ಕರ್ನೂಲ್: ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿ ಮಗನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ(Andhrapradesh) ಕರ್ನೂಲ್ (Kurnool) ಜಿಲ್ಲೆಯ ಆದೋನಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
15 ವರ್ಷದ ವೀರೇಂದ್ರ ಮೃತ ಬಾಲಕ. ಮೃತನ ತಾಯಿ ಗಂಗಮ್ಮ ಹಾಗೂ ಪ್ರಿಯಕರ ದರ್ಗಪ್ಪ ಇಬ್ಬರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ರಾಯಚೂರು| ಬೆಳಗ್ಗೆ ಮುಂಬಡ್ತಿ ಪಡೆದು ಸಂಜೆಗೆ ನಿವೃತ್ತಿಯಾದ ಆರೋಗ್ಯ ಇಲಾಖೆ ನೌಕರ
ತಾಯಿಯು ಇನ್ನೋರ್ವ ವ್ಯಕ್ತಿಯ ಜೊತೆ ಸಂಬಂಧ ಹೊಂದಿರುವ ಬಗ್ಗೆ ವೀರೇಂದ್ರ ಆಗಾಗ ಪ್ರಶ್ನಿಸುತ್ತಿದ್ದನು. ಅಲ್ಲದೇ ಸಂಬಂಧಿಕರು ಮತ್ತು ಗ್ರಾಮಸ್ಥರ ಮುಂದೆಯೂ ಈ ವಿಚಾರವನ್ನು ಹೇಳಿದ್ದ. ಹೀಗಾಗಿ ಮಗನಿಂದಲೇ ತನ್ನ ಅಕ್ರಮ ಸಂಬಂಧ ಬಹಿರಂಗವಾಗುತ್ತದೆ ಎಂಬ ಆತಂಕದಲ್ಲಿ ತಾಯಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಬಾಲಕನನ್ನು ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ವೀರೇಂದ್ರನ ಮೃತದೇಹವನ್ನು ಗ್ರಾಮದ ಹೊರವಲಯದ ಸ್ಮಶಾನದಲ್ಲಿ ರಹಸ್ಯವಾಗಿ ಹೂತು ಹಾಕಿದ್ದಾರೆ. ಆನಂತರ ಕೊಲೆ ವಿಚಾರವನ್ನು ಮುಚ್ಚಿ ಹಾಕಲು ಗಂಗಮ್ಮ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೆ ಮಗನ ಹುಡುಕಾಟದಲ್ಲಿಯೂ ಭಾಗಿಯಾಗಿದ್ದಳು. ಇಷ್ಟೇ ಅಲ್ಲದೆ, ತನಿಖೆ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿ, ಮಗನ ಪತ್ತೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು.ಇದನ್ನೂ ಓದಿ: ಕೊಡಗಿನ ಮೂಲಕ ಹಾದುಹೋಗುವ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ: ಯದುವೀರ್ ಸ್ಪಷ್ಟನೆ
ಹೈಕೋರ್ಟ್ ಸೂಚನೆಯ ಬಳಿಕ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು. ಕರೆ ವಿವರಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸ್ಥಳೀಯ ಸಾಕ್ಷಿದಾರರ ಮಾಹಿತಿ ಪಡೆದ ಪೊಲೀಸರಿಗೆ ತಾಯಿಯ ಮೇಲೆಯೇ ಅನುಮಾನ ಮೂಡಿದೆ. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಂದಿದೆ.
ಜೂ.1ರಂದು ಗ್ರಾಮದ ಸ್ಮಶಾನದಲ್ಲಿ ಹೂತಿದ್ದ ವೀರೇಂದ್ರನ ಮೃತದೇಹವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ – ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ನಿಯೋಗ
