ಚಂಡೀಗಢ: ಇಲ್ಲಿನ ಗುರುಗ್ರಾಮದಲ್ಲಿ ಪೊಲೀಸರು (Police) ಹಾಗೂ ದರೋಡೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ (Gurugram Encounter) ನಾಲ್ವರು ದುಷ್ಕರ್ಮಿಗಳು ಬಲಿಯಾಗಿದ್ದಾರೆ. ಓರ್ವ ಆರೋಪಿ ಹಾಗೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ 9:30 ರ ಸುಮಾರಿಗೆ ಗುರುಗ್ರಾಮದ ಸುಶಾಂತ್ ಲೋಕ್ ಫೇಸ್-2 ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಈ ವೇಳೆ, ಸುಮಾರು 60 ಸುತ್ತು ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಬಂಗಾಳ ಪೊಲೀಸರ ಎನ್‌ಕೌಂಟರ್‌ಗೆ ಆರೋಪಿ ಬಲಿ
ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ತೆರಳುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿತ್ತು. ಶಂಕಿತರನ್ನು ಸುತ್ತುವರೆದ ಪೊಲೀಸರ ತಂಡ ಶರಣಾಗುವಂತೆ ಸೂಚಿಸಿದೆ. ಆದರೂ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಗೆ ಐವರು ಆರೋಪಿಗಳು ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇನ್ನೋರ್ವ ಆರೋಪಿ ಹಾಗೂ ಮೂವರು ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆಸಿದ ಆರೋಪಿಗಳು ವಿದೇಶಿ ಮೂಲದ ದೀಪಕ್ ನಂದಲ್ ಗ್ಯಾಂಗ್‌ನ ಸದಸ್ಯರು ಎಂದು ತಿಳಿದು ಬಂದಿದೆ.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ (FSL) ಮತ್ತು ಇತರ ತನಿಖಾ ತಂಡಗಳು ಪರಿಶೀಲನೆ ನಡೆಸಿವೆ. ದಾಳಿ ವೇಳೆ ಪೊಲೀಸರು ಐದು ವಿದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ದಾಳಿಗೂ ಮುನ್ನ ಉದ್ಯಮಿಯೊಬ್ಬರ ಮನೆ ಮೇಲೆ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದರು. ಉದ್ಯಮಿಗೆ ವಿದೇಶದಿಂದ ಹಣ ನೀಡುವಂತೆ ದುಷ್ಕರ್ಮಿಗಳ ಗುಂಪಿನಿಂದ ನಿರಂತರ ಬೆದರಿಕೆ ಹಾಕಲಾಗಿತ್ತು ಎಂಬ ವಿಚಾರ ತಿಳಿದುಬಂದಿದೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
