– ಪ್ಲಾಸ್ಟಿಕ್ ನೋಟುಗಳ ಪ್ರಯೋಜನಗಳೇನು?
ಭಾರತದಲ್ಲಿ 2016ರಲ್ಲಿ ನೋಟು ಅಮಾನ್ಯೀಕರಣ ಮಾಡಲಾಗಿತ್ತು. ಅದಾದ ಒಂದು ದಶಕದ ಬಳಿಕ ಮತ್ತೆ ಹಣಕಾಸು ಕ್ರಾಂತಿಯ ಸೂಚನೆ ಸಿಕ್ಕಿದೆ. ದೇಶದಲ್ಲಿ ಕಾಗದದ ನೋಟುಗಳ ಬದಲಿಗೆ ಹೆಚ್ಚು ಬಾಳಿಕೆ ಬರುವ ಪ್ಲಾಸ್ಟಿಕ್ ನೋಟುಗಳನ್ನು (Plastic Note) ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಾಗಿದೆ. ನೋಟು ಮುದ್ರಣಕ್ಕೆ ಬೇಕಾಗುವ ಪಾಲಿಮರ್ ಹಾಳೆಗಳ ಪೂರೈಕೆಗೆ ಜಾಗತಿಕ ಟೆಂಡರ್ ಅನ್ನು ಆಹ್ವಾನಿಸಿದೆ. ಆರ್‌ಬಿಐ ಕ್ರಮದ ಬೆನ್ನಲ್ಲೇ ಪ್ಲಾಸ್ಟಿಕ್ ನೋಟುಗಳ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಏನಿದು ಪ್ಲಾಸ್ಟಿಕ್ ನೋಟು? ಕಾಗದದ ನೋಟುಗಳಿಂತ ಇದು ಹೇಗೆ ಭಿನ್ನ? ಇವುಗಳ ಬಳಕೆಯಿಂದ ಪ್ರಯೋಜನಗಳೇನಾದ್ರು ಇದೆಯಾ? 100% ಹತ್ತಿ ಆಧಾರಿತ ಕಾಗದದಿಂದ ಮಾಡಿದ ನೋಟುಗಳನ್ನು ಪ್ಲಾಸ್ಟಿಕ್ ನೋಟುಗಳಿಂದ ಬದಲಾಯಿಸುವ ಅಗತ್ಯವೇನು? ಎಲ್ಲೆಲ್ಲಿ ಇಂಥ ಮಾದರಿಯ ನೋಟುಗಳ ಬಳಕೆಯಾಗ್ತಿದೆ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ವಿವರ.
ಏನಿದು ಪ್ಲಾಸ್ಟಿಕ್ ನೋಟು?
ಪಾಲಿಮರ್ (Polymer Currency) ಅಥವಾ ಪ್ಲಾಸ್ಟಿಕ್ ನೋಟುಗಳು ಅಂದ್ರೆ, ಹತ್ತಿ ಆಧಾರಿತ ಕಾಗದದ ಬದಲಿಗೆ ತೆಳುವಾದ ಮತ್ತು ಮೃದು ಪ್ಲಾಸ್ಟಿಕ್‌ನಿಂದ ಮುದ್ರಿಸಿದ ಕರೆನ್ಸಿ ನೋಟುಗಳು.
ಮೊದಲು ಬಳಸಿದ ದೇಶ ಯಾವುದು?
ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ 1988ರಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಪಾಲಿಮರ್ ನೋಟುಗಳನ್ನು ಪರಿಚಯಿಸಿತು. ಇದನ್ನೂ ಓದಿ: Public TV Explainer | ‘ವಂದೇ ಮಾತರಂ’ಗೆ ಅಪಮಾನ ಮಾಡಿದ್ರೆ 3 ವರ್ಷ ಜೈಲು – ಕೇಂದ್ರದ ಹೊಸ ಮಸೂದೆ ಏನು ಹೇಳುತ್ತೆ?

ಎಷ್ಟು ದೇಶಗಳಲ್ಲಿ ಬಳಕೆ?
ಜಾಗತಿಕವಾಗಿ ಸುಮಾರು 60 ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಬಳಸಲಾಗುತ್ತಿದೆ. ಮುಖ್ಯವಾಗಿ ಆಸ್ಟ್ರೇಲಿಯಾ, ಕೆನಡಾ, ರೊಮೇನಿಯಾ, ಯುಕೆ, ನ್ಯೂಜಿಲೆಂಡ್, ಸಿಂಗಾಪುರ, ವಿಯೆಟ್ನಾಂ, ಒಮಾನ್ ಸೇರಿದಂತೆ ಹಲವು ರಾಷ್ಟ್ರ ಗಳಲ್ಲಿ ನೋಟುಗಳು ಚಾಲ್ತಿಯಲ್ಲಿವೆ.
ಭಾರತದ ನಡೆಯೇನು?
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ (BRBNMPL) ನ ಟೆಂಡರ್, ಕರೆನ್ಸಿ ನೋಟುಗಳನ್ನು ಮುದ್ರಿಸಲು ಬಳಸಲಾಗುವ 3.4 ಕೋಟಿ ಪಾಲಿಮರ್ ಹಾಳೆಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಆಹ್ವಾನಿಸಿದೆ. ಇವು ಕೇವಲ ಹಳೆಯ ಪ್ಲಾಸ್ಟಿಕ್ ಹಾಳೆಗಳಲ್ಲ, ವಿಶೇಷ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿವೆ. 3.4 ಕೋಟಿ ಹಾಳೆಗಳು ತಕ್ಷಣದ ಅವಶ್ಯಕತೆ ಎಂದು ಟೆಂಡರ್ ಹೇಳಿದೆ. ಪ್ರಯೋಗಗಳು ಯಶಸ್ವಿಯಾದ ನಂತರ, BRBNMPL ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಯೋಜನೆ ರೂಪಿಸಲಾಗಿದೆ. ಪಾಲಿಮರ್ ಹಾಳೆಗಳ ಒಟ್ಟು 68 ಸಾವಿರ ರೀಮ್‌ಗಾಗಿ ಬಿಆರ್‌ಬಿಎನ್‌ಎಂಪಿಎಲ್ ಟೆಂಡರ್ ಆಹ್ವಾನಿಸಿದೆ. ಒಂದು ರೀಮು 500 ಹಾಳೆಗಳನ್ನು ಒಳಗೊಂಡಿರುತ್ತದೆ. ಒಂದು ಮುಖಬೆಲೆಯ ನೋಟಿನ ಮುದ್ರಣಕ್ಕೆ 34 ಸಾವಿರ ರೀಮ್‌ಗಳು ಬೇಕಾಗುತ್ತವೆ.
2012ರಲ್ಲೇ ನಡೆದಿತ್ತಾ ಪ್ರಯೋಗ?
ಈ ಹಿಂದೆ ಆರ್‌ಬಿಐ, ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿತ್ತು. ಅದಾದ 7 ವರ್ಷಗಳ ನಂತರ, 2009ರ ಸೆಪ್ಟೆಂಬರ್‌ನಲ್ಲಿ 100 ಕೋಟಿ ಮೊತ್ತದ 10 ರೂ. ನೋಟುಗಳನ್ನು ತಯಾರಿಸಲು ಬಿಡ್‌ಗಳನ್ನು ಆಹ್ವಾನಿಸಿತ್ತು. ಈ ನೋಟುಗಳನ್ನು ಕೊಚ್ಚಿ, ಮೈಸೂರು, ಶಿಮ್ಲಾ, ಜೈಪುರ, ಭುವನೇಶ್ವರದಲ್ಲಿ ಪ್ರಯೋಗಕ್ಕಾಗಿ ಪರಿಚಯಿಸಲು ಯೋಜಿಸಲಾಗಿತ್ತು. ಆದರೆ, ಪ್ರಯೋಗ ನಡೆಯಲಿಲ್ಲ.
‘ನಾವು 2012/13 ರಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಚಲಾವಣೆಗೆ ಯೋಜಿಸಿದ್ದರೂ, ಅದು ಕೇವಲ ಯೋಜನೆಯಾಗಿಯೇ ಉಳಿಯಿತು’ ಎಂದು ಕೇಂದ್ರ ಬ್ಯಾಂಕಿನ ಮಾಜಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗ ಖರೀದಿಗೆ ಮುಂದುವರಿಯಲು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. 2014-15ರ ವಾರ್ಷಿಕ ವರದಿಯಲ್ಲಿ, 10 ರೂಪಾಯಿ ಪ್ಲಾಸ್ಟಿಕ್ ನೋಟುಗಳನ್ನು ತಾಂತ್ರಿಕವಾಗಿ ಮೌಲ್ಯಮಾಪನ ಮಾಡಲಾಗಿದ್ದರೂ, ಕೆಲವು ತಾಂತ್ರಿಕ ದೋಷಗಳಿಂದಾಗಿ ಪ್ರಕ್ರಿಯೆಯನ್ನು ಮುಂದುವರಿಸಲಿಲ್ಲ ಎಂದು ಆರ್‌ಬಿಐ ಹೇಳಿದೆ. ಇದನ್ನೂ ಓದಿ: PUBLiC TV Explainer| ಕೇರಳದಲ್ಲಿ ಭೀಕರ ಭೂಕುಸಿತ – ಏನಿದು ವಯನಾಡು ಸುರಂಗ ಮಾರ್ಗ? ವಿಶೇಷತೆ ಏನು?
ನಂತರ ಈ ಯೋಜನೆಯನ್ನು BRBNMPL ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SPMCIL) ಕೈಗೆತ್ತಿಕೊಂಡವು. ಆದರೆ ಆ ವಿಷಯದಲ್ಲಿ ಹೆಚ್ಚಿನದೇನೂ ಇರಲಿಲ್ಲ. ಈಗ, ಕಳೆದ ವಾರದ ಟೆಂಡರ್ ಬಹಿರಂಗಪಡಿಸಿದಂತೆ, BRBNMPL ಮತ್ತು SPMCIL ತಮಗೆ ಸರಬರಾಜು ಮಾಡಲಾದ ಪಾಲಿಮರ್ ಹಾಳೆಗಳನ್ನು ಬಳಸಿಕೊಂಡು ನೋಟುಗಳನ್ನು ಮುದ್ರಿಸುತ್ತವೆ.

ಪ್ರಯೋಜನ ಏನು?
* ಹೆಚ್ಚು ಬಾಳಿಕೆ: ಕಾಗದದ ನೋಟುಗಳಿಗಿಂತ ಪ್ಲಾಸ್ಟಿಕ್ ನೋಟುಗಳು ಹೆಚ್ಚು ಬಾಳಿಕೆ ಬರುತ್ತವೆ. ಈ ಬಾಳಿಕೆಯು ನೋಟುಗಳ ಮುಖಬೆಲೆಯನ್ನು ಅವಲಂಬಿಸಿರುತ್ತದೆ. ಸಣ್ಣ ಮುಖಬೆಲೆಯ ನೋಟುಗಳನ್ನು ಹೆಚ್ಚಾಗಿ ಚಲಾವಣೆ ಮಾಡಲಾಗುತ್ತದೆ. ಹೀಗಾಗಿ, ಅವುಗಳ ಬಾಳಿಕೆ ಕಡಿಮೆ ಇರುತ್ತದೆ.
* ತಯಾರಿಕಾ ವೆಚ್ಚ ಕಡಿಮೆ: ಪ್ಲಾಸ್ಟಿಕ್ ನೋಟುಗಳು ಹೆಚ್ಚಿನ ಅವಧಿ ಬಾಳಿಕೆ ಬರುವುದರಿಂದ, ತಯಾರಿಕೆಯ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ತಯಾರಿಕಾ ವೆಚ್ಚಗಳು ಕಡಿಮೆಯಾಗುತ್ತವೆ.
* ಪರಿಸರಕ್ಕೆ ಪೂರಕ: 2013ರ ಆಗಸ್ಟ್‌ನಲ್ಲಿ ಹತ್ತಿ ಆಧಾರಿತ ಕಾಗದದ ಕರೆನ್ಸಿ ನೋಟುಗಳು ಮತ್ತು ಪ್ಲಾಸ್ಟಿಕ್ ನೋಟುಗಳ ಬಳಕೆಯಲ್ಲಿ ಇಂಗಾಲದ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (TERI)ಗೆ ತಿಳಿಸಲಾಯಿತು. ಕಾಗದದ ನೋಟುಗಳನ್ನು ಕೈಬಿಟ್ಟು ಪ್ಲಾಸ್ಟಿಕ್ ನೋಟುಗಳ ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬ ವರದಿಯನ್ನು ಅಧ್ಯಯನ ಬಹಿರಂಗಪಡಿಸಿತು.
* ಮರುಬಳಕೆ: ಪಾಲಿಮರ್/ಪ್ಲಾಸ್ಟಿಕ್ ನೋಟುಗಳನ್ನು ಕಾಂಪೋಸ್ಟ್ ಬಿನ್‌ಗಳು, ಪ್ಲಂಬಿಂಗ್ ಫಿಟ್ಟಿಂಗ್‌ಗಳು ಮತ್ತು ಇತರ ಗೃಹೋಪಯೋಗಿ ಮತ್ತು ಕೈಗಾರಿಕಾ ಉತ್ಪನ್ನಗಳಂತಹ ಉಪಯುಕ್ತ ಪ್ಲಾಸ್ಟಿಕ್ ಉತ್ಪನ್ನಗಳಾಗಿ ಮರುಬಳಕೆ ಮಾಡಬಹುದು. ಪಾಲಿಮರ್‌ನ ಮೂಲ ವಸ್ತುವು ನವೀಕರಿಸಲಾಗದ ಸಂಪನ್ಮೂಲವಾಗಿದೆ. ಆದರೆ ಅದರ ಮರುಬಳಕೆ ಮಾಡಬಹುದಾಗಿದೆ.
6,213 ಕೋಟಿ ಹಳೆಯ ನೋಟು ನಾಶ
ಕಳೆದ ಮೂರು ವರ್ಷಗಳಲ್ಲಿ ಆರ್‌ಬಿಐ 8,270 ಕೋಟಿ ಹೊಸ ಕರೆನ್ಸಿ ನೋಟುಗಳನ್ನು ಪೂರೈಸಿದೆ. ಅದೇ ಅವಧಿಯಲ್ಲಿ 6,213 ಕೋಟಿ ಹಳೆಯ ನೋಟುಗಳನ್ನು ನಾಶಪಡಿಸಿದೆ. ಏಕೆಂದರೆ, ಅವು ತುಂಬಾ ಕೊಳಕಾಗಿದ್ದವು. ಬಳಸಲು ಸಾಧ್ಯವಾಗದಷ್ಟು ಹಾಳಾಗಿದ್ದವು. ಇದನ್ನೂ ಓದಿ: PUBLiC TV Explainer | ಪಾಸ್‌ಪೋರ್ಟ್ ಪ್ರಯಾಣ ದಾಖಲೆಯಷ್ಟೇ – ಹಾಗಾದ್ರೆ ಪೌರತ್ವದ ದಾಖಲೆ ಯಾವುದು?
ಆರ್‌ಬಿಐ ಪ್ರತಿ ವರ್ಷ ಆರ್ಥಿಕತೆಗೆ ಕಳುಹಿಸುವ ಪ್ರತಿ ನಾಲ್ಕು ಹೊಸ ನೋಟುಗಳಿಗೆ, ಬದಲಿಯಾಗಿ ಮೂರು ಹಳೆಯ ನೋಟುಗಳನ್ನು ನಾಶಪಡಿಸಬೇಕಾಗುತ್ತದೆ. ಪ್ಲಾಸ್ಟಿಕ್ ನೋಟುಗಳು ದೀರ್ಘಾವಧಿಯ ಬಾಳಿಕೆ ಹೊಂದಿರುವುದರಿAದ, ಅವುಗಳನ್ನು ನಿಯಮಿತವಾಗಿ ನಾಶಪಡಿಸಬೇಕಾಗಿಲ್ಲ. ಇದು ಆರ್‌ಬಿಐ ಹಣವನ್ನು ಉಳಿಸುವುದಲ್ಲದೆ ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.

ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚು?
ಆರ್‌ಬಿಐ ಪ್ರತಿ ವರ್ಷ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತದೆ. ಕಳೆದ ದಶಕದಲ್ಲಿ, ಕೇಂದ್ರ ಬ್ಯಾಂಕ್ ಸುಮಾರು 26,000 ಕೋಟಿ ನೋಟುಗಳನ್ನು ಮುದ್ರಿಸಲು ಒಟ್ಟು 52,095 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಕಳೆದ 10 ವರ್ಷಗಳಲ್ಲಿ ಕಾಗದದ ನೋಟುಗಳನ್ನು ಮುದ್ರಿಸುವ ವೆಚ್ಚವು ಆರ್‌ಬಿಐನ ಒಟ್ಟು ಖರ್ಚಿನ 15-44% ರಷ್ಟಿದೆ. ಆದ್ದರಿಂದಲೇ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳ ಚಲಾವಣೆಗೆ ಆರ್‌ಬಿಐ ಮುಂದಾಗಿದೆ.
ನಕಲಿ ನೋಟುಗಳ ಹಾವಳಿ ತಪ್ಪಿಸಬಹುದೇ?
ಪ್ಲಾಸ್ಟಿಕ್ ನೋಟುಗಳಿಂದ ಭದ್ರತಾ ಪ್ರಯೋಜನವೂ ಇದೆ. ಎಲ್ಲಾ ಕೇಂದ್ರ ಬ್ಯಾಂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೋಟುಗಳನ್ನು ಪೂರೈಸುವ ಬ್ರಿಟಿಷ್ ಸಂಸ್ಥೆ ಡಿ ಲಾ ರೂ ಪ್ರಕಾರ, ಹೆಚ್ಚಿನ ನಕಲಿ ನೋಟುಗಳನ್ನು ಕಾಗದ ಬಳಸಿಯೇ ಉತ್ಪಾದಿಸಲಾಗುತ್ತದೆ. ಹೀಗಾಗಿ, ಪ್ಲಾಸ್ಟಿಕ್ ನೋಟುಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಕರೆನ್ಸಿ ನೋಟುಗಳನ್ನು ಪಾಲಿಮರ್‌ನಿಂದ ತಯಾರಿಸುವ ದೇಶಗಳಲ್ಲಿ ನಕಲಿ ನೋಟುಗಳ ಹಾವಳಿ ಇಲ್ಲ. ಭಾರತದಲ್ಲಿ, 2025-26 ರಲ್ಲಿ ಪತ್ತೆಯಾದ ನಕಲಿ ನೋಟುಗಳ ಸಂಖ್ಯೆ 2.3 ಲಕ್ಷಕ್ಕೆ ಏರಿದೆ. ಇದು 2024-25 ರಲ್ಲಿ 2.17 ಲಕ್ಷದಿಂದ ಹೆಚ್ಚಾಗಿದೆ.
ಕ್ಯಾಶ್ ಇಸ್ ಕಿಂಗ್
ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ ಡಿಜಿಟಲ್ ಕ್ರಾಂತಿ ಗಮನಾರ್ಹವಾಗಿದೆ. ನೋಟು ರದ್ದತಿಗೂ ಮುನ್ನ ಇದ್ದ ದರದಲ್ಲೇ ಭಾರತೀಯರು ನಗದು ಬೇಡಿಕೆ ಇಡುತ್ತಿದ್ದಾರೆ ಎಂದು ಕಳೆದ ವರ್ಷ ಆರ್‌ಬಿಐ ಸಮೀಕ್ಷೆ ತಿಳಿಸಿದೆ. ಮನೆಗಳು ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳು ನಗದು ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಲೇ ಇದ್ದಾರೆ ಎಂದು ಹೇಳಿದೆ. 2026ರ ಮಾರ್ಚ್ ಅಂತ್ಯದ ವೇಳೆಗೆ, ಭಾರತದಲ್ಲಿ ಚಲಾವಣೆಯಲ್ಲಿರುವ ಒಟ್ಟು ಕರೆನ್ಸಿಯ ಮೊತ್ತ 41.7 ಲಕ್ಷ ಕೋಟಿ ರೂ.ಗಳಾಗಿದೆ. ಇದು ವರ್ಷದಿಂದ ವರ್ಷಕ್ಕೆ 12% ಹೆಚ್ಚಾಗಿದೆ. ಆದ್ದರಿಂದ, ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿದ್ದರೂ, ನಗದು ಬೇಡಿಕೆ ಮಾತ್ರ ಕುಗ್ಗಿಲ್ಲ. ಇದನ್ನೂ ಓದಿ: PublicTV Explainer: ಸೊಳ್ಳೆ ಗಾತ್ರದ ಡ್ರೋನ್ ಸೃಷ್ಟಿಸಿದ ಚೀನಾ – ಮಿಲಿಟರಿ ಕಣ್ಗಾವಲಿನಲ್ಲಿ ಹೊಸ ಮೈಲಿಗಲ್ಲು
ಹಳೆಯ ನೋಟುಗಳ ಕಥೆ ಏನು?
ಪ್ಲಾಸ್ಟಿಕ್ ನೋಟುಗಳು ಬಂದಾಕ್ಷಣ ಹಳೆಯ ಕಾಗದದ ನೋಟುಗಳು ಅಮಾನ್ಯವಾಗಲ್ಲ. ಮಾರುಕಟ್ಟೆಯಲ್ಲಿ ಎರಡೂ ಬಗೆಯ ನೋಟುಗಳು ಚಲಾವಣೆಯಲ್ಲಿ ಇರುತ್ತವೆ.
