ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ಒಂದು ವರ್ಷ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಇರುವ ಅಪ್ಪು ಸಮಾಧಿಗೆ ಪುನೀತ್ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು. ಜೊತೆಗೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಪೂಜೆ ಸಲ್ಲಿಸಲಾಯಿತು. ಪೂಜೆ ಸಲ್ಲಿಸುತ್ತಲೇ ಪುನೀತ್ ಪತ್ನಿ ಅಶ್ವಿನಿ ಕಣ್ಣೀರು ಹಾಕಿದರು. ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳಿಗೆ ಅಶ್ವಿನಿ ಭಾವುಕ ಪತ್ರ ಬರೆದಿದ್ದಾರೆ.
ನೆನಪಿನ ಸಾಗರದಲ್ಲಿ. ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೇ, ನಮ್ಮ ಆಲೋಚನೆಗಳು ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ. ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ. ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ, ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ನಮನಗಳು ಎಂದು ಬರೆದಿದ್ದಾರೆ ಅಶ್ವಿನಿ. ಇದನ್ನೂ ಓದಿ:ಸಾನ್ಯ ಕ್ಯಾಪ್ಟೆನ್ಸಿಗೆ ಕಳಪೆ ಎಂದ ರೂಪೇಶ್ ಶೆಟ್ಟಿ
ಪುನೀತ್ ರಾಜ್ ಕುಮಾರ್ ಅವರ ಮೊದಲ ಪುಣ್ಯಸ್ಮರಣೆ ಸಂದರ್ಭದಲ್ಲೇ ಸರಕಾರ ಕೂಡ ಅವರಿಗೆ ನವೆಂಬರ್ 1 ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ದಕ್ಷಿಣ ಇಬ್ಬರು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇದರಲ್ಲಿ ಒಬ್ಬ ನಟರು ಈಗಾಗಲೇ ಒಪ್ಪಿಕೊಂಡಿದ್ದು, ಮತ್ತೋರ್ವ ನಟರು ಇನ್ನೂ ಉತ್ತರಿಸಬೇಕಿದೆ ಎಂದಿದ್ದಾರೆ. ಇಬ್ಬರಿಗೂ ಕರ್ನಾಟಕದ ನಂಟಿರುವುದು ಮತ್ತೊಂದು ವಿಶೇಷ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಕರ್ನಾಟಕ ಸರಕಾರವು ಆಹ್ವಾನ ನೀಡಿದ್ದು, ಜ್ಯೂನಿಯರ್ ಎನ್.ಟಿ.ಆರ್ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು, ರಜನಿಕಾಂತ್ ಅವರ ಒಪ್ಪಿಗೆ ಪತ್ರ ಇನ್ನಷ್ಟೇ ಸಿಗಬೇಕಿದೆ. ಈ ಕಾರ್ಯಕ್ರವನ್ನು ನವೆಂಬರ್ 1 ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು, ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.