– ಖಾಸಗಿ ಶಾಲೆಗಳಿಗೆ ಅನುಮತಿ ಕೊಡಿಸುವುದಾಗಿ ʻಪಾರ್ಟಿ ಫಂಡ್ʼ ಹೆಸರಲ್ಲಿ ವಂಚನೆ ಆರೋಪ
ಚೆನ್ನೈ: ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ (Anbil Mahesh Poyyamozhi) ಅವರನ್ನ ಪೊಲೀಸರು ಬಂಧಿಸಿದ್ದಾರೆ.
ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನ ತಿರಸ್ಕರಿಸಿದ ಬೆನ್ನಲ್ಲೇ, ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಅನ್ಬಿಲ್ ಮಹೇಶ್ ಅವರನ್ನ ಇಂದು (ಸೋಮವಾರ) ಬಂಧಿಸಿದೆ.
ಖಾಸಗಿ ಶಾಲಾ (Private School) ಆಡಳಿತ ಮಂಡಳಿಗಳಿಂದ ʻಪಾರ್ಟಿ ಫಂಡ್ʼ ಹೆಸರಿನಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂಬ ಆರೋಪ ಈ ಪ್ರಕರಣದ ಕೇಂದ್ರಬಿಂದುವಾಗಿದೆ. ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಅನುಮತಿ ಮತ್ತು ಅಗತ್ಯ ಅನುಮೋದನೆ ಕೊಡಿಸುವುದಾಗಿ ಆಶ್ವಾಸನೆ ನೀಡಿ ಈ ಹಣವನ್ನ ಸಂಗ್ರಹಿಸಲಾಗಿದೆ ಎನ್ನುವ ಆರೋಪ ಇದೆ. ಈ ಬಗ್ಗೆ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಅನ್ವಿಲ್ ಮಹೇಶ್ ವಿರುದ್ಧದ ಪ್ರಕರಣ ಏನು?
ಖಾಸಗಿ ಶಾಲೆಗಳ ಮಾನ್ಯತೆ, ನವೀಕರಣ, ಮೇಲ್ದರ್ಜೆಗೇರಿಸುವುದು ಮತ್ತು ಇತರ ಅನುಮೋದನೆಗಳಿಗೆ ಸಂಬಂಧಿಸಿದ ಬಾಕಿ ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥಪಡಿಸಿಕೊಡುತ್ತೇನೆ ಅಂತಾ ಭರವಸೆ ನೀಡಿ, ಆಯಾ ಶಾಲೆಗಳಿಂದ ಹಣ ಸಂಗ್ರಹಿಸಿದ್ದಾರೆ. ಈ ಸಂಬಂಧ ದೂರುಗಳ ಆಧಾರದ ಮೇಲೆ ಸೆಂಟ್ರಲ್ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿದೆ.
ತನಿಖಾ ಮೂಲಗಳ ಪ್ರಕಾರ, ಈ ಹಣ ಸಂಗ್ರಹಣೆಗೆ ಸಂಬಂಧಿಸಿದಂತೆ ಸುಮಾರು 177 ಖಾಸಗಿ ಶಾಲೆಗಳನ್ನ ಗುರುತಿಸಲಾಗಿದೆ. ಪಾರ್ಟಿ ಫಂಡ್ ಹೆಸರಲ್ಲಿ ಸಂಗ್ರಹಿಸಿದ ಹಣದ ಕುರಿತಾದ ಚರ್ಚೆಗಳಲ್ಲಿ ಮಹೇಶ್ ನೇರವಾಗಿ ಭಾಗಿಯಾಗಿದ್ದರು. ಆದರೆ, ಈ ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದ್ರೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಾಜಿ ಸಚಿವರನ್ನ ಆರೋಪಿಯನ್ನಾಗಿ ಹೆಸರಿಸಿದ್ದರು. ನಂತರ ತನಿಖೆಯ ಭಾಗವಾಗಿ, ಪೊಲೀಸರು ಮಹೇಶ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ನಿರೀಕ್ಷಣಾ ಜಾಮೀನು ತಿರಸ್ಕಾರ
ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರು ಅಕ್ಟೋಬರ್ 26 ರಂದು (ಇಂದು) ಮಹೇಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಕೋರ್ಟ್ ಜಾಮೀನು ತಿರಸ್ಕಾರ ಮಾಡಿದ ಬೆನ್ನಲ್ಲೇ ಪೊಲೀಸರು ಮಾಜಿ ಸಚಿವರನ್ನ ಬಂಧಿಸಿದ್ದಾರೆ.
