Connect with us

Districts

ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

Published

on

Share this

ಮೈಸೂರು: ನೂತನ ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರಕ್ಕೂ ಮುನ್ನ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರು ಅಧಿಕಾರ ಸ್ವೀಕಾರ ಮಾಡಿದರು.

ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ಅವರು, ಮೊದಲಿಗೆ ತಾಯಿ ಚಾಮುಂಡಿಯ ಆಶೀರ್ವಾದ ಪಡೆದು ಅಧಿಕಾರ ಸ್ವೀಕಾರ ಮಾಡಿದ್ದೇನೆ. ಸದ್ಯಕ್ಕೆ ಯಾವುದೇ ಅಧಿಕಾರಿಯ ಜೊತೆ ಚರ್ಚೆ ಮಾಡಿಲ್ಲ. ಆದರೆ ನಮ್ಮ ಮುಂದೆ ಎರಡು ವಿಚಾರ ಗಂಭೀರವಾಗಿದೆ. ಮೊದಲಿಗೆ ಬೆಂಗಳೂರು ನಂತರ ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಲ್ಲಿ ಕೊರೊನಾ ಟೆಸ್ಟಿಂಗ್ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದು ಬಗ್ಗೆ ಗೊತ್ತಿದೆ. ಹೀಗಾಗಿ ಟೆಸ್ಟಿಂಗ್ ಹೆಚ್ಚಿಸುವ ಅಗತ್ಯವಿದೆ. ಇದಕ್ಕೆ ಜನರ ಸಹಕಾರ ಬೇಕು. ಕೊರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಟೆಸ್ಟಿಂಗ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ದಸರಾಗೆ ಸಿದ್ಧತೆ ಈಗಾಗಲೇ ಆರಂಭವಾಗಿದೆ. ನಾನು ಇದೇ ಮೊದಲ ಬಾರಿಗೆ ದಸರಾ ಮಾಡುತ್ತಿದ್ದೇನೆ. ಈ ಹಿಂದೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ ನಾನು ಹಾಸನ ಜಿಲ್ಲಾಧಿಕಾರಿಯಾಗಿದ್ದೆ. ಅಲ್ಲಿ ಸುಮಾರು 20-25 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು. ಆದರೆ ಇದು ನಾಡಹಬ್ಬ, ಅದರಲ್ಲೂ ಕೋವಿಡ್ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿ ಕೆಲಸ ಮಾಡಬೇಕು. ಈ ಎರಡು ವಿಚಾರದ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ. ತುರ್ತಾಗಿ ಅಧಿಕಾರಿಗಳ ಸಭೆ ನಡೆಸುತ್ತೇನೆ. ಮೈಸೂರು ನನಗೆ ಹೊಸದಲ್ಲ. ಮೈಸೂರಿನಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ. ಇದಕ್ಕೆ ಜನರ ಸಹಕಾರ ತುಂಬಾ ಅಗತ್ಯವಾಗಿದೆ ಎಂದು ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಅವರನ್ನ ಒಂದೇ ತಿಂಗಳಲ್ಲಿ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಶರತ್ ಜಾಗಕ್ಕೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ವರ್ಗಾವಣೆ ಯಾಕೆ?:
ಒಂದು ತಿಂಗಳ ಹಿಂದೆ ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದ್ರೆ ಕಳೆದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿದೆ. ಆದ್ರೆ ಇದುವರೆಗೂ ಜಿಲ್ಲಾಧಿಕಾರಿ ದಸರಾ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.

Click to comment

Leave a Reply

Your email address will not be published. Required fields are marked *

Advertisement