ಮಂಡ್ಯ: ತನ್ನ ಸ್ನೇಹಿತನನ್ನೇ ಪ್ರೀತಿಸಿ ಮದುವೆಯಾಗಬೇಕೆಂದು ರೌಡಿಶೀಟರ್ ಹಾಗೂ ಆತನ ಸಹಚರರು ಮನೆಗೆ ನುಗ್ಗಿ ಬೆದರಿಕೆ ಹಾಕಿ, ಹಲ್ಲೆ ನಡೆಸಿದ ಪರಿಣಾಮ ಮನನೊಂದ 17 ವರ್ಷದ ಅಪ್ರಾಪ್ತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾದ ಘಟನೆ ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿದೆ.
ಚಂದಗಾಲು ಗ್ರಾಮದ ಸಿಂಚನಾ (17) ಆತ್ಮಹತ್ಯೆಗೆ ಶರಣಾದ ಬಾಲಕಿ. ರೌಡಿಶೀಟರ್ ಹೃತಿಕ್ ಗೌಡ ಅಲಿಯಾಸ್ ಚಿಂಟು ಹಾಗೂ ಆತನ ನಾಲ್ವರು ಸ್ನೇಹಿತರು ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ್ದೇ ಬಾಲಕಿಯ ಸಾವಿಗೆ ಕಾರಣ ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪ
ಪಕ್ಕದ ಗ್ರಾಮದ ಯುವಕನೊಬ್ಬ ತನ್ನನ್ನ ಪ್ರೀತಿಸುವಂತೆ ಬಾಲಕಿಗೆ ನಿರಂತರವಾಗಿ ಸಂದೇಶಗಳನ್ನ ಕಳುಹಿಸಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಬಾಲಕಿ ವಿದ್ಯಾಭ್ಯಾಸದ ಕಡೆ ಗಮನಹರಿಸುವ ಸಲುವಾಗಿ ಆತನ ಪ್ರಸ್ತಾಪವನ್ನು ನಿರಾಕರಿಸಿದ್ದಳು. ಈ ಸಂಬಂಧ ಬಾಲಕಿಯ ಪೋಷಕರು ಯುವಕನ ಕುಟುಂಬದವರ ಗಮನಕ್ಕೆ ತಂದು ಎಚ್ಚರಿಕೆಯನ್ನೂ ನೀಡಿದ್ದರು ಎಂದು ಹೇಳಲಾಗಿದೆ.
ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರೋಪ
ಬಾಲಕಿ ಪ್ರೀತಿಸಲು ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಯುವಕ, ಸ್ಥಳೀಯ ರೌಡಿಶೀಟರ್ ಹೃತಿಕ್ ಗೌಡ ಅಲಿಯಾಸ್ ಚಿಂಟು ಸಹಾಯ ಪಡೆದಿದ್ದಾನೆ ಎನ್ನಲಾಗಿದೆ. ಚಿಂಟು ಹಾಗೂ ಆತನ ಮೂವರು ಸಹಚರರು ಎರಡು ಬೈಕ್ಗಳಲ್ಲಿ ಬಾಲಕಿಯ ಮನೆಗೆ ನುಗ್ಗಿ, ನಮ್ಮ ಸ್ನೇಹಿತನನ್ನೇ ಪ್ರೀತಿಸಿ ಮದುವೆಯಾಗಬೇಕು ಎಂದು ಬಾಲಕಿ ಹಾಗೂ ಪೋಷಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಗಲಾಟೆ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮನನೊಂದು ಬಾಲಕಿ ಆತ್ಮಹತ್ಯೆ
ರೌಡಿ ಗ್ಯಾಂಗ್ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಸಿಂಚನ, ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಮಗಳ ಸಾವಿಗೆ ಕಾರಣರಾದ ರೌಡಿಶೀಟರ್ ಚಿಂಟು ಹಾಗೂ ಆತನ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಪೋಷಕರು ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

