– ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ 7 ಗಂಟೆ ಡಿಕೆಶಿ ಸಭೆ
– ಸರ್ಕಾರಿ ನೌಕರರು 10 ಗಂಟೆಗೆ ಹಾಜರಾಗಬೇಕು
ಬೆಂಗಳೂರು: ಗ್ಯಾರಂಟಿ ಯೋಜನೆಯಲ್ಲಿ(Guarantee Scheme) ದುರ್ಬಳಕೆ ತಡೆಗೆ ಸ್ಮಾರ್ಟ್ ಕಾರ್ಡ್ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾದ ಸಿಎಂ ಡಿಕೆ ಶಿವಕುಮಾರ್ (DK Shivakumar) ಇವತ್ತು ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ 7 ಗಂಟೆಗಳ ಕಾಲ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಡಿಕೆ ಶಿವಕುಮಾರ್, 100 ಕೋಟಿ ಹಣ ತೀರಿಕೊಂಡವರ ಹೆಸರಲ್ಲಿ ತೆಗೆದುಕೊಂಡಿದ್ದು, ಅದರ ಬಗ್ಗೆ ತನಿಖೆ ನಡೆಸಿದ್ದೇವೆ. ಗ್ಯಾರಂಟಿ ಯೋಜನೆಗೆ ಸ್ಮಾರ್ಟ್ ಕಾರ್ಡ್ (Smart Card) ಮಾಡುತ್ತೇವೆ. ಮನೆ ಯಜಮಾನಿ ಪರಿಶೀಲನೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದ್ರೆ ದೂರು ನೀಡಲು ನಂಬರ್ ಡಿಸ್‌ಪ್ಲೇ ಮಾಡಬೇಕು ಎಂದು ಸೂಚಿಸಿದ್ರು. ಅಧಿಕಾರಿಗಳಿಗೆ ಯಾವುದೇ ಸಚಿವರು ಅಥವಾ ಶಾಸಕರು ಒತ್ತಡ ಹೇರುವಂತಿಲ್ಲ. ಒತ್ತಡ ಮಾಡಿದರೆ ಅದನ್ನ ನನ್ನ ಗಮನಕ್ಕೆ ತನ್ನಿ ಅಂತ ಎಸ್‌ಪಿ, ಡಿಸಿಗೆ ಹೇಳಿದ್ದಾರೆ.
ಎಲ್ಲ ಜಿಲ್ಲೆಗಳಿಗೂ ಸಮಸ್ಯೆ ಆಲಿಸಲು ನಾನೇ ಖುದ್ದಾಗಿ ಬರುತ್ತೇನೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ. ಎಲ್ಲಾ ಸರ್ಕಾರಿ ಅಧಿಕಾರಿಗಳು 10 ಗಂಟೆಗೆ ಕಚೇರಿಗೆ ಹಾಜರಾಗಬೇಕು ಎಂದು ಮತ್ತೊಮ್ಮೆ ಆದೇಶಿಸಿದ್ದಾರೆ.
ಡಿಕೆಶಿ ಹೇಳಿದ್ದೇನು?
• ಟೀಮ್ ಕರ್ನಾಟಕ: ನಾವೆಲ್ಲರೂ ಒಂದೇ ತಂಡ, ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ. ಸಮಸ್ಯೆಯೊಂದಿಗೆ ಬಂದ ಜನರಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅಧಿಕಾರಿಗಳ ವರ್ಗದಲ್ಲಿ ನಾವು ಸಾಮಾಜಿಕ ನ್ಯಾಯವನ್ನು ಪಾಲಿಸುತ್ತೇವೆ.
• 0% ಭ್ರಷ್ಟಾಚಾರ: ಯಾರು ಕೂಡ ಸರ್ಕಾರಿ ಕಚೇರಿಗಳಲ್ಲಿ 10 ರೂಪಾಯಿ ಕೂಡಾ ಲಂಚ ನೀಡಬಾರದು. ನಾವು ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಿಸೋಣ. ಯಾರಾದರೂ ಕಾನೂನು ವಿರುದ್ಧ ಕೆಲಸ ಮಾಡಲು ಒತ್ತಡ ಹಾಕಲು ಬಂದರೆ ಕೂಡಲೇ ನನಗೆ ಮಾಹಿತಿ ನೀಡಿ.
• ರೌಡಿಸಂ & ಡ್ರಗ್ಸ್ ಮುಕ್ತ: ಗಾಂಜಾ, ಡ್ರಗ್ಸ್ ಹಾಗೂ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಐದು ಪೊಲೀಸರ ತಂಡವನ್ನು ರಚಿಸಿ ರೌಡಿಸಂ ನಿಗ್ರಹಕ್ಕೆ ಸೂಚಿಸಿದ್ದೇನೆ. ನಕಲಿ ಫೈನಾನ್ಸ್‌ಗಳ ಹಾವಳಿಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು.
• ಶಿಕ್ಷಣಕ್ಕೆ ಆದ್ಯತೆ: ವಿದ್ಯಾರ್ಥಿಗಳ ಸಮವಸ್ತ್ರ, ಶೂ, ಪಠ್ಯ ಪುಸ್ತಕ ಮುಂದಿನ ಒಂದು ತಿಂಗಳಲ್ಲಿ ವಿತರಣೆಯಾಗಬೇಕು. ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ನೂತನ ಸಿಎಸ್ಆರ್ (CSR) ನೀತಿ ತರುತ್ತಿದ್ದೇವೆ.
• ಮಳೆ ಕೊರತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ: ಬಿತ್ತನೆ ಕಾರ್ಯ ಶುರುವಾಗುತ್ತಿದ್ದು ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆಗೆ ಕ್ರಮವಹಿಸಬೇಕು. ಎಲ್ ನಿನೋ ಪ್ರಭಾವ ಬೀರುವ ಸಾಧ್ಯತೆ ಇದ್ದು, ಅಲ್ಪಾವಧಿ ಮಳೆ ಮುನ್ಸೂಚನೆ ಇದೆ. 30% ಮಳೆ ಕೊರತೆ ಇದ್ದು, ಮೇವಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.
• ಗ್ಯಾರಂಟಿ ಪರಿಷ್ಕರಣೆ: ನಾವು ಯೋಜನೆಯನ್ನು ನಿಲ್ಲಿಸುವುದಿಲ್ಲ, ಯಾರನ್ನೂ ತೆಗೆದುಹಾಕುವ ಉದ್ದೇಶವಿಲ್ಲ. ಸರಿಯಾದ ಮಾಹಿತಿ ಇರುವ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಗೆ ಪುನಃ ಅರ್ಜಿ ಪಡೆಯಲಾಗುವುದು.
ಇಂದು ವಿಧಾನಸೌಧದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಸಮಾಲೋಚಿಸಿ, ಅಗತ್ಯ ಸೂಚನೆಗಳನ್ನು ನೀಡಲಾಯಿತು. pic.twitter.com/OJovOsaxi6
— DK Shivakumar (@DKShivakumar) June 13, 2026
• ಮತದಾನದ ಹಕ್ಕು ರಕ್ಷಣೆ: ಮತದಾನದ ಹಕ್ಕಿಲ್ಲವಾದರೆ ಸರ್ಕಾರದ ಐದು ಗ್ಯಾರಂಟಿಗಳು, ಪಿಂಚಣಿ ಸಿಗುವುದಿಲ್ಲ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಬಿಎಲ್ಒಗಳು ನೀಡುವ ಎನ್ಯುಮರೇಷನ್ ಅರ್ಜಿಯನ್ನು ಸಲ್ಲಿಸಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು. ವಾಸ ಪ್ರಮಾಣ ಪತ್ರ ಇಲ್ಲದವರಿಗೆ ಅದನ್ನು ಶೀಘ್ರವೇ ನೀಡಲು ಸೂಚಿಸಲಾಗಿದೆ.
• ಉದ್ಯೋಗ ವಿನಿಮಯ ಮತ್ತು ಭಾರತ್ ಜೋಡೋ ಯುವಕರ ಸಂಘ: ಸ್ಥಳೀಯ ಯುವಕರಿಗೆ ಉದ್ಯೋಗ ಕಲ್ಪಿಸಲು ಖಾಸಗಿ ಉದ್ಯೋಗ ವಿನಿಮಯದ ಮೂಲಕ ಯುವ ಯುಗ ಆರಂಭಿಸುತ್ತಿದ್ದೇವೆ. ಯುವಕರ ಪ್ರತಿಭೆಗಳ ಅನಾವರಣಕ್ಕೆ ರಾಜಕೀಯೇತರ ‘ಭಾರತ್ ಜೋಡೋ ಯುವಕರ ಸಂಘ’ ರಚಿಸಿ, ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲಾಗುವುದು. ಇದು ನನ್ನ ಕನಸಿನ ಯೋಜನೆಯಾಗಿದೆ.
• ವರ್ತುಲ ರಸ್ತೆ ಯೋಜನೆ: ಸುಗಮ ಸಂಚಾರಕ್ಕಾಗಿ ಎಲ್ಲಾ ತಾಲ್ಲೂಕುಗಳಲ್ಲಿ ವರ್ತುಲ ರಸ್ತೆ ನಿರ್ಮಿಸಲು, ಗ್ರಿಡ್ ರೂಪಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
