ಪಾಟ್ನಾ: ಬಿಹಾರ ಮಾಜಿ ಸಿಎಂಗಳಾದ ಲಾಲು ಪ್ರಸಾದ್ ಯಾದವ್ (Lalu Yadav) ಮತ್ತು ಅವರ ಪತ್ನಿ ರಾಬ್ರಿದೇವಿ (Rabri Devi) ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ (Z+) ಭದ್ರತೆಯನ್ನು ಬಿಹಾರ ಸರ್ಕಾರ ಹಿಂಪಡೆದಿದೆ. ಈ ಹಿನ್ನೆಲೆ ಆರ್‌ಜೆಡಿ ಕಾರ್ಯಕರ್ತರು ಕೈಯಲ್ಲಿ ಲಾಠಿ ಹಿಡಿದು ಪಟ್ನಾದಲ್ಲಿರುವ ತಮ್ಮ ನಾಯಕರ ಮನೆ ಕಾವಲು ಕಾಯಲು ಪ್ರಾರಂಭಿಸಿದ್ದಾರೆ.
ಹಿರಿಯ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ರಾಬ್ರಿದೇವಿ ಅವರು ಸರ್ಕಾರ ನೀಡಿದ್ದ ವೈ ಭದ್ರತೆಯನ್ನು ತಿರಸ್ಕರಿಸಿದ್ದಾರೆ. ಪಾಟ್ನಾದಲ್ಲಿರುವ 10, ಸರ್ಕ್ಯೂಲರ್ ರಸ್ತೆಯಲ್ಲಿರುವ ಬಂಗಲೆಯ ಭದ್ರತೆಗಾಗಿ ನಿಯೋಜಿಸಿದ್ದ ಸಿಬ್ಬಂದಿಯನ್ನ ವಾಪಾಸ್ ಕಳುಹಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ದೆಹಲಿಯ ಜಂತರ್ ಮಂತರ್‌ನಲ್ಲಿ ʻಕಾಕ್ರೋಚ್ʼಗಳ ಕಿಚ್ಚು – ತೀವ್ರ ಕಾವು ಪಡೆದುಕೊಂಡ ಹೋರಾಟ
ಸರ್ಕಾರದ ನಿರ್ಧಾರದ ವಿರುದ್ಧ ಆರ್‌ಜೆಡಿ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಸ್ವತಃ ತಾವೇ ಲಾಲು ಪ್ರಸಾದ್ ಕುಟಂಬ ಮತ್ತು ಬಂಗಲೆಯನ್ನು ರಕ್ಷಿಸಲು ನಿಂತಿದ್ದಾರೆ. ಹೊಸ ಭದ್ರತಾ ವ್ಯವಸ್ಥೆಯಲ್ಲಿ ಲಾಲು ಪ್ರಸಾದ್ ಮತ್ತು ರಾಬ್ರಿದೇವಿಯವರಿಗೆ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಸಿಬ್ಬಂದಿ, ಅಂಗರಕ್ಷಕರು ಪೈಲೆಟ್ ಮತ್ತು ಬುಲೆಟ್‌ಪ್ರೂಫ್ ಕಾರನ್ನು ನೀಡಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಲಾಲು ಪ್ರಸಾದ್ ಪುತ್ರ ಹಾಗೂ ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಕೂಡ ತಮಗೆ ನೀಡಲಾಗಿದ್ದ ವೈ ಕೆಟಗರಿ ಭದ್ರತೆಯನ್ನು ಹಿಂದಿರುಗಿಸಿದ್ದಾರೆ. ಜೊತೆಗೆ ಇನ್ನೊಬ್ಬ ಪುತ್ರ ತೇಜಸ್ ಪ್ರತಾಪ್ ಯಾದವ್‌ಗೆ ನೀಡಲಾಗಿದ್ದ ಭದ್ರತೆಯನ್ನು ಕೂಡ ಹಿಂಪಡೆಯಲಾಗಿದೆ.
ಈ ಬಗ್ಗೆ ಲಾಲು ಯಾದವ್, ಪತ್ನಿ ರಾಬ್ರಿದೇವಿ ಹಾಗೂ ಪುತ್ರಿ ರೋಹಿಣಿ ಆಚಾರ್ಯ ಮಾತನಾಡಿ, ನಮ್ಮ ಕುಟುಂಬವನ್ನು ಅಪಾಯಕ್ಕೆ ಸಿಲುಕಿಸುವ ದುರುದ್ದೇಶದಿಂದ ಸರ್ಕಾರ ಕುಟುಂಬದ ಭದ್ರತೆ ಕಡಿತಗೊಳಿಸಿದೆ. ಆರ್‌ಜೆಡಿ ಬೆಂಬಲಿಗರೇ ಯಾದವ್ ಕುಟುಂಬದ ನಿಜವಾದ ರಕ್ಷಕರು. ಎಲ್ಲರೂ ಕುಟುಂಬದ ನಿವಾಸದ ಮುಂದೆ ಬನ್ನಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ದೀದಿ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ – 8 ಶಾಸಕರು, 6 ಸಂಸದರಷ್ಟೇ ಸಭೆಗೆ ಹಾಜರ್
ಇತ್ತೀಚಿಗಷ್ಟೇ ಬಿಹಾರ ಸರ್ಕಾರ ರಾಬ್ರಿದೇವಿ ಅವರಿಗೆ 10, ಸರ್ಕ್ಯೂಲರ್ ರೋಡ್ ಬಂಗಲೆಯನ್ನು ಖಾಲಿ ಮಡುವಂತೆ ಸೂಚಿಸಿತ್ತು. ಅಷ್ಟೇ ಅಲ್ಲದೆ, ಅದನ್ನು ಬಿಹಾರದ ಸಚಿವ ನಂದಕಿಶೋರ್ ರಾಮ್ ಅವರಿಗೆ ನೀಡಿತ್ತು. ಇದಾದ ಕೆಲವೇ ದಿನಗಳಲ್ಲಿ ಭದ್ರತೆಯ ವಿವಾದ ಸೃಷ್ಟಿಯಾಗಿದೆ.
ಈ ನಡುವೆ ಲಾಲು ಪ್ರಸಾದ್ ಪತ್ನಿ ರಾಬ್ರಿದೇವಿ ಮನೆ ಬಿಟ್ಟುಕೊಡಲು ನಿರಾಕರಿಸಿದ್ದು, ತಾಕತ್ತಿದ್ದರೆ ನಮ್ಮನ್ನು ಬಲವಂತವಾಗಿ ಮನೆಯಿಂದ ಹೊರಹಾಕಲಿ ಎಂದು ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
