ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ತೊರೆದು ಪಕ್ಷಾಂತರಗೊಂಡಿರುವ 20 ಬಂಡಾಯ ಸಂಸದರಿಗೆ ಸುಪ್ರೀಂ ಕೋರ್ಟ್ (Supreme Court) ನೋಟಿಸ್ ನೀಡಿದೆ. ಇದೇ ವೇಳೆ ಸ್ಪೀಕರ್ ಒಬ್ಬರಿಗೆ ಯಾಕೆ ನೋಟಿಸ್ ನೀಡಿಲ್ಲ ಎಂದು ಕೋರ್ಟ್ ಅಧಿಕಾರಿಗಳಿಗೆ ಪ್ರಶ್ನಿಸಿದೆ.
ಪಕ್ಷಾಂತರದ ವಿಚಾರವಾಗಿ, ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರು 20 ಬಂಡಾಯ ಸಂಸದರನ್ನು ಅನರ್ಹಗೊಳಿಸಬೇಕು. ಈ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ತ್ವರಿತ ನಿರ್ಧಾರ ತೆಗೆದುಕೊಳ್ಳುಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: 1 ತಿಂಗಳ ಹಿಂದೆ ಟಿಎಂಸಿಗೆ ರಾಜೀನಾಮೆ ನೀಡಿದ್ದ ರೆಬೆಲ್ ಸಂಸದರು ಬಿಜೆಪಿಯಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆ
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾ.ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತ್ತು. ಬಳಿಕ ಸಂಸದರು ಹಾಗೂ ಸ್ಪೀಕರ್‌ಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಸಂಸದರಿಗೆ ಮಾತ್ರ ನೋಟಿಸ್ ನೀಡಿ, ಸ್ಪೀಕರ್ ಅವರಿಗೆ ನೋಟಿಸ್ ತಲುಪಿಸಿರಲಿಲ್ಲ.
ಇಂದು (ಆ.25) ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯ ಏಕೆ ಸ್ಪೀಕರ್‌ಗೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿತು. ಸ್ಪೀಕರ್‌ನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅವರ ಪರವಾಗಿ ತಾವು ಹಾಜರಾಗುವುದಾಗಿ ಹೇಳಿದರು.
ಇದಕ್ಕೆ ನ್ಯಾಯಮೂರ್ತಿ ಬಾಗ್ಚಿಯವರು, ಇದು ನೋಟಿಸ್ ನೀಡುವ ಪ್ರಶ್ನೆಯಲ್ಲ ʻಇದು ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸುವ ಪ್ರಶ್ನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ನ್ಯಾಯಾಲಯದ ಪ್ರಕ್ರಿಯೆಗಳಿಗೆ ಪ್ರತಿಕ್ರಿಯಿಸಿದ ಅಭಿಷೇಕ್ ಬ್ಯಾನರ್ಜಿ ಪರ ಹಾಜರಾದ ಕಲ್ಯಾಣ್ ಬ್ಯಾನರ್ಜಿ, ಇದು ತೃಣಮೂಲಕ್ಕೆ ಸಿಕ್ಕ ದೊಡ್ಡ ಗೆಲುವು ಮತ್ತು ನ್ಯಾಯಾಲಯವು ಶೀಘ್ರದಲ್ಲೇ ದಿನಾಂಕವನ್ನು ನೀಡಲಿದೆ ಎಂದು ಹೇಳಿದರು.
ಲೋಕಸಭೆ ಸ್ಪೀಕರ್‌ಗೆ ನೋಟಿಸ್ ಜಾರಿ ಮಾಡದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿಗೆ ಕೋರ್ಟ್ ಒಪ್ಪಿತು. ಆದರೆ ಇಂತಹ ವಿಷಯದಲ್ಲಿ ಕಾಲಮಿತಿಯೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೀಠ ಸೂಚನೆ ನೀಡಿತು.
ಈ ವರ್ಷ ನಡೆದ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ 20 ಸಂಸದರು ಟಿಎಂಸಿಗೆ ರಾಜೀನಾಮೆ ನೀಡಿ, NCPI ಗೆ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ದೀದಿಗೆ ಮತ್ತೆ ಶಾಕ್ – ರಾಜ್ಯಸಭಾ ಸ್ಥಾನಕ್ಕೆ ಟಿಎಂಸಿ ಸಂಸದೆ ಕೋಯಲ್ ಮಲಿಕ್ ರಾಜೀನಾಮೆ
