ಕೆ.ಪಿ. ನಾಗರಾಜ್
ಮೈಸೂರು: ಮಳೆ ಬಿದ್ದರೆ ಮಣ್ಣಿಗೆ ಒಂದು ವಿಶೇಷವಾದ, ಹಿತವಾದ ವಾಸನೆ ಬರುತ್ತದೆ. ಅದೇ ರೀತಿ ಸಿದ್ದರಾಮನಹುಂಡಿ(Siddaramanahundi) ಎಂಬ ಪುಟ್ಟ ಹಳ್ಳಿಯ ಪಾಲಿಗೆ ‘ಸಿದ್ದು’ ಎಂಬ ಎರಡಕ್ಷರ ಹೆಸರೇ ಒಂದು ಆಪ್ತ ಭಾವನೆ. ಅದು ಕೇವಲ ರಾಜಕೀಯದ ಹೆಸರಲ್ಲ, ಅದು ತಲೆಮಾರುಗಳ ರಕ್ತ ಸಂಬಂಧ!
“ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ…” ಎಂಬ ಬ್ರೇಕಿಂಗ್ ನ್ಯೂಸ್‌ಗಳು ಟಿವಿ ಪರದೆಯ ಬಿತ್ತರವಾಗುತ್ತಿದ್ದಾಗ, ಅದನ್ನು ನಂಬುವ ಸ್ಥಿತಿಯಲ್ಲಂತೂ ಸಿದ್ದರಾಮನಹುಂಡಿಯ ಜನ ಇರಲಿಲ್ಲ. ಆದರೆ, ಆ ಸುದ್ದಿ ಅಧಿಕೃತ ಎಂದು ಘೋಷಣೆಯಾದ ಮರುಕ್ಷಣ ಇಡೀ ಊರು ದಿಢೀರನೆ ಮೌನಕ್ಕೆ ಶರಣಾಯಿತು. ಹೆಣ್ಣುಮಕ್ಕಳ, ಹಿರಿಯರ ಕಣ್ಣಾಲಿಗಳು ತೇವಗೊಂಡವು. ಯಾಕಂದರೆ, ಸಿದ್ದರಾಮನಹುಂಡಿಗೆ ಸಿದ್ದರಾಮಯ್ಯ ಎಂದರೆ ಹೈಕಮಾಂಡ್ ಮೆಚ್ಚಿದ ಮುಖ್ಯಮಂತ್ರಿ ಅಲ್ಲ, ಇಡೀ ಊರು ಎದೆಯ ಮೇಲಿಟ್ಟುಕೊಂಡು ಬೆಳೆಸಿದ “ನಮ್ಮ ಹುಡುಗ.”
ಸಿದ್ದರಾಮಯ್ಯ(Siddaramaiah) ಅವರ ಹೆಸರನ್ನೇ ಉಚ್ಚರಿಸುವಾಗಲೂ ಇಲ್ಲಿ ಜನ “ಅವರು” ಅಂತ ಹೇಳೋದಿಲ್ಲ. “ನಮ್ಮ ಸಾಹೇಬ್ರು” ಅಂತಲೇ ಹೇಳ್ತಾರೆ. ಹಳ್ಳಿಯ ಹಿರಿಯರೊಬ್ಬರು ಹೇಳ್ತಿದ್ದರು, “ಅವನು ಎಷ್ಟೇ ದೊಡ್ಡವನಾದ್ರೂ… ಇಲ್ಲಿ ಬರೋವಾಗ ಇನ್ನೂ ಹಳೆಯ ಸಿದ್ದುನೇ” ಏಕೆಂದರೆ ಸಿದ್ದರಾಮಯ್ಯ ಈ ಜನರ ಜೊತೆ ಇರೋದೇ ಹಾಗೇ. ಊರಿಗೆ ಬಂದರೆ ಸಾಕು ಎಲ್ಲರನ್ನು ಅವರದೇ ಹೆಸರಲ್ಲಿ ಕರೆದು ಮಾತಾಡಿಸುತ್ತಾರೆ. ಹೀಗಾಗಿ ಸಿದ್ದರಾಮನಹುಂಡಿ ಜನಕ್ಕೆ ಯಾವಾಗಲೂ ಅವರು ಹಳೆಯ ಹಳೆಯ ಸಿದ್ದರಾಮಯ್ಯನೇ!
ರಾಜಕೀಯದಲ್ಲಿ ಅಧಿಕಾರ ಬಿಟ್ಟು ಹೋಗೋದು ಹೊಸದಲ್ಲ. ಕೆಲವರ ಅಧಿಕಾರ ಕೇವಲ ಕುರ್ಚಿಯಲ್ಲಿ ಇರುತ್ತದೆ. ಇನ್ನು ಕೆಲವರದ್ದು ಜನರ ಮನಸ್ಸಿನಲ್ಲಿ ಇರುತ್ತದೆ. ಸಿದ್ದರಾಮಯ್ಯ ಎರಡನೇ ವರ್ಗಕ್ಕೆ ಸೇರಿದವರು. ಅವರು ಸಿಎಂ ಕುರ್ಚಿ ಬಿಟ್ಟ ಈ ದಿನ ಸಿದ್ದರಾಮನಹುಂಡಿಯಲ್ಲಿ ಸದ್ದು ಇರಲಿಲ್ಲ. ಮನೆ ಮನೆಗಳಲ್ಲೂ ವಿಚಿತ್ರ ಮೌನ ಇತ್ತು. ಸಿದ್ದರಾಮಯ್ಯರ ರಾಜಕೀಯ ಜೀವನ ಅಂದ್ರೆ ಹೋರಾಟದ ಚರಿತ್ರೆ. ಬಡತನದ ಮಣ್ಣಿನಿಂದ ಹೊರಬಂದು ರಾಜ್ಯದ ಅತಿ ದೊಡ್ಡ ಕುರ್ಚಿಯವರೆಗೆ ಹೋದ ಸುದೀರ್ಘ ಪಯಣ. ಆದ್ರೆ ಸಿದ್ದರಾಮನಹುಂಡಿಯ ಜನರಿಗೆ ಆ ಕಥೆಯಲ್ಲಿ ದೊಡ್ಡದಾಗಿ ಕಾಣೋದು ಅಧಿಕಾರವಲ್ಲ; ಸಿದ್ದರಾಮಯ್ಯ ಅವರು ಮರೆತಿಲ್ಲದ ಹುಟ್ಟೂರಿನ ಹಳ್ಳಿ ಮನಸ್ಸು. ಇದನ್ನೂ ಓದಿ: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ: ಸಿದ್ದರಾಮಯ್ಯ

ಊರಿನಲ್ಲಿನ ಸಿದ್ದರಾಮಯ್ಯ ಅವರ ಬಾಲ್ಯ ಸ್ನೇಹಿತರಿಗೆ ಸಿದ್ದರಾಮಯ್ಯ ಬಗ್ಗೆ ಬಹಳ ಹೆಮ್ಮೆಯಿದೆ. ಚಪ್ಪಲಿ ಧೂಳು ಹಿಡಿದ ಹುಡುಗ, ಜಾತ್ರೆಗಳಲ್ಲಿ ತಿರುಗಾಡುತ್ತಿದ್ದ ಯುವಕ, ಹಳ್ಳಿಯ ಬೀದಿಯಲ್ಲಿ ಸೈಕಲ್ ಓಡಿಸುತ್ತಿದ್ದ ಸಿದ್ದರಾಮಯ್ಯ ಇಂದು ಈ ರಾಜ್ಯ ರಾಜಕಾರಣದ ದೊಡ್ಡ ಅಧ್ಯಾಯ ಬರೆದು ಕುರ್ಚಿ ಇಳಿದಿದ್ದಾರೆ. ಇದು ಇಡೀ ಊರಿನ ಗರ್ವಕ್ಕೆ ಕಾರಣವಾಗಿದೆ. ಅದಕ್ಕೇ ಊರಿನ ಒಬ್ಬ ಅಜ್ಜಿ ಹೇಳಿದ್ರು, “ಸಿಎಂ ಆದ ದಿನಕ್ಕೂ ನಾನು ಇಷ್ಟು ಅಳ್ಲಿಲ್ಲಪ್ಪಾ.” ಈ ಒಂದು ವಾಕ್ಯದಲ್ಲಿ ಎಷ್ಟು ವರ್ಷಗಳ ಮಮತೆ ಮಡಗಿದೆಯೋ! ಸಿದ್ದರಾಮಯ್ಯನ ಬಗ್ಗೆ ರಾಜಕೀಯ ವಿರೋಧಿಗಳಿಗೇನೋ ಅಭಿಪ್ರಾಯ ಇರಬಹುದು. ಇದನ್ನೂ ಓದಿ: ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಕೆಶಿ ಮನವಿ
ಸಿದ್ದರಾಮನಹುಂಡಿಯಲ್ಲಿ ಅವರ ಬಗ್ಗೆ ಜನರಿಗೆ ಒಂದು ವಿಚಿತ್ರವಾದ ಆತ್ಮೀಯತೆ ಇದೆ. ಅವರು ಬರ್ತಾರೆ ಅಂದರೆ ಊರೇ ಎದ್ದು ನಿಲ್ಲುತ್ತೆ. ಮನೆಯ ಮುಂದೆ ಕುರ್ಚಿ ಇಡುತ್ತಾರೆ. “ಊಟಕ್ಕೆ ಬನ್ನಿ, ನಾಟಿ ಕೋಳಿ ಅಡುಗೆ ಮಾಡಿದ್ದೇವೆ” ಅಂತಾ ಮನೆಗೆ ಕರೆಯುತ್ತಾರೆ. ಸಿದ್ದರಾಮಯ್ಯ ಕೂಡ ಅಷ್ಟೆ, ಯಾರು ಮನೆಗೆ ಕರೆದರೂ ಇಲ್ಲ ಅನ್ನದೆ ಹೋಗಿ ಬರುತ್ತಾರೆ. ಒಂದು ಹಳ್ಳಿಗೆ ತನ್ನವನೊಬ್ಬ ದೊಡ್ಡವನಾದಾಗ, ಆ ಹಳ್ಳಿಯ ಜನರು ತಮ್ಮ ಕನಸುಗಳನ್ನು ಅವನಲ್ಲಿ ನೋಡ್ತಾರೆ. ಸಿದ್ದರಾಮಯ್ಯ ಸಿಎಂ ಆದಾಗ ಸಿದ್ದರಾಮನಹುಂಡಿಯ ಹಲವರು ತಮ್ಮ ಮನೆಯ ಗೋಡೆಗೆ ಅವರ ಫೋಟೋ ಹಾಕಿಕೊಂಡಿದ್ದರು, ದೇವರ ಫೋಟೋ ಪಕ್ಕದಲ್ಲೇ! ಅದು ಭಕ್ತಿ ಅಲ್ಲ, ಅದು ಬದುಕಿನ ಆಶೆ! ಅಧಿಕಾರ ಶಾಶ್ವತ ಅಲ್ಲ; ಕುರ್ಚಿ ಬರುತ್ತದೆ, ಹೋಗುತ್ತದೆ.
ಇವತ್ತು ಸಿದ್ದರಾಮಯ್ಯ ಕುರ್ಚಿ ಬಿಟ್ಟಿದ್ದಾರೆ. ಆದರೆ ಊರಿನ ಜನರ ಮನಸ್ಸಿನಲ್ಲಿ ಅವರು ಇನ್ನೂ “ಮುಖ್ಯಮಂತ್ರಿ”ಯೇ. ಯಾಕಂದ್ರೆ ಜನರಿಗೆ ಪದವಿಗಿಂತ ನೆನಪು ಮುಖ್ಯ. ಊರವರು ಹೇಳ್ತಿದ್ದರು, “ಅವರು ಹುದ್ದೆ ಬಿಟ್ಟಿರಬಹುದು… ಆದ್ರೆ ನಮ್ಮ ಪ್ರೀತಿ ಬಿಡೋದಿಲ್ಲ.” ಇದೇ ಹಳ್ಳಿ, ಇದೇ ಹಳ್ಳಿ ಮಣ್ಣು, ಇದೇ ಸಂಬಂಧ.
ರಾಜಕೀಯ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆದರೆ ಅದರ ನೋವು ಸಿದ್ದರಾಮನಹುಂಡಿಯಲ್ಲಿ ಅಕ್ಷರಶಃ ಕೇಳಿಸುತ್ತಿತ್ತು. ಸಿದ್ದರಾಮನಹುಂಡಿಯ ಬೀದಿಗಳಲ್ಲಿ ಇಡೀ ವಿಚಿತ್ರ ಮೌನ ಇತ್ತು. ಯಾರೂ ಜೋರಾಗಿ ಮಾತನಾಡಲಿಲ್ಲ, ಯಾರೂ ಟೀಕೆ ಮಾಡಲಿಲ್ಲ. ಕೆಲವರು ಟಿವಿ ಮುಂದೆ ಕೂತು ಸುದ್ದಿ ನೋಡುತ್ತಿದ್ದರು. ಆದರೆ ಅವರ ಕಣ್ಣು ಟಿವಿಯಲ್ಲಿ ಇರಲಿಲ್ಲ, ಹಳೆಯ ನೆನಪುಗಳಲ್ಲಿ ಇತ್ತು. “ಮೊದಲ ಬಾರಿಗೆ ಸಚಿವರಾದ ದಿನ”, “ಮೊದಲ ಬಾರಿಗೆ ಸಿಎಂ ಆದ ದಿನ” , “ಊರಿಗೆ ಬಂದಾಗ ಕೈ ಬೀಸಿದ ಕ್ಷಣ ಎಲ್ಲವೂ ಸಿನೆಮಾ ದೃಶ್ಯಗಳಂತೆ ಅವರ ಕಣ್ಣ ಮುಂದೆ ಓಡುತ್ತಿದ್ದವು.
ಒಂದು ಹಳ್ಳಿಯ ದೊಡ್ಡತನ ಏನಂದ್ರೆ ಅದು ತನ್ನವರನ್ನು ಮರೆಯುವುದಿಲ್ಲ. ಸಿದ್ದರಾಮಯ್ಯರ ರಾಜಕೀಯ ಏನೇ ಆಗಿರಲಿ, ಸಿದ್ದರಾಮನಹುಂಡಿಗೆ ಅವರು ಇನ್ನೂ ಆ ಹಳೆಯ ಸಿದ್ದು. ಮಣ್ಣಿನ ವಾಸನೆ ಮರೆತಿಲ್ಲದ ಹುಡುಗ. ಸಿದ್ದರಾಮನಹುಂಡಿ ಜನಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದೇ ದೊಡ್ಡ ವಿಷಯ ಅಲ್ಲ, ಸಿದ್ದರಾಮಯ್ಯ ನಮ್ಮೂರವರು ಅನ್ನೋದೇ ದೊಡ್ಡದು. ಅದು ರಾಜಕೀಯದ ಮಾತಲ್ಲ, ಅದು ಸಿದ್ದರಾಮನಹುಂಡಿಯ ಹೃದಯದ ಮಾತು. “ಕುರ್ಚಿ ಹೋದ್ರೂ ಜನರ ಮನಸ್ಸು ಗೆದ್ದವನು ಸೋಲೋದಿಲ್ಲ” – ಇದು ಸಿದ್ದರಾಮಯ್ಯ ಅವರ ಬಗ್ಗೆ ಸಿದ್ದರಾಮನಹುಂಡಿಯ ಅಂತಿಮ ತೀರ್ಪು.
ರಾಜಕೀಯದ ಪುಸ್ತಕದಲ್ಲಿ ಇದು ಕೇವಲ ಒಂದು ರಾಜೀನಾಮೆ ಆಗಿರಬಹುದು. ಆದರೆ ಹುಟ್ಟೂರಿನ ಜನರ ಹೃದಯದಲ್ಲಿ ಇದು—“ಮನೆಯ ಮಗ ದೊಡ್ಡ ಹುದ್ದೆಯಿಂದ ಇಳಿದ ದಿನ”. ಅದಕ್ಕೇ ಈ ಊರಿನ ಗಾಳಿ ಇವತ್ತು ಸ್ವಲ್ಪ ಭಾರವಾಗಿಯೇ ಇತ್ತು, ಮಣ್ಣು ಸ್ವಲ್ಪ ಮೌನವಾಗಿತ್ತು ಮತ್ತು ಕೆಲ ಕಣ್ಣುಗಳು ಇನ್ನೂ ಒದ್ದೆಯಾಗುತ್ತಿದ್ದವು!
