ಮೈಸೂರು: ಜಿ.ಟಿ.ದೇವೇಗೌಡರು ತಮ್ಮ ತಪ್ಪನ್ನು ತಿದ್ದಿಕೊಂಡು ಪಕ್ಷದಲ್ಲೇ ಮುಂದುವರೆಯಲು ನಿರ್ಧರಿಸಿದರೆ ಅದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ (Sa.Ra.Mahesh) ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ವರಿಷ್ಠರಿಗೆ ಜಿ.ಟಿ.ದೇವೇಗೌಡರ ಮೇಲೆ ಮತ್ತೆ ನಂಬಿಕೆ ಬಂದು ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದರೆ ಅದಕ್ಕೂ ನಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮೋದಿ ಸಲಹೆ ಪಾಲಿಸ್ತೀನಿ.. ರೈಲು, ಬಸ್‌ನಲ್ಲೇ ಓಡಾಡ್ತೀನಿ: ಕೇಂದ್ರ ಸಚಿವ ಸೋಮಣ್ಣ
ಜಿ.ಟಿ.ದೇವೇಗೌಡರಿಂದ (G.T.Deve Gowda) ಪಕ್ಷಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಅವರು ಪ್ರತಿ ಚುನಾವಣೆಗೆ ಒಂದೊಂದು ರೀತಿಯ ತೀರ್ಮಾನ ಮಾಡುತ್ತಾರೆ. ಅವರ ನಿರ್ಧಾರಗಳಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗಿದೆ ಎಂದು ಅವರು ಆರೋಪಿಸಿದರು.
ಪಕ್ಷಕ್ಕಿಂತ ನಮಗೆ ಯಾರೂ ದೊಡ್ಡವರಲ್ಲ. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರ ಅವಶ್ಯಕತೆ ಇದೆ ಹೊರತು, ಇಂತಹ ನಾಯಕರ ಅನಿವಾರ್ಯತೆ ಇಲ್ಲ ಎಂದು ಅವರು ಕಟುವಾಗಿ ಪ್ರತಿಕ್ರಿಯಿಸಿದರು.
ಪಕ್ಷ ಜಿ.ಟಿ.ದೇವೇಗೌಡರಿಗೆ ಎಲ್ಲಾ ರೀತಿಯ ಅಧಿಕಾರ ಕೊಟ್ಟಿತ್ತು. ಆದರೆ ಅವರು ಪಕ್ಷಕ್ಕೆ ಮೋಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಈ ಭಾಗದಲ್ಲಿ ಸಾಮೂಹಿಕ ನಾಯಕತ್ವ ಕಟ್ಟಿಕೊಂಡಿದ್ದೇವೆ ಎಂದರು. ಇದನ್ನೂ ಓದಿ: ನಾನು ಎಲ್ಲೂ ಹೋಗಿಲ್ಲ, ಜೆಡಿಎಸ್‌ನಲ್ಲೇ ಇದ್ದೇನೆ: ಜಿಟಿಡಿ ಸ್ಪಷ್ಟನೆ
ನಾಳೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾವೇಶ ಇದೆ. ಈ ಕಾರಣ ದೊಡ್ಡಗೌಡರಿಗೆ ಹುಟ್ಟುಹಬ್ಬಕ್ಕೂ ಮುಂಚೆಯೇ ಶುಭಾಶಯ ತಿಳಿಸಿದ್ದಾರೆ. ಈ ಎಲ್ಲಾ ತಂತ್ರಗಳು ನಮಗೆ ಅರ್ಥವಾಗುತ್ತವೆ ಎಂದು ವ್ಯಂಗ್ಯವಾಡಿದರು.

