ನವದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬ ನೀತಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ಆದೇಶ ಹೊರಡಿಸಿದೆ. ವಾದ-ಪ್ರತಿವಾದ ಮುಗಿದು ಆದೇಶ ಕಾಯ್ದಿರಿಸಿದ 3 ತಿಂಗಳ ಒಳಗಾಗಿ ಎಲ್ಲಾ ಹೈಕೋರ್ಟ್‌ಗಳು (High Court) ಅಂತಿಮ ತೀರ್ಪನ್ನು ಪ್ರಕಟಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದ್ದು, “ತೀರ್ಪು ನೀಡಲು ವಿಳಂಬ ಮಾಡುವುದರಿಂದ ಕಕ್ಷಿದಾರರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಮತ್ತು ನ್ಯಾಯಾಂಗದ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದೆ.
ಸುಪ್ರೀಂ ಮಾರ್ಗಸೂಚಿಗಳು ಏನು?
3 ತಿಂಗಳೊಳಗೆ ತೀರ್ಪು ಬರದಿದ್ದರೆ, ವಿಷಯವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತರಬೇಕು. ಅವರು ಗರಿಷ್ಠ 2 ವಾರಗಳ ಹೆಚ್ಚುವರಿ ಕಾಲಾವಕಾಶ ನೀಡಬಹುದು. ಹೆಚ್ಚುವರಿ ಸಮಯದಲ್ಲೂ ತೀರ್ಪು ಬರದಿದ್ದರೆ, ಕಕ್ಷಿದಾರರು ಆ ಪ್ರಕರಣವನ್ನು ಮತ್ತೊಂದು ಹೊಸ ಪೀಠಕ್ಕೆ ವರ್ಗಾಯಿಸಿ ಮರು-ವಿಚಾರಣೆ (Fresh Hearing) ನಡೆಸುವಂತೆ ಅರ್ಜಿ ಸಲ್ಲಿಸಬಹುದು.
ಜಾಮೀನು ಅರ್ಜಿಗಳ (Bail Applications) ವಿಚಾರಣೆ ನಡೆದ ಅದೇ ದಿನ ಅಥವಾ ಮರುದಿನವೇ ತೀರ್ಪು ಪ್ರಕಟಿಸಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಜಾಮೀನು ಮಂಜೂರಾದ ತಕ್ಷಣ, ಕೈದಿಗಳನ್ನು ಅಂದೇ ಅಥವಾ ಮರುದಿನವೇ ಜೈಲಿನಿಂದ ಬಿಡುಗಡೆ ಮಾಡಲು ಆದೇಶದ ಪ್ರತಿಯನ್ನು ತಕ್ಷಣವೇ ಜೈಲು ಅಧಿಕಾರಿಗಳಿಗೆ ತಲುಪಿಸಬೇಕು. ಇದನ್ನೂ ಓದಿ: 20 ಲಕ್ಷ ಮೌಲ್ಯದ ಷೇರುಗಳಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಅತ್ತೆ ನಿವೃತ್ತ ಜಡ್ಜ್?

ಪ್ರಕರಣದ ತೀರ್ಪನ್ನು ಯಾವಾಗ ಕಾಯ್ದಿರಿಸಲಾಗಿದೆ ಮತ್ತು ಯಾವಾಗ ಅಪ್‌ಲೋಡ್ ಮಾಡಲಾಗಿದೆ ಎಂಬ ಸ್ಥಿತಿಯನ್ನು (Case Status) ಆನ್‌ಲೈನ್‌ನಲ್ಲಿ ಸ್ಪಷ್ಟವಾಗಿ ತೋರಿಸಬೇಕು. ಬಾಕಿ ಉಳಿದಿರುವ ಕಾಯ್ದಿರಿಸಿದ ತೀರ್ಪುಗಳ ಬಗ್ಗೆ ಪ್ರತಿ ತಿಂಗಳು ನ್ಯಾಯಾಧೀಶರು/ಸಿಬ್ಬಂದಿಗೆ ಆಟೋಮ್ಯಾಟಿಕ್ ಅಲರ್ಟ್ ಹೋಗುವಂತೆ ಹೈಕೋರ್ಟ್‌ಗಳು ತಮ್ಮ ವೆಬ್‌ಸೈಟ್‌ಗಳನ್ನು ಮಾರ್ಪಡಿಸಬೇಕು.
ನ್ಯಾಯಾಧೀಶರು ಕೇವಲ ‘ಅರ್ಜಿ ವಜಾ ಮಾಡಲಾಗಿದೆ’ ಅಥವಾ ‘ಅಂಗೀಕರಿಸಲಾಗಿದೆ’ ಎಂದು ಅಂತಿಮ ನಿರ್ಧಾರ ಪ್ರಕಟಿಸಿ, ಅದಕ್ಕೆ ಕಾರಣಗಳನ್ನು ನೀಡದೆ ತೀರ್ಪನ್ನು ಬಾಕಿ ಇಡುವ ಪದ್ಧತಿಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.ಯಾವುದೇ ಆದೇಶ ನೀಡಿದರೂ ಅದಕ್ಕೆ ಸೂಕ್ತ ಕಾನೂನಾತ್ಮಕ ಕಾರಣಗಳನ್ನು ಕಡ್ಡಾಯವಾಗಿ ದಾಖಲಿಸಬೇಕು.
ಈ ಮಾರ್ಗಸೂಚಿಗಳು ಕೇವಲ ಹೈಕೋರ್ಟ್‌ಗಳಿಗೆ ಮಾತ್ರವಲ್ಲದೆ, ದೇಶದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೂ (District and Trial Courts) ಅನ್ವಯಿಸುತ್ತವೆ. ಜಾಮೀನು ಮಂಜೂರಾದ ನಂತರ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆಯೇ ಇಲ್ಲವೇ ಎಂಬುದನ್ನು ವಿಚಾರಣಾ ನ್ಯಾಯಾಲಯಗಳು ಹೈಕೋರ್ಟ್‌ಗೆ ವರದಿ ಮಾಡಬೇಕಿರುವುದು ಕಡ್ಡಾಯ.
ಈ ಆದೇಶಕ್ಕೆ ಪ್ರೇರಣೆ ಏನು?
ಜಾರ್ಖಂಡ್ ಹೈಕೋರ್ಟ್‌ನಲ್ಲಿ 56ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ವಾದ-ಪ್ರತಿವಾದಗಳನ್ನು 2022 ರಿಂದ 2024 ರ ಅವಧಿಯಲ್ಲೇ ಆಲಿಸಿ ಮುಗಿಸಲಾಗಿತ್ತು. ವಾದ ಮುಗಿದು 2 ರಿಂದ 3 ವರ್ಷಗಳೇ ಕಳೆದಿದ್ದರೂ ನ್ಯಾಯಾಧೀಶರು ಅಂತಿಮ ತೀರ್ಪನ್ನು ನೀಡದೆ ಕಾಯ್ದಿರಿಸಿದ್ದರು. ಇದೇ ರೀತಿ ಅಲಹಾಬಾದ್ ಹೈಕೋರ್ಟ್‌ನ ಒಂದು ಪ್ರಕರಣದಲ್ಲಿ 2021 ರಲ್ಲೇ ವಾದ ಮುಗಿದಿದ್ದರೂ 2026 ರವರೆಗೂ ತೀರ್ಪನ್ನೇ ಪ್ರಕಟಿಸಿರಲಿಲ್ಲ. ಹೈಕೋರ್ಟ್‌ನ ರಿಜಿಸ್ಟ್ರಾರ್ ನೀಡಿದ ವರದಿ ಹಿನ್ನೆಲೆಯಲ್ಲಿ ಆಘಾತ ವ್ಯಕ್ತಪಡಿಸಿದ ಕೋರ್ಟ್ ಈಗ ಐತಿಹಾಸಿಕ ನಿರ್ದೇಶನ ನೀಡಿದೆ.
