– ಆತ್ಮಾಹುತಿ ಬಾಂಬ್ ದಾಳಿ ಶಂಕೆ
ಇಸ್ಲಾಮಾಬಾದ್: ಶಾಂತಿ ರ‍್ಯಾಲಿಯ ವೇಳೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ (Bomb Blast) ಪೊಲೀಸ್ ಸಿಬ್ಬಂದಿ ಸೇರಿ 13 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 18 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ನಡೆದಿದೆ.
ಭೀಕರ ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಸ್ವಾತ್ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಒತ್ತಾಯಿಸಿ, ಸ್ಥಳೀಯ ಬುಡಕಟ್ಟು ಮಂಡಳಿಯಾದ ಸ್ವಾತ್ ಅಮನ್ ಜಿರ್ಗಾ ಈ ಶಾಂತಿ ರ‍್ಯಾಲಿಯನ್ನು ಆಯೋಜಿಸಿತ್ತು. ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಪ್ರದೇಶದಲ್ಲಿ ಶಾಂತಿ ಕಾಪಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಇದನ್ನೂ ಓದಿ: ಎರಡು ಕೇಸ್‌ಗಳಲ್ಲಿ ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್‌ಗೆ ಬಾಂಗ್ಲಾ ಹೈಕೋರ್ಟ್ ಜಾಮೀನು

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸ್ಫೋಟ ಆತ್ಮಾಹುತಿ ದಾಳಿಯಂತೆಯೇ ಕಂಡುಬಂದಿದೆ. ಆದರೆ, ಇದು ಆತ್ಮಾಹುತಿ ದಾಳಿ ಎಂಬುದನ್ನು ಪಾಕಿಸ್ತಾನ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಸ್ಫೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದು, ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹೆಂಡತಿ ಡಿವೋರ್ಸ್ ಕೇಳಿದ್ದಕ್ಕೆ ಮನನೊಂದು ವ್ಯಕ್ತಿ ನೇಣಿಗೆ ಶರಣು
ಘಟನೆಯ ಬಳಿಕ ಪೊಲೀಸರು ಹಾಗೂ ಇತರ ಭದ್ರತಾ ಪಡೆಗಳು ಸ್ಫೋಟ ಸಂಭವಿಸಿದ ಪ್ರದೇಶವನ್ನು ಸುತ್ತುವರಿದು ತನಿಖೆ ಆರಂಭಿಸಿವೆ. ಸ್ಫೋಟದ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಇದನ್ನೂ ಓದಿ: ಪೆರುವಿನಲ್ಲಿ ಪ್ರವಾಸಿ ವಿಮಾನ ಪತನ; 13 ಮಂದಿ ಸಾವು
