ಬಾಗಲಕೋಟೆ: ಸದ್ಯ ಜಿಲ್ಲೆಯಲ್ಲಿ ತಾಪಮಾನವು 39° ಸೆಲ್ಶಿಯಸ್ ದಾಟಿದ್ದು, ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತಾಪಕ್ಕೆ ಕೇವಲ ಮನುಷ್ಯರಷ್ಟೇ ಅಲ್ಲ, ಜಿಲ್ಲೆಯ ಪ್ರಮುಖ ಜಲಮೂಲಗಳು ಸಹ ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ಇದಕ್ಕೆ ಜೀವಂತ ಸಾಕ್ಷಿ ಎನ್ನುವಂತೆ ಬಾಗಲಕೋಟೆ(Bagalkote) ತಾಲೂಕಿನ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಮೀಪವಿರುವ ಐತಿಹಾಸಿಕ ಕೆರೆ ಇಂದು ಮೈದಾನವಾಗಿ ಬದಲಾಗಿದೆ.
ಬ್ರಿಟಿಷರ ಆಡಳಿತ ಅವಧಿಯಲ್ಲಿ ನಿರ್ಮಾಣಗೊಂಡು ಇತಿಹಾಸ ಪ್ರಸಿದ್ಧವಾಗಿದ್ದ ಈ ಮುಚಖಂಡಿ ಕೆರೆ(Muchakandi Lake) ಇಂದು ಹನಿ ನೀರಿಲ್ಲದೆ ಬಣಗುಡುತ್ತಿದೆ. ಸುಮಾರು 750 ಎಕರೆ ವಿಸ್ತೀರ್ಣ ಹೊಂದಿರುವ ಈ ಬೃಹತ್ ಕೆರೆ ಬಾಗಲಕೋಟೆ ನಗರ ಸೇರಿದಂತೆ ನವನಗರ, ವಿದ್ಯಾಗಿರಿ ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಅಂತರ್ಜಲಕ್ಕೆ ಪ್ರಮುಖ ಆಸರೆಯಾಗಿತ್ತು.
ಕೆರೆಯಲ್ಲಿ ನೀರಿರಬೇಕಾದ ಜಾಗದಲ್ಲಿ ಇಂದು ಬರೀ ಮುಳ್ಳಿನ ಕಂಟಿಗಳು ಮತ್ತು ಕಸ-ಕಡ್ಡಿಗಳು ಬೆಳೆದಿವೆ. ಕೆರೆಯು ನೋಡಲು ನೀರಾವರಿ ಪ್ರದೇಶದ ಬದಲು ಪಾಳು ಬಿದ್ದ ಹೊಲದಂತೆ ಕಾಣುತ್ತಿದೆ.
ಈ ಕೆರೆ ಬತ್ತಿದ್ದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಬೋರ್‌ವೆಲ್‌ಗಳು ಸಹ ಬತ್ತಿ ಹೋಗುತ್ತಿದ್ದು, ರೈತರು ಮತ್ತು ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಒದಗಿಸಲು ತುರ್ತು ಅನುದಾನ ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು?

ಅನುದಾನ ಏನಾಯ್ತು?
ಈ ಕೆರೆಯ ಅಭಿವೃದ್ಧಿಗಾಗಿ ಮತ್ತು ಹೂಳು ತೆಗೆಯಲು ಸರ್ಕಾರಗಳು ಈವರೆಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿವೆ. ಆದರೆ ಇಷ್ಟೆಲ್ಲಾ ಹಣ ವ್ಯಯವಾದರೂ ಕೆರೆಗೆ ವೈಜ್ಞಾನಿಕವಾಗಿ ನೀರು ತುಂಬಿಸುವ ಕೆಲಸ ಮಾತ್ರ ಆಗಿಲ್ಲ ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಬಿಸಿಲಿನ ತಾಪ – ಬರಿದಾಗುತ್ತಿದೆ ಹಾರಂಗಿ ಒಡಲು
ಐತಿಹಾಸಿಕ ಹಿನ್ನೆಲೆಯುಳ್ಳ ಮುಚಖಂಡಿ ಕೆರೆಯನ್ನು ಶಾಶ್ವತವಾಗಿ ತುಂಬಿಸುವ ಯೋಜನೆ ಜಾರಿಗೆ ಬರದಿದ್ದರೆ, ಬರುವ ದಿನಗಳಲ್ಲಿ ಬಾಗಲಕೋಟೆ ಜನತೆ ಮತ್ತಷ್ಟು ಭೀಕರ ಜಲಕ್ಷಾಮ ಎದುರಿಸಬೇಕಾಗುತ್ತದೆ ಎನ್ನುವುದು ಕಹಿ ಸತ್ಯ.



