ಸಂಪತ್ ಸೆಲ್ಫಿ ವಿಡಿಯೋ ಮಾಡಿ ತನ್ನ ನೋವನ್ನು ವ್ಯಕ್ತಪಡಿಸಿದ್ದಾರೆ. ಜನರಿಗೆ ಸಹಾಯ ಮಾಡಲು ಹೋಗಿ ಈ ಸ್ಥಿತಿ ಬಂದಿದೆ. ಕಷ್ಟದಲ್ಲಿದ್ದವರಿಗೆ ನೆರವಾದೆ, ಆದರೆ ನನಗೆ ಕಷ್ಟ ಬಂದಾಗ ಯಾರೂ ನೆರವಾಗಲಿಲ್ಲ. ಬದುಕಬೇಕು, ದುಡಿಯಬೇಕು ಅಂದರೂ ತೊಂದರೆ ಕೊಟ್ಟರು. ಮಾರುತಿ ಕರಣೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಧರ್ಮಗೌಡ ಕರಿಯನಗೌಡ್ರ ಬಳಿ ಹಣ ಪಡೆದಿದ್ದಕ್ಕೆ ಈಗ ಬೆದರಿಕೆ ಹಾಕುತ್ತಿದ್ದಾರೆ. ದಿಕ್ಕು ತೋಚದೆ ಈ ನಿರ್ಧಾರ ಮಾಡುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ಆತ್ಮಹತ್ಯೆ ನಡೆದ ಸ್ಥಳದಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ, ಸುಮಾರು 60 ಲಕ್ಷ ರೂ. ಹಣವನ್ನು ಬಡ್ಡಿಗೆ ಪಡೆದು ಇತರರಿಗೆ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ. ಧರ್ಮಗೌಡ ಎಂಬುವರಿಂದ 3.5% ಬಡ್ಡಿದರದಲ್ಲಿ ಹಣ ಪಡೆದಿದ್ದಾಗಿ ಬರೆದಿದ್ದಾರೆ. ಆ ಹಣವನ್ನು ಮಂಜುನಾಥ್ ಪವಾರ್, ಕೃಷ್ಣಸಾ ಪವಾರ್, ಛಾಯಾ ಕುಲಕರ್ಣಿ ಮತ್ತು ಜಯರಾಮ್ ಎಂಬುವರಿಗೆ ನೀಡಿದ್ದು, ಅವರು ಹಣ ಹಿಂದಿರುಗಿಸದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇನೆ. ಧರ್ಮಗೌಡ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದಾನೆ. ಈ ಬಗ್ಗೆ ತನ್ನ ಮೊಬೈಲ್‌ನಲ್ಲಿರುವ ಆಡಿಯೋ ಹಾಗೂ ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವಂತೆ ಡೆತ್‌ನೋಟ್‌ನಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಮಗು ಬೇಡವೆಂದು 8 ತಿಂಗಳ ಗರ್ಭಿಣಿ ಪತ್ನಿಯ ಕುತ್ತಿಗೆ ಬಿಗಿದು ಕೊಲೆಗೆ ಯತ್ನ; ಪತಿ ಅಂದರ್
ಈ ಸಂಬಂಧ ಗದಗದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
