ಢಾಕಾ: ಬಾಂಗ್ಲಾದೇಶ ಹೈಕೋರ್ಟ್ (Bangladesh High Court) ಭಾನುವಾರ ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರಿಗೆ ಎರಡು ಪ್ರಕರಣಗಳಲ್ಲಿ ಜಾಮೀನು ನೀಡಿದೆ.
ಬಾಂಗ್ಲಾದೇಶ ಹೈಕೋರ್ಟ್ ಚಿನ್ಮಯ್ ಕೃಷ್ಣ ದಾಸ್ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳ ಪೈಕಿ ಎರಡರಲ್ಲಿ ಜಾಮೀನು ನೀಡಿದೆ. ಈ ಪ್ರಕರಣಗಳಲ್ಲಿ ಕೊಲೆ ಯತ್ನ, ವಿಧ್ವಂಸಕ ಕೃತ್ಯ, ಸರ್ಕಾರಿ ಕರ್ತವ್ಯಗಳಿಗೆ ಅಡ್ಡಿಪಡಿಸುವುದು ಮತ್ತು ಸಂಬಂಧಿತ ಅಪರಾಧಗಳ ಆರೋಪಗಳು ಸೇರಿವೆ. ಇಬ್ಬರು ನ್ಯಾಯಾಧೀಶರ ಹೈಕೋರ್ಟ್ ಪೀಠ ಇಂದು ಜಾಮೀನು ಆದೇಶ ನೀಡಿದೆ ಎಂದು ಚಿನ್ಮಯ್ ಅವರ ವಕೀಲ ಅಪುರ್ಬಾ ಕುಮಾರ್ ಭಟ್ಟಾಚಾರ್ಜಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ರಿಂದ ಅಂತರ ಕಾಯ್ದುಕೊಂಡ ಇಸ್ಕಾನ್
ನ್ಯಾಯಮೂರ್ತಿ ಕೆ.ಎಂ.ಜಾಹಿದ್ ಸರ್ವರ್ ಮತ್ತು ನ್ಯಾಯಮೂರ್ತಿ ಶೇಖ್ ಅಬು ತಾಹೆರ್ ಅವರನ್ನೊಳಗೊಂಡ ಹೈಕೋರ್ಟ್ ಪೀಠವು ಜಾಮೀನು ಮಂಜೂರು ಮಾಡಿದೆ. ಇತರ ಎರಡು ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳ ವಿಚಾರಣೆಯನ್ನು ಆ.16 ರಂದು ನಿಗದಿಪಡಿಸಲಾಗಿದೆ.
ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಢಾಕಾ ವಿಮಾನ ನಿಲ್ದಾಣದಲ್ಲಿ 2024ರ ನವೆಂಬರ್‌ನಲ್ಲಿ ಚಿನ್ಮಯ್ ಅವರನ್ನು ಬಂಧಿಸಲಾಗಿತ್ತು. ಇಸ್ಕಾನ್‌ನ ಮಾಜಿ ನಾಯಕ ಮತ್ತು ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋಟೆಯ ವಕ್ತಾರರಾಗಿದ್ದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂಗಳ ಧ್ವನಿಯಾಗಿದ್ದ ಇಸ್ಕಾನ್‌ನ ಚಿನ್ಮಯ್ ಕೃಷ್ಣ ದಾಸ್ ಅರೆಸ್ಟ್
ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನ ಖಂಡಿಸಿ ಪ್ರತಿಭಟನೆಗಳು ನಡೆದಿದ್ದವು. ನವೆಂಬರ್ 27 ರಂದು ಚಟ್ಟೋಗ್ರಾಮ್ ನ್ಯಾಯಾಲಯದ ಕಟ್ಟಡದ ಹೊರಗೆ ಅವರ ಅನುಯಾಯಿಗಳು ಮತ್ತು ಕಾನೂನು ಜಾರಿ ಅಧಿಕಾರಿಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು.
