ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೂರ್ಯನ ಪ್ರತಾಪ(Heat Stroke) ಹೆಚ್ಚಾಗುತ್ತಿದ್ದು, ಇಡೀ ಕರ್ನಾಟಕವೇ (Karnataka) ಬಿಸಿಲಿನ ಕೆಂಡದಂತಾಗಿದೆ. ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳು ಹಾಗೂ ಜಲಚರಗಳು ಸಹ ಬಿಸಿಲ ಬೇಗೆಗೆ ತತ್ತರಿಸಿ ಹೋಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದ್ದರೆ ಮತ್ತೊಂದು ಕಡೆ ಉದ್ಯಮಗಳು ಭಾರೀ ನಷ್ಟ ಅನುಭವಿಸುತ್ತಿವೆ.
ಕೋಳಿಗಳ ರಕ್ಷಣೆಗೆ ಹರಸಾಹಸ
ರಾಜ್ಯದ ಎರಡನೇ ಅತಿ ದೊಡ್ಡ ಮೊಟ್ಟೆ ಮತ್ತು ಚಿಕನ್ ಉತ್ಪಾದನಾ ಕೇಂದ್ರವಾದ ಕೊಪ್ಪಳ (Koppala) ಜಿಲ್ಲೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಕೋಳಿಗಳು (Chicken) ಸಾವನ್ನಪ್ಪುತ್ತಿವೆ. ಕೋಳಿ ಫಾರ್ಮ್‌ಗಳನ್ನು ತಂಪಾಗಿರಿಸಲು ಮಾಲೀಕರು ಅನಿವಾರ್ಯವಾಗಿ ಸ್ಪಿಂಕ್ಲರ್ ಮತ್ತು ಫಾಗರ್‌ಗಳ ಮೊರೆ ಹೋಗಿದ್ದಾರೆ. ಆದರೂ ಹೆಚ್ಚುತ್ತಿರುವ ತಾಪಮಾನ ಕುಕ್ಕುಟೋದ್ಯಮಕ್ಕೆ ದೊಡ್ಡ ಪೆಟ್ಟು ನೀಡುತ್ತಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಸುಡುವ ಬಿಸಿಲು: ಬತ್ತಿ ಬರಿದಾದ ಐತಿಹಾಸಿಕ ಮುಚಖಂಡಿ ಕೆರೆ!
ಬಿಸಿಲಿನ ತೀವ್ರತೆಗೆ ಜಲಮೂಲಗಳು ಬತ್ತುತ್ತಿದ್ದು, ನೀರು ಕಲುಷಿತಗೊಂಡು ಆಮ್ಲಜನಕದ ಕೊರತೆಯಿಂದ ಚಿಕ್ಕಬಳ್ಳಾಪುರದ (Chikkaballpura) ಕಂದವಾರ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ವಿಶಾಲವಾದ ಕೆರೆಯ ತುಂಬೆಲ್ಲಾ ಮೀನುಗಳ ಕಳೇಬರ ಕಾಣಿಸುತ್ತಿದ್ದು, ಮೀನುಗಾರರು ಕಣ್ಣೀರು ಹಾಕುವಂತಾಗಿದೆ.

ಗ್ರೀನ್ ಮ್ಯಾಟ್ ಆಸರೆ
ಅತಿ ಹೆಚ್ಚು ತಾಪಮಾನ ದಾಖಲಾಗುವ ಬಳ್ಳಾರಿ ಜಿಲ್ಲೆಯಲ್ಲಿ ವಾಹನ ಸವಾರರ ರಕ್ಷಣೆಗಾಗಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಗ್ರೀನ್ ಮ್ಯಾಟ್ (ಹಸಿರು ಪರದೆ) ಅಳವಡಿಸಲಾಗಿದೆ. ಆದರೆ ಸುಡುವ ಬಿಸಿಲಲ್ಲೇ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಕನಿಷ್ಠ ನೆರಳಿನ ವ್ಯವಸ್ಥೆಯನ್ನೂ ಇಲಾಖೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನೀರಿಗೂ ಪರದಾಟ
ಗಡಿ ಜಿಲ್ಲೆ ಬೀದರ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬ್ರೀಮ್ಸ್ (BRIMS) ಆಸ್ಪತ್ರೆಯಲ್ಲಿ ಇದೀಗ ನೀರಿನ ಹಾಹಾಕಾರ ಶುರುವಾಗಿದೆ. ಬಿಸಿಲಿನ ಬೇಗೆಯಿಂದ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಚಿಕಿತ್ಸೆಗಾಗಿ ಬಂದ ರೋಗಿಗಳು ಮತ್ತು ಅವರ ಸಂಬಂಧಿಕರು ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಇದನ್ನೂ ಓದಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ತುರ್ತು ಅನುದಾನ ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು?
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದು, ಬಿಸಿಲಿನಿಂದ ಪಾರಾಗಲು ಜನರು ಹಣ್ಣಿನ ರಸ, ಎಳನೀರು ಹಾಗೂ ನೆರಳಿನ ಆಸರೆ ಹುಡುಕುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ.
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಮಧ್ಯಾಹ್ನದ ವೇಳೆ ಅನಗತ್ಯವಾಗಿ ಹೊರಬರಬಾರದು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

