– ಮದುವೆಯಾದ 8 ತಿಂಗಳ ಬಳಿಕ ಗೃಹಿಣಿ ಆತ್ಮಹತ್ಯೆ
– ವರದಕ್ಷಿಣೆ ಕಿರುಕುಳ ಶಂಕೆ
ನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ (Dowry Harassment) ಡೆಹ್ರಾಡೂನ್‌ನಲ್ಲಿ(Dehradun) ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ್ದ 90 ಸೆಕೆಂಡ್‌ಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸೃಷ್ಟಿ ಕಂಧಾರಿ ಮೃತ ಶಿಕ್ಷಕಿ. ಕಳೆದ ವರ್ಷ ನವೆಂಬರ್‌ನಲ್ಲಿ ಅವರು ಸರ್ಕಾರಿ ಉದ್ಯೋಗಿಯಾಗಿರುವ ಸೌರಭ್ ರಾತುರಿಯನ್ನು ಮದುವೆಯಾಗಿದ್ದರು. ಬಳಿಕ, ಡೆಹ್ರಾಡೂನ್ ಸಮೀಪದ ದೋಯಿವಾಲಾ ಪ್ರದೇಶದಲ್ಲಿ ದಂಪತಿ ವಾಸಿಸುತ್ತಿದ್ದರು.
ವರದಕ್ಷಿಣೆ ವಿಚಾರವಾಗಿ ಸೃಷ್ಟಿಗೆ ಪತಿ ಹಾಗೂ ಅತ್ತೆ-ಮಾವ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಅವರನ್ನು ʼಕೆಲಸಕ್ಕೆ ಬಾರದವಳುʼ, ʼನತದೃಷ್ಟೆʼ ಎಂದು ಅವಮಾನಿಸುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ವಸಂತ್ ನಾಯ್ಕ್ ಹತ್ಯೆ ಪ್ರಕರಣ – ಜ್ಯೋತಿಷಿ ಕಮಲಾಕರ್ ಭಟ್ ಸೇರಿ ಏಳು ಜನ ಆರೋಪಿಗಳ ಜಾಮೀನು ನಿರಾಕರಣೆ
ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಸೃಷ್ಟಿ ಕಣ್ಣೀರಿಡುತ್ತಾ, ʼಕ್ಷಮಿಸಿ ಅಮ್ಮ… ನಾನು ಹೀಗೆ ಹೋಗುತ್ತಿದ್ದೇನೆ. ಕಳೆದ ಆರು ತಿಂಗಳಿಂದ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಆದರೆ, ಇನ್ನು ಮುಂದೆ ಆಗಲ್ಲ. ಅವರು ನನ್ನನ್ನು ಯಾವಾಗಲೂ ‘ನತದೃಷ್ಟೆ’ ಎಂದು ಹೀಯಾಳಿಸುತ್ತಾರೆ. ಅವರ ಮನಸ್ಥಿತಿ ಯಾವತ್ತೂ ಬದಲಾಗಲ್ಲʼ ಎಂದು ಹೇಳಿಕೊಂಡಿದ್ದಾರೆ.
ಬುಧವಾರ ಸೃಷ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪತಿ ಸೌರಭ್ ರಾತುರಿ, ಅತ್ತೆ ಪರ್ವಿನಾ ಹಾಗೂ ಅತ್ತಿಗೆ ಚಾರು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನಮ್ಮರ 11ನೇ ದಿನದ ತಿಥಿ ಕಾರ್ಯ – ಪತ್ನಿ ನೆನೆದು ಕಣ್ಣೀರಿಟ್ಟ ಹೆಚ್‌ಡಿಡಿ
