ಬೆಂಗಳೂರು: ಭಾರತೀಯ ರೈಲ್ವೆ ಇಲಾಖೆಯು ನಿಲ್ದಾಣಗಳು, ರೈಲುಗಳು, ಹಳಿಗಳು ಹಾಗೂ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಜಾಗತಿಕ ಮಾನದಂಡಗಳಿಗೆ ತಕ್ಕಂತೆ ಆಧುನೀಕರಿಸುವ ದಿಸೆಯಲ್ಲಿ ಮಹತ್ವದ ಪರಿವರ್ತನೆಯಲ್ಲಿ ಸಾಗುತ್ತಿದೆ. ಇದರ ಮೂಲಕ ಪ್ರಯಾಣಿಕರ ಅನುಭವ ಮತ್ತು ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವತ್ತ ಗಮನ ಹರಿಸಲಾಗುತ್ತಿದೆ. ಇದರ ಭಾಗವಾಗಿ ಕರ್ನಾಟಕದ 4 ʻಅಮೃತ ಭಾರತ್ʼ ನಿಲ್ದಾಣಗಳನ್ನು ಪ್ರಧಾನಿ ಮೋದಿ ಉದ್ಘಾಟಿಸುತ್ತಿದ್ದಾರೆ.
‘ಅಮೃತ ಭಾರತ್ ನಿಲ್ದಾಣ ಯೋಜನೆ’ (ABSS)ಯಡಿ, ಪ್ರಧಾನಿ ನರೇಂದ್ರ ಮೋದಿ ಅವರು, ಶುಕ್ರವಾರ (ಜು.17) ದೇಶಾದ್ಯಂತ ನವೀಕರಿಸಲಾದ 75 ರೈಲು ನಿಲ್ದಾಣಗಳನ್ನ ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಪೈಕಿ ಆಧುನಿಕ ಸೌಲಭ್ಯಗಳೊಂದಿಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾದ ಕರ್ನಾಟಕದ ಅಳ್ನಾವರ (17.2 ಕೋಟಿ ರೂ. ವೆಚ್ಚ), ಬಾದಾಮಿ (15.10 ಕೋಟಿ ರೂ. ವೆಚ್ಚ), ಬಂಟ್ವಾಳ (26.18 ಕೋಟಿ ರೂ. ವೆಚ್ಚ) ಹಾಗೂ ಕೊಪ್ಪಳ (21.14 ಕೋಟಿ ರೂ. ವೆಚ್ಚ) ನಿಲ್ದಾಣಗಳನ್ನೂ ಉದ್ಘಾಟಿಸಲಿದ್ದಾರೆ.

2023–24ರಲ್ಲಿ, ಪ್ರಧಾನ ಮಂತ್ರಿಯವರು ದೇಶಾದ್ಯಂತ 1,000 ಕ್ಕೂ ಹೆಚ್ಚು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಪೈಕಿ ಕರ್ನಾಟಕದ ಗದಗ, ಧಾರವಾಡ, ಗೋಕಾಕ್ ರೋಡ್, ಮುನಿರಾಬಾದ್ ಮತ್ತು ಬಾಗಲಕೋಟೆ ನಿಲ್ದಾಣಗಳನ್ನ ಮೇ 2025ರಲ್ಲಿ ಉದ್ಘಾಟಿಸಲಾಗಿದ್ದು, ಯೋಜನೆಯ ನಿರಂತರ ಪ್ರಗತಿಯನ್ನು ಇದು ಸೂಚಿಸುತ್ತದೆ.

ಪುನರಾಭಿವೃದ್ಧಿಗೊಂಡ ನಿಲ್ದಾಣಗಳಲ್ಲಿ ವಿಸ್ತರಿಸಲಾದ ಹಾಗೂ ಸುಧಾರಿತ ಕಟ್ಟಡ ವ್ಯವಸ್ಥೆ, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುವ ವಿನ್ಯಾಸ ಮತ್ತು ಸ್ಥಳೀಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಆಧುನಿಕ ಮುಂಭಾಗ ವಿನ್ಯಾಸವನ್ನು ಅಳವಡಿಸಲಾಗಿದೆ. ಎಲ್ಲರಿಗೂ ಸಮಾನ ಸೌಲಭ್ಯ ಒದಗಿಸುವ ಉದ್ದೇಶದಿಂದ ದಿವ್ಯಾಂಗ ಸ್ನೇಹಿ ವ್ಯವಸ್ಥೆಗಳಾದ ರಾಂಪ್‌ಗಳು, ಸುಲಭ ಪ್ರವೇಶದ ಟಿಕೆಟ್ ಕೌಂಟರ್‌ಗಳು, ಮಾರ್ಗದರ್ಶಕ ದಾರಿಗಳು, ಮೀಸಲು ಪಾರ್ಕಿಂಗ್ ಹಾಗೂ ಅನುಕೂಲಕರ ಶೌಚಾಲಯಗಳನ್ನೂ ಒದಗಿಸಲಾಗಿದೆ.
ಏನೇನು ಸೌಲಭ್ಯಗಳಿವೆ?
ಹೊಸ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು, ಸುಧಾರಿತ ಸಂಚಾರ ಪ್ರದೇಶಗಳು ಹಾಗೂ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ (FOB) ನಿರ್ಮಾಣದ ಮೂಲಕ ಪ್ರಯಾಣಿಕರ ಅನುಕೂಲವನ್ನ ಹೆಚ್ಚಿಸಲಾಗಿದೆ. ಜೊತೆಗೆ, ಎಲ್ಲಾ ನಿಲ್ದಾಣಗಲ್ಲಿ ಲಿಫ್ಟ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಕೊಪ್ಪಳ ನಿಲ್ದಾಣದಲ್ಲಿ ಲಿಫ್ಟ್ ಗಳ ಜೊತೆ 2 ಎಸ್ಕಲೇಟರ್‌ಗಳನ್ನ ಅಳವಡಿಸಲಾಗಿದೆ.

ಆಧುನಿಕ ಸೌಲಭ್ಯಗಳಾಗಿ ವಿಶಾಲವಾದ ಎ.ಸಿ. ವಿಶ್ರಾಂತಿ ಕೊಠಡಿ, ಸುಧಾರಿತ ಶೌಚಾಲಯ ವ್ಯವಸ್ಥೆ, ಶಿಶುಗಳಿಗೆ ಆಹಾರ ನೀಡುವ ವ್ಯವಸ್ಥೆಯೊಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಕಾಯುವ ಕೊಠಡಿ ಮತ್ತು ಉತ್ತಮ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರ ಸಂಪರ್ಕ ಸುಗಮಗೊಳಿಸಲು ಆಟೋ ಸ್ಟ್ಯಾಂಡ್ ಹಾಗೂ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳಿಗಾಗಿ ಬೇರೆ ಬೇರೆ ಪಾರ್ಕಿಂಗ್ ವ್ಯವಸ್ಥೆಯನ್ನ ನಿರ್ಮಿಸಲಾಗಿದೆ.
ಇದಲ್ಲದೆ, ಎಲ್ಇಡಿ ಕೋಚ್ ಸೂಚನಾ ಫಲಕಗಳು, ರೈಲು ಸೂಚನಾ ಫಲಕಗಳು, ಡಿಜಿಟಲ್ ಕ್ಲಾಕ್, ಸಿಸಿಟಿವಿ ಹಾಗೂ ಸುಧಾರಿತ ಸಾರ್ವಜನಿಕ ಘೋಷಣೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಉಚಿತ ವೈ-ಫೈ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನೂ ಒದಗಿಸಲಾಗಿದೆ. ನಿಲ್ದಾಣಗಳ ಸೌಂದರ್ಯವರ್ಧನೆಗಾಗಿ ಕಲಾಕೃತಿಗಳು ಮತ್ತು ಭಿತ್ತಿ ಚಿತ್ರಗಳನ್ನು ಬಿಡಿಸಿ ಪ್ರಯಾಣವನ್ನು ಇನ್ನಷ್ಟು ಆಕರ್ಷಕ ಹಾಗೂ ಸುಖಕರವಾಗಿ ಮಾಡಲಾಗಿದೆ.

