Connect with us

Chikkamagaluru

ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿ ಹಾವಿನ ಬೆನ್ನು ಮೂಳೆ ಮುರಿತ- ಶಸ್ತ್ರಚಿಕಿತ್ಸೆ ಮಾಡಿಸಿದ ರೈತ

Published

on

ಚಿಕ್ಕಮಗಳೂರು: ಜಮೀನು ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಭಾರೀ ಗಾತ್ರದ ನಾಗರಹಾವಿಗೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ಮೂಲಕ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ರೈತ ಗೋಪಾಲಾಚಾರ್ ಅವರು ಜಮೀನಿನಲ್ಲಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ನೇಗಿಲಿಗೆ ಭೂಮಿಯೊಳಗಿದ್ದ ಬೃಹತ್ ಗಾತ್ರದ ನಾಗರಹಾವು ಸಿಲುಕಿಕೊಂಡಿದೆ. ನೇಗಿಲಿಗೆ ಸಿಕ್ಕ ನಾಗರಹಾವು ಬಿಡಿಸಿಕೊಳ್ಳಲಾಗದೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ. ಹಾವಿನ ಸ್ಥಿತಿ ಕಂಡ ಜಮೀನಿನ ಮಾಲೀಕ ಗೋಪಾಲಾಚಾರ್, ಕೂಡಲೇ ಕುದುರೆಗುಂಡಿಯ ಉರಗತಜ್ಞ ಹರೀಂದ್ರಾಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಹರೀಂದ್ರ, ನೇಗಿಲಿಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ಬಿಡಿಸಿ ಸ್ಥಳೀಯರಾದ ಅರುಣ್ ಹಾಗೂ ಸಾಜು ಅವರ ಸಹಾಯದಿಂದ ಎನ್.ಆರ್.ಪುರದ ಪಶು ಆಸ್ಪತ್ರೆಗೆ ತಂದಿದ್ದಾರೆ. ಪಶು ಆಸ್ಪತ್ರೆ ವೈದ್ಯ ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಸುಮಾರು ಅರ್ಧ ಗಂಟೆಗಳ ಕಾಲ ಹಾವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ ಹಾವು ಸುಮಾರು 11 ವರ್ಷದ್ದು. ಈ ಬೃಹತ್ ನಾಗರಹಾವು ಹಾವು ಟ್ರ್ಯಾಕ್ಟರ್ ನೇಗಿಲಿಗೆ ಸಿಲುಕಿದ್ದರಿಂದ ಹಾವಿನ ತಲೆ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಹಾವಿನ ಹೊಟ್ಟೆ ಭಾಗದಲ್ಲಿ ಸುಮಾರು ಒಂದು ಇಂಚಿನಷ್ಟು ಹೊಲಿಗೆ ಹಾಕಿದ್ದಾರೆ.

ಬೆನ್ನಿನ ಒಂದು ಎಲುಬು ಮುರಿದಿದ್ದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ಹಾವಿಗೆ ಸುಮಾರು ಮೂರ್ನಾಲ್ಕು ದಿನಗಳ ಚಿಕಿತ್ಸೆಯ ಅಗತ್ಯವಿದ್ದು, ಪಶು ಆಸ್ಪತ್ರೆಯಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಹಾವನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇಡಬೇಕು, ಹಾವಿಗೆ ಮೂರು ಆ್ಯಂಟಿಬಯೋಟಿಕ್ ಹಾಕಬೇಕೆಂದು ಎಂದು ವೈದ್ಯರು ಹರೀಂದ್ರಾ ಅವರಿಗೆ ತಿಳಿಸಿದ್ದಾರೆ.