ಬೆಂಗಳೂರು: 28-30 ಶಾಸಕರನ್ನು ಗೆಲ್ಲಿಸಿಕೊಂಡು ಆಕಸ್ಮಿಕವಾಗಿ ಸಿಎಂ ಆದ ಇತಿಹಾಸ ಹೊಂದಿರುವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು, 136 ಸ್ಥಾನಗಳ ಸ್ಪಷ್ಟ ಬಹುಮತದೊಂದಿಗೆ 7 ಕೋಟಿ ಜನರ ಪ್ರತಿನಿಧಿಯಾಗಿ ಅಧಿಕಾರಕ್ಕೆ ಬಂದಿರುವ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪುವುದಿಲ್ಲ ಎನ್ನುತ್ತಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹಾಗೂ ನಮ್ಮ ಸಂವಿಧಾನಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಿಡಿಕಾರಿದ್ದಾರೆ.
‘ಮಿಸ್ಟರ್ ಕುಮಾರಸ್ವಾಮಿ’ ಅಂತ ಕರೆಯೋಕೆ ನಮಗೂ ಬರುತ್ತದೆ. ಇನ್ನು ಮುಂದೆಯಾದರೂ ಅವರು ನಾಲಿಗೆ ಬಿಗಿಹಿಡಿದು ಮಾತನಾಡಲಿ, ಇದು ಅವರ ಮೂರ್ಖತನದ ಪರಮಾವಧಿಯಾಗಿದೆ. 2006 ರಲ್ಲಿ ಅಧಿಕೃತವಾಗಿ ಜೆಡಿಎಸ್ (JDS) ಶಾಸಕಾಂಗ ಪಕ್ಷದ ನಾಯಕರಾಗದಿದ್ದ ಇವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದು ಇದೇ ನಾವು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲದ ಮೂಲಕ ಅಸಂವಿಧಾನಿಕವಾಗಿ ಅಧಿಕಾರ ಹಿಡಿದ ಇತಿಹಾಸ ಹೊಂದಿರುವ ಕುಮಾರಸ್ವಾಮಿ ಅವರಿಗೆ, ಡಿ.ಕೆ ಶಿವಕುಮಾರ್ ಸಿಎಂ ಆದಾಗಿನಿಂದಲೂ ಹೊಟ್ಟೆಕಿಚ್ಚು ಶುರುವಾಗಿದ್ದು, ನಿರಂತರವಾಗಿ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಅಂತಾ ಆಕ್ರೋಶ ಹೊರಹಾಕಿದ್ದಾರೆ.
ಎಸ್.ಎಂ. ಕೃಷ್ಣ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ಸಹಿಸದ ಇವರು, ಇಂದು ಮತ್ತೊಬ್ಬ ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಅವರು 136 ಶಾಸಕರ ಬೆಂಬಲದೊಂದಿಗೆ ಬೆಳೆಯುತ್ತಿರುವುದನ್ನು ಅರಗಿಸಿಕೊಳ್ಳಲಾಗದೆ ಇಂತಹ ಕೆಟ್ಟ ಮನಸ್ಥಿತಿಯ ಮಾತುಗಳನ್ನಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಇಷ್ಟೆಲ್ಲಾ ಟೀಕೆಗಳ ನಡುವೆಯೂ ಕುಮಾರಸ್ವಾಮಿ ಅವರನ್ನು ‘ಅಣ್ಣ’ ಎಂದು ಗೌರವದಿಂದ ಕರೆದಿದ್ದಾರೆ, ಅವರ ಸೌಜನ್ಯವನ್ನು ನೋಡಿಯಾದರೂ ಇವರು ಸ್ವಲ್ಪ ಕಲಿತುಕೊಳ್ಳಲಿ. ಹಿಂದೆ ಆರ್‌ಎಸ್ಎಸ್ ಮತ್ತು ಪ್ರಧಾನಿ ಮೋದಿಯವರನ್ನ ತೀವ್ರವಾಗಿ ನಿಂದಿಸಿದ್ದ ಹೆಚ್.ಡಿ. ಕುಮಾರಸ್ವಾಮಿ, ಇಂದು ಕೇವಲ ಕೇಂದ್ರ ಸಂಪುಟ ಪುನಾರಚನೆಯಾದರೆ ತಮ್ಮ ಮಂತ್ರಿ ಸ್ಥಾನ ಎಲ್ಲಿ ಕೈತಪ್ಪಿ ಹೋಗುತ್ತದೋ ಎಂಬ ಭಯದಿಂದ ಬಿಜೆಪಿ-ಆರ್‌ಎಸ್ಎಸ್ ಗುಣಗಾನ ಮಾಡುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ಅವರಿಗೆ ನಿಜವಾಗಿಯೂ ಸ್ವಾಭಿಮಾನವಿದ್ದರೆ ತಕ್ಷಣವೇ ಬಿಜೆಪಿ ಮೈತ್ರಿಯಿಂದ ಹೊರಗೆ ಬಂದು, ನೇರವಾಗಿ ತೊಡೆ ತಟ್ಟಿ ನಮ್ಮೊಂದಿಗೆ ಕಡೇ ಆಟ ಆಡಿ ನೋಡಲಿ ಎಂದು ಮುಕ್ತ ಸವಾಲು ಹಾಕುತ್ತಿದ್ದೇನೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ನಿಶ್ಚಿತ ಅಂತಾ ಸವಾಲು ಹಾಕಿದ್ರು.
