ನವದೆಹಲಿ: ಭಾರತದಾದ್ಯಂತ ಇರುವ ಇಸ್ರೋದ (ISRO) ವಿವಿಧ ಕೇಂದ್ರಗಳ ಸುಮಾರು 100 ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಗಗನಯಾನದಂತಹ ಮಹತ್ವದ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಬಾಹ್ಯಾಕಾಶ ಇಲಾಖೆ ಜಂಟಿ ಕಾರ್ಯದರ್ಶಿ (ಸಿಬ್ಬಂದಿ) ಎಸ್.ಆರ್. ರಾಜಶೇಖರ್ ಅವರು ಜು.14ರಂದು ಹೊರಡಿಸಿದ ಜ್ಞಾಪನ ಪತ್ರದಲ್ಲಿ, ‘ಇತ್ತೀಚಿನ ದಿನಗಳಲ್ಲಿ, ಪ್ರತಿಷ್ಠಿತ ‘ಗಗನಯಾನ’ ಹಾಗೂ ಇತರ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿದಂತೆ, ಇಸ್ರೋದ ಗ್ರೂಪ್ ಎ ವೈಜ್ಞಾನಿಕ/ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಬರುತ್ತಿವೆ. ಇದು ರಾಷ್ಟ್ರೀಯ ಮಹತ್ವದ ಯೋಜನೆಗಳ ಅನುಷ್ಠಾನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾನವಸಹಿತ ಗಗನಯಾನಕ್ಕೆ ಸಿದ್ಧವಾಗ್ತಿದೆ ಇಸ್ರೋ – ಡ್ರೋಗ್ ಪ್ಯಾರಾಚೂಟ್ ಪರೀಕ್ಷೆ ಸಕ್ಸಸ್
ಅಲ್ಲದೇ ಗಗನಯಾನ ಅಥವಾ ಇತರ ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವವರೆಗೂ, ಅವುಗಳಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ಎ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಮನವಿಗಳನ್ನು ಸ್ವೀಕರಿಸದಂತೆ ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಘಟಕಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಕೋರಿಕೆಗಳು ಬಂದಲ್ಲಿ, ಅಂತಿಮ ನಿರ್ಧಾರಕ್ಕಾಗಿ ಆಯಾ ಕೇಂದ್ರಗಳು ಅಥವಾ ಘಟಕಗಳ ಮುಖ್ಯಸ್ಥರ ಸ್ಪಷ್ಟ ಶಿಫಾರಸುಗಳೊಂದಿಗೆ ಅವುಗಳನ್ನು ಬಾಹ್ಯಾಕಾಶ ಇಲಾಖೆಗೆ (DoS) ಕಳುಹಿಸಬಹುದು ಎಂದು ತಿಳಿಸಲಾಗಿದೆ. ಪ್ರಮುಖ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಭಾರತವು 2047ರ ವೇಳೆಗೆ ಸೂಪರ್ ಪವರ್ ಆಗುತ್ತೆ: ಇಸ್ರೋ ಮಾಜಿ ಅಧ್ಯಕ್ಷ
ಇಸ್ರೋಗೆ ನಷ್ಟ, ಖಾಸಗಿ ಸ್ಟಾರ್ಟ್‌ಅಪ್‌ಗಳಿಗೆ ಲಾಭ?
ಬೆಂಗಳೂರಿನ URSC ಮತ್ತು ತಿರುವನಂತಪುರಂನ VSSC ಯಲ್ಲಿ ಹೆಚ್ಚಿನ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಗಗನ್ಯಾನ್ ಕಾರ್ಯಾಚರಣೆಯಲ್ಲಿ ಬಳಸಲಾಗುವ ಉಡಾವಣಾ ವಾಹನವಾದ LVM3 ಯೋಜನೆಯ ಮುಖ್ಯಸ್ಥರಾಗಿ ಸುಮಾರು 13 ತಿಂಗಳು ಸೇವೆ ಸಲ್ಲಿಸಿದ ಜೋಸೆಫ್ ಫೆಬ್ರವರಿಯಲ್ಲಿ ನಿರ್ಗಮಿಸಿದ್ದಾರೆ.
ಕೇಂದ್ರ ಸರ್ಕಾರ 2020 ರಲ್ಲಿ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸ್ಟಾರ್ಟ್‌ಅಪ್‌ಗಳಿಗೆ ಅವಕಾಶ ನೀಡಿತು. 2023 ರಲ್ಲಿ ಭಾರತೀಯ ಬಾಹ್ಯಾಕಾಶ ನೀತಿಯನ್ನು ಪ್ರಾರಂಭಿಸಿತು. ನಂತರ ಯಶಸ್ವಿಯಾಗಿ ಹಲವಾರು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳು ಆರಂಭವಾಗಿವೆ. ಭಾರೀ ಪ್ರಮಾಣದ ಹೂಡಿಕೆಗಳನ್ನು ಸಹ ಈ ಕಂಪನಿಗಳು ಆಕರ್ಷಿಸಿವೆ. ಇದು ಇಸ್ರೋಗೆ ನಷ್ಟಕ್ಕೆ ಕಾರಣವಾಗಿರಬಹುದು ಹಾಗೂ ಖಾಸಗಿ ಸ್ಟಾರ್ಟ್‌ಅಪ್‌ಗಳ ಲಾಭಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸ್ಟಾರ್ಟ್‌ಅಪ್‌ಗಳಾದ ಪಿಕ್ಸೆಲ್, ಧ್ರುವ ಸ್ಪೇಸ್, ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್ ಮತ್ತು ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ನಂತಹ ಕಂಪನಿಗಳು ಮುಂಚೂಣಿಯಲ್ಲಿವೆ.
ಇಸ್ರೋಗೆ ಇತ್ತೀಚಿನ ಹಿನ್ನಡೆಗಳು
ರಾಜೀನಾಮೆಗಳ ಜೊತೆಗೆ ಇಸ್ರೋ ಇತ್ತೀಚೆಗೆ ತನ್ನ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಹಿನ್ನಡೆ ಎದುರಿಸಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV), ಒಂದು ವರ್ಷದೊಳಗೆ ಸತತ ಎರಡು ವೈಫಲ್ಯಗಳನ್ನು ಅನುಭವಿಸಿದೆ.
ಜನವರಿಯಲ್ಲಿ, EOS-N1 ಭೂ-ವೀಕ್ಷಣಾ ಉಪಗ್ರಹ ಮತ್ತು ವಾಣಿಜ್ಯ ಪೇಲೋಡ್‌ಗಳ ಸಮೂಹವನ್ನು ಹೊತ್ತ PSLV-C62, ಮೂರನೇ ಹಂತದಲ್ಲಿ ಎದುರಿಸಿದ ಅಡೆತಡೆ ನಂತರ ಅದರ ಯೋಜಿತ ಮಾರ್ಗದಿಂದ ವಿಮುಖವಾಗಿತ್ತು.
ಇದರ ನಡುವೆಯೂ ಇಸ್ರೋ ಈ ಹಿನ್ನಡೆಗಳನ್ನು ನಿಭಾಯಿಸಲು ಸಿದ್ಧವಾಗಿದೆ. ಭಾರತವನ್ನು ಸ್ವತಂತ್ರವಾಗಿ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ನಾಲ್ಕನೇ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಅಲ್ಲದೇ ಚಂದ್ರಯಾನ-4, ಮಂಗಳಯಾನ-2 ಸೇರಿದಂತೆ ಮುಂಬರುವ ಪ್ರಮುಖ ಯೋಜನೆಗಳ ಮೇಲೆ ಸಂಶೋಧನೆ ಮುಂದುವರಿಸಿದೆ.
