Connect with us

Districts

ಉಪ ಚುನಾವಣೆ ಎದುರಿಸಲು ನಮ್ಮ ಬಳಿ ಹಣವಿಲ್ಲ, ಅಭ್ಯರ್ಥಿಗಳನ್ನ ನಿಲ್ಲಿಸಲ್ಲ: ಹೆಚ್‍ಡಿಡಿ

Published

on

ರಾಯಚೂರು: ಈ ಬಾರಿಯ ಉಪ ಚುನಾವಣೆಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕುತ್ತಿಲ್ಲ. ನಮ್ಮ ಬಳಿ ಚುನಾವಣೆಗೆ ಹಣ ಇಲ್ಲ. ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣದಲ್ಲಿ ಅಭ್ಯರ್ಥಿಗಳನ್ನ ಹಾಕುವುದಿಲ್ಲ ಅಂತ ಜೆಡಿಎಸ್ ವರಷ್ಠ ಹೆಚ್.ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದ ಯರಮರಸ್ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ದೆಹಲಿಗೆ ಹೋಗಿ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳುವುದಿದೆ. ದೇವದುರ್ಗದ ಗಾಣಧಾಳ ಗ್ರಾಮದಲ್ಲಿ 2 ಗುಂಟೆ ಜಮೀನಿನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ರೈತನ ಮನೆಗೆ ಭೇಟಿ ನೀಡುತ್ತಿದ್ದೇನೆ. ಪಕ್ಷ ಸಂಘಟನೆಯ ಕೆಲಸಕ್ಕೆ ರಾಯಚೂರಿಗೆ ಬಂದಿದ್ದೇನೆ ಅಂತ ತಮ್ಮ ಕಾರ್ಯಕ್ರಮದ ವಿವರ ನೀಡಿದರು.

2023ರಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದೆ. ಕುಮಾರಸ್ವಾಮಿ ಸರ್ಕಾರ ಮುಗಿದ ಮೇಲೆ ನಾನ್ಯಾರಿಗೂ ನಿಂದನೆ ಮಾಡಿಲ್ಲ. ಪಕ್ಷ ಕಟ್ಟುವುದಕ್ಕಾಗಿ ನಾನು ಸಂಪೂರ್ಣ ಭಾಗಿಯಾಗುತ್ತೇನೆ. ಯಡಿಯೂರಪ್ಪ ಸರ್ಕಾರದ ಅಸ್ಥಿರತೆಗೆ ನಾನು ಮುಂದಾಗುವುದಿಲ್ಲ. ಜಾತ್ಯಾತೀತ ಜನತಾದಳದ ವರಿಷ್ಠನಾಗಿ ತೀರ್ಮಾನ ಮಾಡಿದ್ದೇನೆ .ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ನಮ್ಮಲ್ಲಿಯೂ 34 ಜನ ಶಾಸಕರಿದ್ದಾರೆ, ನಾವು ವಿಲೀನ ಆಗ್ತೇವೆ ಅಂತಾರೆ ನಾನು ಯಾರ ಬಗ್ಗೆ ಟೀಕೆ ಮಾಡಲ್ಲ. ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ಯಾರ ಮನೆಗೂ ಹೋಗಿಲ್ಲ. ಗುಲಾಂನಬಿ ಆಜಾದ್ ಹಾಗೂ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗುಲಾಂನಬಿ ಆಜಾದ್ ಅವರೇ ಕುಮಾರಸ್ವಾಮಿ ಸಿಎಂ ಆಗಲು ಕಾರಣ. ಸೋನಿಯಾಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ರು. ಸದ್ಯ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಯಾವುದೇ ಆರೋಪ ಮಾಡಲ್ಲ. ನನ್ನ ಶರೀರದಲ್ಲಿ ಶಕ್ತಿ ಇರೋವರೆಗೂ ನಾನು ಪಕ್ಷ ಕಟ್ಟುತ್ತೇನೆ. ಹಿಂದೆ ಟಿಕೆಟ್ ನೀಡುವ ವಿಚಾರದಲ್ಲಿ ನಾವು ತಪ್ಪು ಮಾಡಿದ್ದೇವೆ ಅಂತ ದೇವೇಗೌಡರು ಹೇಳಿದರು.

ಇದೇ ವೇಳೆ ದೆಹಲಿಯಲ್ಲಿ ರೈತ ಹೋರಾಟದ ಟ್ರ್ಯಾಕ್ಟರ್ ಪರೇಡ್ ವಿಚಾರ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ ಅವಸರದಲ್ಲಿ ಬಿಲ್ ಪಾಸ್ ಮಾಡಬಾರದಿತ್ತು. ಕೃಷಿ ಮಸೂದೆಗೆ ಎರಡ್ಮೂರು ತಿಂಗಳ ಕಾಲಾವಕಾಶ ತಗೊಳ್ಳಿ. ರೈತರು 11 ಸಭೆಗಳಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದಾರೆ. ಗಲಭೆ ಮಾಡಿದೋರು ಯಾವ ಪಕ್ಷಕ್ಕೆ ಸೇರದವರೆವೆಂಬ ಊಹಾಪೋಹ ಕೇಳಿ ಬರುತ್ತಿವೆ. ರೌಡಿ ಎಲೆಮೆಂಟ್ಸ್ ಮಾಡಿದ್ದಾರೆ ಎಂಬ ಊಹಾಪೋಹ ಇವೆ. ಕಾಂಕ್ರಿಟ್ ಗೋಡೆ ಕಟ್ಟುವ ಅವಶ್ಯಕತೆಯೇ ಇರಲಿಲ್ಲ. ರೈತರ ಮೇಲೆ ಅಷ್ಟೊಂದು ಕಠಿಣ ಕ್ರಮ ಯಾಕೆ..? ರೈತರ ಹೋರಾಟ ಪ್ರತಿಷ್ಠೆಯಾಗಬಾರದು ಎಂದರು.

ರೈತರಿಗೆ ಅನಗತ್ಯ ಹಿಂಸೆ ಕೊಡಬಾರದು ಎಂದು ಸಂಸತ್ ನಲ್ಲಿ ಹೇಳಿದ್ದೇನೆ. ಖಲಿಸ್ತಾನ, ಉಗ್ರರು ಗಲಭೆ ಮಾಡಿದ್ದರ ಬಗ್ಗೆ ಇಲ್ಲಿ ನಾನು ಏನೂ ಹೇಳಲ್ಲ, ಗೃಹ ಸಚಿವರು ತನಿಖೆ ನಂತರ ಹೇಳಲಿ ಎಂದರು.

ರಾಜ್ಯದಲ್ಲಿ ಮೀಸಲಾತಿಗಾಗಿ ವಿವಿಧ ಸಮಾಜಗಳು ನಡೆಸಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನಲ್ಲಿರೋ ಏಕೈಕ ಸೆಕ್ಯೂಲರ್ ಲೀಡರ್ ಸಿದ್ದರಾಮಯ್ಯ. ಮೀಸಲಾತಿ ಬಗ್ಗೆ ಅವರು ಮಾತನಾಡುತ್ತಾರೆ ಅಂತ ಹೇಳಿದರು. ನಾಲ್ಕು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ ಎಂಬ ಭಾವನೆಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತದ್ದು, ಮತಗಳು ಕಡಿಮೆ ಬಂದ್ರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು. ಇಡೀ ಬಿಜೆಪಿ ಟೀಮ್ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದೆ. ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆಯಾಗಬಹುದು. ಆದರೆ ಮೂರನೇ ಬಾರಿಯೂ ಮಮತಾ ಬ್ಯಾನರ್ಜಿ ಸಿಎಂ ಆಗಲಿದ್ದಾರೆ ಅಂತ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.

Click to comment

Leave a Reply

Your email address will not be published. Required fields are marked *