ತೆಲುಗು ಚಿತ್ರರಂಗದ ಸ್ಟಾರ್ ನಟಿ ಎಂಬ ಖ್ಯಾತಿಯ ನಡುವೆಯೂ ಸಮಂತಾ (Samantha Ruth Prabhu) ವೈಯಕ್ತಿಕ ಬದುಕಿನ ಏರುಪೇರುಗಳಿಂದ ಟೀಕೆಗೆ ಒಳಗಾಗಿದ್ದರು. ನಟ ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ಸಮಂತಾ ಅನುಭವಿಸಿದ್ದ ಯಾತನೆಗಳನ್ನ ಅವರೇ ಅನೇಕ ಬಾರಿ ಸೋಶಿಯಲ್ ಮೀಡಿಯಾ (Social Media) ಮೂಲಕ ಹೇಳಿಕೊಂಡಿದ್ದರು.
ವಿಚ್ಛೇದನದ ಘಾಸಿಯ ನಡುವೆ ಮೈಯೋಸಿಟಿಸ್ (Myositis) ಎಂಬ ಕಾಯಿಲೆ ಸಮಂತಾ ತುತ್ತಾಗಿದ್ದ ವಿಚಾರ ಗುಪ್ತವಾಗಿರಲಿಲ್ಲ. ಯಾವುದೇ ಕಾಯಿಲೆಯಿಂದ ಬಾದಿತ ವ್ಯಕ್ತಿ ಹೋರಾಡುವುದು ಸುಲಭದ ಹಾದಿಯೂ ಆಗಿರಲ್ಲ. ಆದ್ರೆ ಸಮಂತಾ ತಮಗೆ ಎದುರಾದ ಕಾಯಿಲೆ ಎಂಬ ನ್ಯೂನ್ಯತೆಯನ್ನೇ ಹೊಸಕಿ ಹಾಕಿ ಎದ್ದುನಿಂತ ಬಗೆಯೇ ವಿಶೇಷ. ಆ ಪ್ರಯಾಣದ ಕುರಿತು ಇದೀಗ ಸಮಂತಾ ಮನಬಿಚ್ಚಿ ಮಾತನಾಡಿದ್ದಾರೆ.

ಸಮಂತಾ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ `ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರದ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಜೊತೆಗೆ ಸಂದರ್ಶನ ಕೊಡುವುದರಲ್ಲಿಯೂ ಬ್ಯುಸಿಯಾಗಿದ್ದಾರೆ. ಈ ವೇಳೆ ಸೋಶಿಯಲ್ ಮೀಡಿಯಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಮಂತಾ ತಮಗಿದ್ದ ಕಾಯಿಲೆ ಹಾಗೂ ಅದರ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಮಯೋಸಿಟಿಸ್ ಕಾಯಿಲೆಗೆ ಒಳಗಾಗ ವ್ಯಕ್ತಿಗೆ ಬಾಹ್ಯವಾಗಿ ಯಾವುದೇ ಲಕ್ಷಣ ಕಾಣೋದಿಲ್ಲ. ಆದರೆ ಮೂಳೆ ಮತ್ತು ಮಾಂಸಖಂಡಗಳಲ್ಲಿ ವಿಪರೀತ ನೋವು ಅನುಭವಿಸಬೇಕಾಗುತ್ತದೆ. ಇಂತಹ ಕಾಯಿಲೆಗೆ ತುತ್ತಾದ ಸಮಂತಾ ಆಗಷ್ಟೇ ವಿಚ್ಛೇದಿತೆ ಎಂಬ ಟೀಕೆಗಳನ್ನ ಕೂಡ ಎದುರಿಸುತ್ತಿದ್ದರು.

ಈ ಬಗ್ಗೆ ನಟಿ ಸಮಂತಾ ಮಾತನಾಡಿ, ನನಗೆ ಸ್ಟಾರ್‌ಡಂ ಚಟ ಅಂಟಿಕೊಂಡಿತ್ತು. ಹೀಗಾಗಿ ನಿರಂತರವಾಗಿ ಯಶಸ್ಸಿನ ಬೆನ್ನಟ್ಟುತ್ತಿದ್ದೆ. ಆದರೆ ಆರೋಗ್ಯ ಸ್ಥಿತಿಯಿಂದ ಸಿಕ್ಕ ವಿರಾಮ ಜೀವನವನ್ನ ವಿಭಿನ್ನವಾಗಿ ನೋಡಲು ಸಹಾಯಕಾರಿಯಾಯಿತು. ಸಿನಿಮಾಗಳಿಂದ ದೂರ ಇರುವ ಸಮಯವನ್ನ ಹಳೆಯ ಜೀವನ ಶೈಲಿಗೆ ಒಗ್ಗಿಸಿಕೊಂಡೆ. ಜೊತೆಗೆ ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲೂ ಪುನರ್ ವಿಮರ್ಶಿಸುವ ಅಗತ್ಯ ಇದೆ ಅನ್ನೋದನ್ನ ಕಲಿತೆ. ಶಿಸ್ತಿನ ಜೀವನ ಶೈಲಿ ದೇಹ ಹಾಗೂ ಮನಸ್ಸನ್ನ ಹತೋಟಿಯಲ್ಲಿಟ್ಟಿದ್ದೆ ಎಂದಿದ್ದಾರೆ.

ನಾಗಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾರ ಬದಲಾದ ಜೀವನ ಶೈಲಿ ಎದ್ದು ಕಾಣುವಂತಹದ್ದೇ ಆಗಿದೆ. ಆಧ್ಯಾತ್ಮಿಕತೆಗೆ ಒತ್ತು ಕೊಟ್ಟರು. ಜೊತೆಗೆ ತಮ್ಮ ದೇಹದಲ್ಲಿ ಫಿಟ್ನೆಸ್ ಮೆಂಟೇನ್ ಮಾಡಿದರು. ಪಾತ್ರಗಳ ಆಯ್ಕೆಯಲ್ಲೂ ಬದಲಾದರು. ಇದೀಗ ಎಲ್ಲರಿಗೂ ಕಾಣುತ್ತಿದ್ದ ಈ ಸತ್ಯವನ್ನ ಅವರೇ ಒಪ್ಪಿಕೊಂಡಿದ್ದಾರೆ. ಹೀಗೆ ಕಾಯಿಲೆ ಎಂಬ ನ್ಯೂನ್ಯತೆ ಎದುರಾದರೂ ಅದರಿಂದಲೇ ಯಶಸ್ಸಿನ ದಾರಿ ಹೇಗೆ ಹತ್ತಬಹುದು ಅನ್ನೋದಕ್ಕೆ ಸಮಂತಾ ಉದಾಹರಣೆಯಾಗಿದ್ದಾರೆ.
