ತಿರುವನಂತಪುರಂ: ಬಿರಿಯಾನಿ (Biriyani) ತಿಂದು ಅಸ್ವಸ್ಥಳಾಗಿದ್ದ ಮಹಿಳೆಗೆ ರೆಸ್ಟೋರೆಂಟ್ ಮಾಲೀಕ ಬರೊಬ್ಬರಿ 96,500 ರೂ. ಪರಿಹಾರ ನೀಡಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಬಿರಿಯಾನಿ ಕೆಫೆಯಲ್ಲಿ ಅಲ್ಫಹ್ಯಾಮ್ ತಿಂದ ಬಳಿಕ ಅಸ್ವಸ್ಥರಾಗಿದ್ದಾಗಿ ದೂರು ನೀಡಿದ್ದ ಮಹಿಳೆಗೆ ದೊಡ್ಡ ಮೊತ್ತದ ಪರಿಹಾರ ದೊರೆತಿದೆ. ಆಹಾರ ಸೇವಿಸಿದ ಬಳಿಕ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆ, ಕೆಫೆ ಮಾಲೀಕ ಮತ್ತು ವ್ಯವಸ್ಥಾಪಕನ ವಿರುದ್ಧ ದೂರು ದಾಖಲಿಸಿದ್ದರು. ಇದರ ಪರಿಣಾಮ ಅವರಿಗೆ, ಹೋಟೆಲ್ ಮಾಲೀಕ ಒಟ್ಟು 96,500 ರೂ. ಪರಿಹಾರ ಹಣ ನೀಡಬೇಕು ಎಂದು ಪತ್ತನಂತಿಟ್ಟ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.
ಅಲ್ಫಹ್ಯಾಮ್ ಖಾದ್ಯ ತಿಂದ ಬಳಿಕ ಶುರುವಾಯ್ತು ಸಮಸ್ಯೆ
ವೆಚೂಚಿರಾ ಮೂಲದ ರೀನಾ ಥಾಮಸ್ ದೂರು ನೀಡಿದ ಮಹಿಳೆ. 2025ರ ಅ. 21ರಂದು ರೀನಾ ಹಾಗೂ ಅವರ ಸಹೋದರಿ ರಾನ್ನಿ ಪಟ್ಟಣದ ಚೆಥೋಂಕಾರದಲ್ಲಿರುವ ಕಿಂಗ್ಸ್ ಬಿರಿಯಾನಿ ಕೆಫೆಯಲ್ಲಿ ಅರೇಬಿಯನ್ ಖಾದ್ಯವಾದ ಅಲ್ಫಹ್ಯಾಮ್ ಆರ್ಡರ್ ಮಾಡಿದ್ದರು.
ಆಹಾರ ತಿನ್ನಲು ಆರಂಭಿಸಿದ ಕೆಲವೇ ಸಮಯದಲ್ಲಿ ರುಚಿಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ರೀನಾ ಆರೋಪಿಸಿದ್ದಾರೆ. ಈ ಬಗ್ಗೆ ಕೆಫೆಯ ಸಿಬ್ಬಂದಿಗೆ ತಿಳಿಸಿದ್ದರೂ, ಆಹಾರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾನೆ. ನಂತರ ರೀನಾ ಊಟಕ್ಕೆ 740 ರೂ. ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದ್ದಾರೆ.
ಮನೆಗೆ ಬಂದ ಬಳಿಕ ವಾಂತಿ, ಹೊಟ್ಟೆ ನೋವು
ಕೆಫೆಯಿಂದ ಮನೆಗೆ ಹಿಂದಿರುಗುವ ಮಾರ್ಗದಲ್ಲೇ ರೀನಾಗೆ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನಂತರ ತಲೆತಿರುಗುವಿಕೆ, ವಾಂತಿಯಿಂದ ಮೊದಲು ವೆಚೂಚಿರಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಅವರು ಕಾಂಜಿರಪಳ್ಳಿಯ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ಆಸ್ಪತ್ರೆಯಲ್ಲಿ ರೀನಾ ಸುಮಾರು ಒಂದು ವಾರ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಬಳಿಕ ಸರಿಯಾಗಿ ಬೇಯಿಸದ ಅಥವಾ ಹಳೆಯ ಆಹಾರ ಸೇವನೆಯಿಂದ ಸಾಲ್ಮೊನೆಲ್ಲಾ ಸೋಂಕು ಉಂಟಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.ಇದನ್ನೂ ಓದಿ: ಪಡಿಕಲ್ ಮತ್ತೊಂದು ಶತಕ – ಲಂಕಾ ಬೌಲರ್‌ಗಳನ್ನ ಬೆಂಡೆತ್ತಿದ ಕನ್ನಡಿಗ; ಭಾರತ ಮೊದಲ ದಿನ 300ಕ್ಕೆ 5 ವಿಕೆಟ್
ರೀನಾಳ ಮಗ ಕೆಫೆ ನಿರ್ವಾಹಕರಿಗೆ ಕರೆ ಮಾಡಿ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ನಿರ್ವಾಹಕರು 6,000 ರೂ. ನೀಡಲು ಮುಂದಾಗಿದ್ದ ಎಂದು ರೀನಾ ಅರೋಪಿಸಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಗ್ರಾಹಕ ಆಯೋಗವು ಕೆಫೆ ಮಾಲೀಕ ಹಾಗೂ ವ್ಯವಸ್ಥಾಪಕರಿಗೆ ನೋಟಿಸ್ ಜಾರಿ ಮಾಡಿತ್ತು. ಮಾಲೀಕರು ಆಯೋಗದ ಮುಂದೆ ಹಾಜರಾದರೆ, ವ್ಯವಸ್ಥಾಪಕರು ನೋಟಿಸ್ ಪಡೆದಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ರೀನಾ ಸಲ್ಲಿಸಿದ್ದ ದಾಖಲೆಗಳು ಹಾಗೂ ಆಸ್ಪತ್ರೆಯ ಡಿಸ್ಚಾರ್ಜ್ ಸಾರಾಂಶವನ್ನು ಆಯೋಗ ಪರಿಶೀಲಿಸಿ, 30 ದಿನದಲ್ಲಿ 96,500 ರೂ. ಪಾವತಿಸಬೇಕು ಎಂದು ಆದೇಶಿಸಿದೆ. ಇದನ್ನೂ ಓದಿ: ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಶಕ್ತಿಯಿಲ್ಲ: ಡಿಕೆಶಿ
