ಬೀದರ್: ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಿಂದ ನಿಡವಂಚಾ, ಹೊಚಕನಳ್ಳಿ ಹಾಗೂ ರಂಜೋಳ ಖೇಣಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 1.5 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ (Shailendra Beldale) ಅವರು ಚಾಲನೆ ನೀಡಿದ್ದಾರೆ.
ಮಹತ್ವದ ರಸ್ತೆ ಡಾಂಬರೀಕರಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಈ ರಸ್ತೆ ನಿರ್ಮಾಣವು ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದ್ದು, ಸಾರ್ವಜನಿಕರ ಜೀವನಮಟ್ಟವನ್ನು ಮತ್ತಷ್ಟು ಉನ್ನತಿಗೇರಿಸುವ ಪ್ರಮುಖ ಹೆಜ್ಜೆಯಾಗಲಿದೆ. ನಮ್ಮ ಕ್ಷೇತ್ರ, ನಮ್ಮ ಅಭಿವೃದ್ಧಿ ಎಂಬ ದೃಷ್ಟಿಕೋನದೊಂದಿಗೆ ಈ ಯೋಜನೆ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತೈಲ ಉತ್ಪನ್ನದಲ್ಲಿ ಭಾರತ ಆತ್ಮನಿರ್ಭರ್ ಇಲ್ಲ – ಮೋದಿ ಕರೆ ಸಮರ್ಥಿಸಿಕೊಂಡ ಶೋಭಾ ಕರಂದ್ಲಾಜೆ
ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿ ಪೂರ್ಣಗೊಂಡ ನಂತರ, ಗ್ರಾಮಗಳ ನಡುವಿನ ಸಂಪರ್ಕ ವ್ಯವಸ್ಥೆ ಗಣನೀಯವಾಗಿ ಸುಧಾರಣೆಯಾಗಲಿದ್ದು, ಸ್ಥಳೀಯ ಜನತೆಗೆ ವೇಗವಾದ, ಸುರಕ್ಷಿತ ಮತ್ತು ಸುಗಮ ಸಂಚಾರ ಸೌಲಭ್ಯ ಲಭ್ಯವಾಗಲಿದೆ. ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಸುಲಭವಾಗಿ ಸಾಗಿಸಬಹುದು, ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಸಮಯಕ್ಕೆ ತಲುಪಬಹುದು, ತುರ್ತು ಆರೋಗ್ಯ ಸೇವೆಗಳು ಇನ್ನಷ್ಟು ವೇಗವಾಗಿ ಲಭ್ಯವಾಗುತ್ತವೆ ಎಂದು ತಿಳಿಸಿದ್ದಾರೆ.
ಒಂದು ಉತ್ತಮ ರಸ್ತೆ ಅಂದರೆ ಕೇವಲ ಸಂಚಾರದ ಮಾರ್ಗವಲ್ಲ. ಅದು ಅಭಿವೃದ್ಧಿಯ ಹಾದಿ. ರಸ್ತೆ ಇದ್ದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ, ವ್ಯಾಪಾರ ಚಟುವಟಿಕೆಗಳು ಚುರುಕಾಗುತ್ತವೆ ಮತ್ತು ಗ್ರಾಮದ ಒಟ್ಟಾರೆ ಜೀವನಮಟ್ಟ ಏರಿಕೆಯಾಗುತ್ತದೆ. ಈ ಕಾಮಗಾರಿ ನಮ್ಮ ಪ್ರದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಹೊಸ ಬಲ ನೀಡಲಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಕೊತ್ತನೂರು ಬಳಿ ಶೆಡ್‌ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸಾವು

