ಬೀದರ್: ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಕಾಂಗ್ರೆಸ್ ಹೈಕಮಾಂಡ್ ಅಗೌರವದಿಂದ ನಡೆಸಿಕೊಂಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ಬೀದರ್‌ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಅಗೌರವದಿಂದ ನಡೆಸಿಕೊಂಡಿದೆ. ಆದರೆ, ಸಿಎಂ ಸಿದ್ದರಾಮಯ್ಯ ಯಾವುದನ್ನೂ ತೋರಿಸಿಕೊಳ್ಳುತ್ತಿಲ್ಲ. ಯಾಕಂದ್ರೆ ನನ್ನ ಹಿರಿತನದ ಗೌರವ ಹೋಗಬಾರದು ಎಂದು ಸಿದ್ದರಾಮಯ್ಯ ನೋವು ತೋರಿಸುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ – ಸಿದ್ದರಾಮಯ್ಯನವರನ್ನು ತಬ್ಬಿ ಕಾಲಿಗೆ ಬಿದ್ದ ಡಿಕೆಶಿ
ಕಾಂಗ್ರೆಸ್‌ನ ಸಂಸ್ಕೃತಿಯೇ ಅದಾಗಿದ್ದು, ಇದೊಂದು ಬಂಡವಾಳಶಾಹಿಗಳಿಗೆ ಮಣೆ ಹಾಕುವ ಪಕ್ಷ. ಮಾನವೀಯತೆಯಿಂದ ಹೈಕಮಾಂಡ್ ನಡೆದುಕೊಳ್ಳಬೇಕಿತ್ತು. ಆ ರೀತಿ ನಡೆದುಕೊಂಡಿಲ್ಲ. ಮೊದಲು ಹೈಕಮಾಂಡ್ ಸಿದ್ದರಾಮಯ್ಯ ಜೀ ಅಂತಿದ್ದರು. ಈಗಾ ಸಿದ್ದರಾಮಯ್ಯ ಯೂ ಮಸ್ಟ್ ರಿಸೈನ್ ಎಂದಿದ್ದಾರೆ. ನನ್ನ ಹೈಕಮಾಂಡ್ ಗೌರವಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಗೆಳೆಯರ ಜೊತೆ ಹೇಳಿಕೊಂಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲು ಒಂದು ತಿಂಗಳು ಟೈಂ ನೀಡಿ ಎಂದು ಹೈಕಮಾಂಡ್‌ಗೆ ಕೇಳಿದ್ದರು. ಆದರೆ, ಒಂದು ದಿನಾನೂ ಇಲ್ಲ ಈಗಲೇ ರಾಜೀನಾಮೆ ನೀಡಿ ಎಂದು ಹೈಕಮಾಂಡ್ ಹೇಳಿದೆ. ಇಂದು ಸಿದ್ದರಾಮಯ್ಯ ರಾಜೀನಾಮೆ ನೀಡಬಹುದು. ಅವರಿಗೆ ಶಾಸಕರ ಬೆಂಬಲ ಹೆಚ್ಚಾಗಿದೆ ಎಂದು ತಿಳಿಸಿದರು.

ಹಿಂದುಳಿದವರು, ಲಿಂಗಾಯತರು, ಬ್ರಾಹ್ಮಣ, ಒಕ್ಕಲಿಗ ಸಮುದಾಯದಲ್ಲಿ ಸಿಎಂ ಆಗಿದ್ದಾರೆ. ಆದರೆ, ದಲಿತರಿಗೆ ಯಾಕಿಲ್ಲ, ಕಾಂಗ್ರೆಸ್ ದಲಿತರನ್ನು ಮತಬ್ಯಾಕ್ ಮಾಡಿಕೊಂಡಿದೆ. ಇದುವರಿಗೆ ಈ ಪ್ರಸ್ತಾಪ ಮಾಡೇ ಇಲ್ಲ. ಮಾನ್ಯ ಮಲ್ಲಿಕಾರ್ಜುನ ಖರ್ಗೆಯನ್ನು ಸಿಎಂ ಮಾಡಬಹುದಿತ್ತಲ್ಲ? ಇಷ್ಟೊಂದು ದೊಡ್ಡ ಹಿರಿತನ ಮಲ್ಲಿಕಾರ್ಜುನ ಖರ್ಗೆಗೆ ಇದೆ. ಅವರು ಬೇಡ ಅಂದ್ರೆ ಪರಮೇಶ್ವರ್ ಇದ್ದರು. ಕೆ.ಹೆಚ್.ಮುನಿಯಪ್ಪ ಇದ್ದರು. ಆದರೆ, ದಲಿತರು ಅಂದ್ರೆ ಬರಿ ಮತ ಹಾಕೋಕೆ ಮಾತ್ರನಾ ಇರೋದಾ? ದಲಿತರನ್ನು ಎಷ್ಟು ಸಾರಿ ನೀವು ವಂಚನೆ ಮಾಡುತ್ತೀರಿ? 80 ವರ್ಷದಿಂದ ಅವತನ್ನು ವಂಚನೆ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗೆಹ್ಲೋಟ್ ನಡೆಗೆ `ಕೈ’ ಪಡೆ ಅನುಮಾನ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಸಿಎಂ ಯಾರಿಗೆ ರಾಜೀನಾಮೆ ನೀಡಬೇಕು?
ಒಂದು ಕಾಲದಲ್ಲಿ ದಲಿತರು ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ದಲಿತರು ಎಂಬಂತಿತ್ತು. ಆದರೆ, ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಕಾಂಗ್ರೆಸ್ ಅನ್ನು ಇನ್ಮುಂದೆ ದಲಿತರು ಯಾಕೆ ನಂಬಬೇಕು? ಈಗಲಾದರೂ ದಲಿತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಿಎಂ ರಾಜೀನಾಮೆ ದಿನವೇ ರಾಜ್ಯಪಾಲರು ಮುಂಬೈಗೆ ತೆರಳಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ಗೂ, ಸಿಎಂ ಸಿದ್ದರಾಮಯ್ಯಗೂ ರಾಜ್ಯಪಾಲರಿಗೂ ಏನು ಸಂಬಂಧ. ಅವರ ಮನೆಯವರಿಗೆ ಆರೋಗ್ಯ ಸಮಸ್ಯೆಯಾಗಿದೆ. ಹೀಗಾಗಿ, ಅವರು ಮುಂಬೈಗೆ ಹೋಗಿದ್ದಾರೆ. ಅದು ಬೇರ ವಿಚಾರವಾಗಿದೆ. ಆದರೆ, ಸಿಎಂ ರಾಜೀನಾಮೆಗೆ ಹೋಗಿದ್ದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.
