ಮಡಿಕೇರಿ: ಮೈಸೂರು ದಸರಾ (Mysuru Dasara) ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಸಾಗುವುದು ಸಾಮಾನ್ಯ ಮಾತಲ್ಲ. ಅದಕ್ಕೆ ಬೇಕು ಅಪಾರ ಶಕ್ತಿ, ತಾಳ್ಮೆ, ಶಿಸ್ತು ಮತ್ತು ರಾಜಗಾಂಭೀರ್ಯ. ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಮೊದಲ ಬಾರಿಗೆ ಅಂಬಾರಿ ಹೊರುವ ಅವಕಾಶ ಪಡೆದು ಎಲ್ಲರ ಗಮನ ಸೆಳೆದಿದ್ದ ಕೊಡಗಿನ ದುಬಾರೆ (Dubare) ಸಾಕಾನೆ ಶಿಬಿರದ ಪ್ರಶಾಂತ (Prashant) ಇದೀಗ ಮತ್ತೆ ತನ್ನ ನೆಚ್ಚಿನ ತಾಣಕ್ಕೆ ಮರಳಿದ್ದಾನೆ.
ದಸರಾ ಜಂಬೂಸವಾರಿಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಗಜರಾಜ ಪ್ರಶಾಂತ ಈಗ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾನೆ. ಇತ್ತ ಪ್ರಶಾಂತನನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು, ಅಭಿಮಾನಿಗಳ ಬಳಗವೂ ಹೆಚ್ಚಾಗುತ್ತಿದೆ. ಇದನ್ನೂ ಓದಿ: 100 ಕೋಟಿ ಹಗರಣ ಕೇಸ್ನಲ್ಲಿ ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅರೆಸ್ಟ್
ಮೈಸೂರಿನ ವಿಜಯದಶಮಿ ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ್ದ ಪ್ರಶಾಂತ, ತನ್ನ ಗಂಭೀರ ಹೆಜ್ಜೆ, ಶಿಸ್ತು ಮತ್ತು ಗಾಂಭೀರ್ಯದಿಂದ ಜನರ ಮನಗೆದ್ದಿದ್ದಾನೆ. ದಸರಾ ಜಂಬೂಸವಾರಿಯ ಅದ್ಧೂರಿ ಸಂಭ್ರಮ ಮುಗಿದಿದೆ. ಅಂಬಾರಿ ಹೊತ್ತ ಜವಾಬ್ದಾರಿಯೂ ಪೂರ್ಣಗೊಂಡಿದೆ. ಇದೀಗ ಪ್ರಶಾಂತ ಮತ್ತೆ ತನ್ನ ತವರಿನಂತಿರುವ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ಮರಳಿದ್ದಾನೆ. ಅಂದು ಸಾವಿರಾರು ಜನರ ಕಣ್ಮನ ಸೆಳೆದಿದ್ದ ಗಜರಾಜ. ಇಂದು ಕಾಡಿನ ನಡುವೆ ನೆಮ್ಮದಿಯ ವಿಶ್ರಾಂತಿ ಪಡೆಯುತ್ತಿದ್ದಾನೆ. ದಸರಾ ಜಂಬೂಸವಾರಿಯ ಕಠಿಣ ತರಬೇತಿ, ಸಿದ್ಧತೆ ಹಾಗೂ ಅಂಬಾರಿ ಹೊರುವ ಮಹತ್ತರ ಜವಾಬ್ದಾರಿಯ ಬಳಿಕ ಪ್ರಶಾಂತ ಈಗ ರಿಲ್ಯಾಕ್ಸ್ ಮೂಡ್ನಲ್ಲಿದ್ದಾನೆ.
ದುಬಾರೆ ಸಾಕಾನೆ ಶಿಬಿರದ ಪ್ರಕೃತಿಯ ಮಡಿಲಿನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ಪ್ರಶಾಂತನನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಪ್ರಶಾಂತ ಎಂಬ ಹೆಸರನ್ನು ಹೇಳುತ್ತಲೇ ಆನೆಯತ್ತ ಆಸಕ್ತಿಯಿಂದ ನೋಡುವ ಪ್ರವಾಸಿಗರು, ಆತನ ಗಾಂಭೀರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಶಾಂತನನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆನೆಗೆ ತನ್ನದೇ ಆದ ಅಭಿಮಾನಿ ಬಳಗವೂ ಸೃಷ್ಟಿಯಾಗಿದೆ. ಇದನ್ನೂ ಓದಿ: ಪ್ರಿಯತಮೆ ದೂರವಾದ್ಲು ಅಂತಾ ರೊಚ್ಚಿಗೆದ್ದ ಪಾಗಲ್ ಪ್ರೇಮಿ – ಲವರ್ ಬಾವನ ಬೈಕ್ಗೆ ಬೆಂಕಿ ಹಚ್ಚಿ ವಿಕೃತಿ!
ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊತ್ತ ಗಜರಾಜನನ್ನು ಕಣ್ತುಂಬಿಕೊಳ್ಳಬೇಕು ಎಂಬುದು ಹಲವರ ಆಸೆ. ಇದೀಗ ಆ ಅವಕಾಶ ದುಬಾರೆ ಸಾಕಾನೆ ಶಿಬಿರದಲ್ಲೇ ಸಿಗುತ್ತಿರುವುದು ಪ್ರವಾಸಿಗರ ಸಂತಸಕ್ಕೆ ಕಾರಣವಾಗಿದೆ. ಒಂದೆಡೆ ಕಾಡಿನ ಸೊಬಗು.. ಮತ್ತೊಂದೆಡೆ ಕಾವೇರಿ ನದಿಯ ಸೌಂದರ್ಯ. ಇದರ ನಡುವೆ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಪ್ರಶಾಂತ. ಅಂಬಾರಿ ಹೊತ್ತ ಗಾಂಭೀರ್ಯವನ್ನೂ ಕಂಡಿದ್ದೇವೆ. ಈಗ ವಿಶ್ರಾಂತಿಯಲ್ಲಿರುವ ಗಜರಾಜನನ್ನೂ ನೋಡುತ್ತಿದ್ದೇವೆ ಎಂದು ಪ್ರವಾಸಿಗರು ಖುಷಿಪಡುತ್ತಿದ್ದಾರೆ. ಒಟ್ಟಿನಲ್ಲಿ, ಮೈಸೂರು ದಸರಾ ಜಂಬೂಸವಾರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಕೊಡಗಿಗೆ ಮರಳಿರುವ ಪ್ರಶಾಂತ ಈಗ ದುಬಾರೆ ಸಾಕಾನೆ ಶಿಬಿರದ ಪ್ರಮುಖ ಆಕರ್ಷಣೆಯಾಗಿದ್ದಾನೆ.
ದಸರಾ ಅಂಬಾರಿ ಹೊತ್ತ ಬಳಿಕವೂ ಪ್ರಶಾಂತನ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಬದಲಾಗಿ, ದಿನದಿಂದ ದಿನಕ್ಕೆ ಆತನನ್ನು ನೋಡಲು ಬರುವ ಪ್ರವಾಸಿಗರ ಆಸಕ್ತಿ ಹೆಚ್ಚಾಗುತ್ತಿದೆ. ಅಂದು ಅಂಬಾರಿ ಹೊತ್ತು ನಾಡಿನ ಗಮನ ಸೆಳೆದಿದ್ದ ಗಜರಾಜ, ಇಂದು ದುಬಾರೆಯಲ್ಲಿ ಪ್ರವಾಸಿಗರ ಪ್ರೀತಿಗೆ ಪಾತ್ರನಾಗಿದ್ದಾನೆ.ಇದನ್ನೂ ಓದಿ: ಟಿಕೆಟ್ ಪಡೆಯಲು ಕೃಪಾ ಆಳ್ವರಿಂದ ಸ್ಟಿಂಗ್ ಷಡ್ಯಂತ್ರ: ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಎಂ ಹುಸೇನ್ ವಾಗ್ದಾಳಿ
