– ಕರಾವಳಿ ಜನರ ತಿಳುವಳಿಕೆ ಬಗ್ಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಅಗತ್ಯವಿಲ್ಲ
ಉಡುಪಿ: ಕರಾವಳಿ ಜನರ ತಿಳುವಳಿಕೆ ಬಗ್ಗೆ ಸಿಎಂ ಕುಮಾರಸ್ವಾಮಿ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ಇಲ್ಲಿನ ಜನ ದೇಶಕ್ಕಾಗಿ ಕೆಲಸ ಮಾಡುವವರಿಗೆ ಮತ ಹಾಕುತ್ತಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಉಡುಪಿ- ಚಿಕ್ಕಮಗಳೂರು ಜನ ದೇಶ ಭಕ್ತರು. ದೇಶಕ್ಕಾಗಿ ಕೆಲಸ ಮಾಡುವವರಿಗೆ ವೋಟ್ ಹಾಕುತ್ತಾರೆ. ಕುಟುಂಬ ರಾಜಕಾರಣ ಮಾಡುವವರಿಗೆ ಇಲ್ಲಿನ ಜನ ಓಟು ಹಾಕಲ್ಲ. ವಂಶಪಾರಂಪರ್ಯ ರಾಜಕಾರಣ ಬೆಳೆಸುವವರಿಗೆ ದೇಶಭಕ್ತಿ ಭಾಷೆ ಅರ್ಥವಾಗುವುದಿಲ್ಲ. ಪ್ರಧಾನಿ ಮೋದಿಗೆ ಕುಮಾರಸ್ವಾಮಿ ಸರ್ಟಿಫಿಕೇಟ್ ಬೇಕಾಗಿಲ್ಲ. ಮೋದಿ ಪ್ರಪಂಚ ಕಂಡ ಅದ್ಭುತ ನಾಯಕ. ಮೋದಿ ಆನೆಯ ರೀತಿಯಲ್ಲಿ ಚಲಿಸುವ ವ್ಯಕ್ತಿ. ಯಾರು ಏನೇ ಬಡ್ಕೊಂಡ್ರೂ ಮೋದಿ ಮೇಲೆ ಪರಿಣಾಮ ಬೀರಲ್ಲ ಎಂದರು.
Advertisement
Advertisement
ಮೋದಿಯ ಐದು ವರ್ಷದ ಸಾಧನೆ ಜನ ನೋಡಿದ್ದಾರೆ. ಅಭಿವೃದ್ಧಿ, ದೇಶ ರಕ್ಷಣೆ ನೋಡಿ, ಹೊಸ ಯೋಜನೆಗಳನ್ನು ಕಂಡು ಕರಾವಳಿ ಮಲೆನಾಡಿನ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಗೆ ಮತ ಹಾಕುವ ಕರಾವಳಿ ಜನರಿಗೆ ತಿಳುವಳಿಕೆ ಇಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿಗೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.
Advertisement
ನಕಲಿ ಸರ್ಕಾರ:
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಿಡಿ ಬಿಡುಗಡೆ ಮಾಡಿರುವ ಬೆದರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಬಂದಾಗ ಕಾಂಗ್ರೆಸ್ ಅವರಿಗೆ ಸಿಡಿ ನೆನಪಾಗುತ್ತೆ. ಅಭಿವೃದ್ಧಿಯಲ್ಲಿ ಗೆಲ್ಲಲಾಗದವರು ಸಿಡಿ ರಾಜಕಾರಣ ಮಾಡುತ್ತಾರೆ. ಸಿಡಿ ಮತ್ತು ಡೈರಿ ಇವೆಲ್ಲಾ ಸುಳ್ಳು, ಎಲ್ಲವೂ ನಕಲಿ. ರಾಜ್ಯದಲ್ಲಿರುವ ನಕಲಿ ಸರ್ಕಾರದಂತೆ ನಕಲಿ ಸಿಡಿ, ನಕಲಿ ಡೈರಿ ಬಿಡುಗಡೆಯಾಗಬಹುದು ಅಷ್ಟೇ. ಚುನಾವಣೆ ಎದುರಿಸಲಾಗದೇ ಪುಕ್ಕಲು ರಾಜಕಾರಣಿಗಳು ತಾವೇ ಡೈರಿ, ಸಿಡಿ ಸೃಷ್ಟಿ ಮಾಡಿ ತೇಜೋವಧೆ ಮಾಡುತ್ತಾರೆ. ಅಭಿವೃದ್ಧಿ ತೋರಿಸಿ ಮತ ಕೇಳುವ ನೈತಿಕತೆ ಇವರಿಗಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ನಾಮಪತ್ರ ಸಲ್ಲಿಕೆ:
ಇದಕ್ಕೂ ಮುನ್ನ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಗೆ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿರುವ ಕರಂದ್ಲಾಜೆ ಜ್ಯೋತಿಷ್ಯರ ಸಲಹೆ ಪಡೆದುಕೊಂಡಿದ್ದರು. ಉಡುಪಿ- ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಬಿಜೆಪಿ ಜಿಲ್ಲಾಧ್ಯಕ್ಷರು, ಬಿಜೆಪಿ ನಾಯಕಿ ಭಾರತಿ ಶೆಟ್ಟಿ ಜೊತೆ ತೆರಳಿ ಶೋಭಾ ಕರಂದ್ಲಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಶುಭ ಶುಕ್ರವಾರ ಅಂತ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಶುಕ್ರವಾರ ಮಹಾಕಾಳಿ ದುರ್ಗೆಯ ದಿನ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಸಿದ್ದು, ಸಾರ್ವಜನಿಕವಾಗಿ 26ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಮಾರ್ಚ್ 26 ಕೂಡಾ ಮಂಗಳವಾರ. ಮಂಗಳವಾರ ಕೂಡ ದೇವಿಯ ಪವಿತ್ರ ದಿನ ಎಂದರು.