ಕೇರಳದ ಕಲ್ಲಾಡಿಯ ಮೀನಾಕ್ಷಿ ಸೇತುವೆ (Meenakshi Bridge) ಬಳಿ ಭೂಕುಸಿತ(Landslide) ಸಂಭವಿಸಿದ ಬೆನ್ನಲ್ಲೇ ವಯನಾಡು ಸುರಂಗ ಮಾರ್ಗ (Wayanad Tunnel Project) ಯೋಜನೆ ಬಗ್ಗೆಈಗ ಬಹಳಷ್ಟು ಚರ್ಚೆಯಾಗುತ್ತಿದೆ. ಹೀಗಾಗಿ ಏನಿದು ಈ ಸುರಂಗ ಮಾರ್ಗ? ಯಾಕೆ ಮತ್ತು ಎಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ವಿವರವನ್ನು ಇಲ್ಲಿ ನೀಡಲಾಗಿದೆ.
ಏನಿದು ಯೋಜನೆ?
ವಯನಾಡು ಸುರಂಗ ಮಾರ್ಗ ಯೋಜನೆ (Wayanad Tunnel Road Project) ಇದನ್ನು ಅಧಿಕೃತವಾಗಿ ಆನಕ್ಕಂಪೋಯಿಲ್ – ಕಲ್ಲಾಡಿ – ಮೆಪ್ಪಾಡಿ ಸುರಂಗ ಮಾರ್ಗ (Anakkompoyil-Meppadi Tunnel Road Project) ಎಂದು ಕರೆಯಲಾಗುತ್ತದೆ. ಇದು ಕೇರಳದ ಕೋಯಿಕ್ಕೋಡ್ ಮತ್ತು ವಯನಾಡು ಜಿಲ್ಲೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿರುವ ಅತ್ಯಂತ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆಯಾಗಿದೆ.

ಸುರಂಗ ಯಾಕೆ?
ಪ್ರಸ್ತುತ ಕೋಯಿಕ್ಕೋಡ್ ಮತ್ತು ವಯನಾಡು ನಡುವೆ ಸಂಚರಿಸಲು ಪ್ರಸಿದ್ಧ ತಾಮರಶ್ಶೇರಿ ಘಾಟ್ (Thamarassery Ghat Road / Churam) ರಸ್ತೆಯನ್ನು ಅವಲಂಬಿಸಬೇಕಾಗಿದೆ. ಈ ಘಾಟ್ ರಸ್ತೆಯಲ್ಲಿ 9 ಅತ್ಯಂತ ಅಪಾಯಕಾರಿ ಹೇರ್‌ಪಿನ್ ತಿರುವುಗಳಿವೆ. ಇಲ್ಲಿ ಭಾರಿ ವಾಹನಗಳು ತಿರುಗುವಾಗ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿತ್ತು. ಮಳೆಗಾಲದಲ್ಲಿ ಇಲ್ಲಿ ಭೂಕುಸಿತ ಸಾಮಾನ್ಯ. ಈ ಸಮಸ್ಯೆಗೆ ಮುಕ್ತಿ ನೀಡಲು ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ.
ಈ ಸುರಂಗ ಮಾರ್ಗವು ಪೂರ್ಣಗೊಂಡರೆ ಕೋಯಿಕ್ಕೋಡ್‌ನಿಂದ ವಯನಾಡು, ಮೈಸೂರು ಮತ್ತು ಬೆಂಗಳೂರಿಗೆ ಸಂಚರಿಸುವ ವಾಹನಗಳಿಗೆ ಸುಮಾರು 30 ಕಿಲೋಮೀಟರ್ ದೂರ ಕಡಿಮೆಯಾಗಲಿದ್ದು, ಇಂಧನ ಮತ್ತು ಸಮಯ ಉಳಿತಾಯವಾಗಲಿದೆ. ಇದನ್ನೂ ಓದಿ: ವಯನಾಡು ಭೂಕುಸಿತ ದುರಂತದಲ್ಲಿ ಹಲವರ ಜೀವ ಉಳಿಸಿದ ಟ್ಯಾಂಕರ್ – ಭಯಾನಕ ಸಿಸಿಟಿವಿ ದೃಶ್ಯ ವೈರಲ್

ಮೂರನೇ ಉದ್ಧದ ಸುರಂಗ
ಈ ಯೋಜನೆಯ ಒಟ್ಟು ಉದ್ದ ಸುಮಾರು 8.75 ಕಿಲೋಮೀಟರ್, ಅದರಲ್ಲಿ ಸುರಂಗದ ಉದ್ದವೇ 8.1 ಕಿಲೋಮೀಟರ್. ಇದು ಪೂರ್ಣಗೊಂಡರೆ ಜಮ್ಮು-ಕಾಶ್ಮೀರದ ಚೆನಾನಿ-ನಾಶ್ರಿ ಮತ್ತು ಅಟಲ್ ಸುರಂಗಗಳ ನಂತರ ಭಾರತದ ಮೂರನೇ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ದಕ್ಷಿಣ ಭಾರತದಲ್ಲೇ ಇದು ಅತಿ ಉದ್ದದ ಸುರಂಗ ರಸ್ತೆಯಾಗಿದೆ.
ನಿರ್ಮಾಣ ಮಾಡುತ್ತಿರುವುದು ಯಾರು?
ಸುಮಾರು 2,134 ಕೋಟಿ ರೂ ವೆಚ್ಚದ ಈ ಯೋಜನೆಯನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಕಾರ್ಯಗತಗೊಳಿಸುತ್ತದೆ. ನಿರ್ಮಾಣ ಕಾರ್ಯವನ್ನು ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಪುನಿಯಾ ಕನ್‌ಸ್ಟ್ರಕ್ಷನ್ ಕಂಪನಿ ಇರುವಳಿಂಜಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುತ್ತಿದೆ. ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (KIIFB) ಹಣಕಾಸು ನೆರವು ಒದಗಿಸಲಾಗಿದೆ. ಇದನ್ನೂ ಓದಿ: ವಯನಾಡಿನಲ್ಲಿ ಮೇಘಸ್ಫೋಟ – ಇಬ್ಬರು ಕಾರ್ಮಿಕರು ಜೀವಂತ ಸಮಾಧಿ; 30 ಮಂದಿ ಮಿಸ್ಸಿಂಗ್

ಅವಳಿ ಸುರಂಗ
ಇದು ಕೇವಲ ಒಂದೇ ರಸ್ತೆಯ ಸುರಂಗವಲ್ಲ. ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಎರಡು ಪ್ರತ್ಯೇಕ ಸುರಂಗಗಳನ್ನು (Twin Tubes) ಕೊರೆಯಲಾಗುತ್ತಿದೆ. ಒಂದೊಂದು ಸುರಂಗದಲ್ಲೂ ಎರಡು ಲೇನ್‌ಗಳ ರಸ್ತೆ ಇರಲಿದ್ದು, ಒಂದು ಸುರಂಗ ಹೋಗಲು ಮತ್ತು ಮತ್ತೊಂದು ಬರಲು ಬಳಕೆಯಾಗುತ್ತದೆ. ದಕ್ಷಿಣ ಭಾಗ ಮರಿಪ್ಪುಳದಲ್ಲಿ (ಅನಕ್ಕಂಪೊಯಿಲ್ ಬಳಿ) ಪ್ರಾರಂಭವಾಗುತ್ತದೆ ಮತ್ತು ಉತ್ತರ ಭಾಗ ಕಲ್ಲಾಡಿಯಲ್ಲಿ (ಮೆಪ್ಪಾಡಿ ಬಳಿ) ಕೊನೆಗೊಳ್ಳುತ್ತದೆ.
ವಿಶೇಷತೆ ಏನು?
ತುರ್ತು ಸಂದರ್ಭಗಳಲ್ಲಿ ಅಪಘಾತ ಅಥವಾ ಬೆಂಕಿ ಅವಘಡ ಸಂಭವಿಸಿದಾಗ ಜನರನ್ನು ರಕ್ಷಿಸಲು ಎರಡೂ ಸುರಂಗಗಳ ನಡುವೆ ಪ್ರತಿ 500 ಮೀಟರ್‌ಗೆ ಸಂಪರ್ಕ ಕಲ್ಪಿಸುವ ಸಣ್ಣ ಕ್ರಾಸ್-ಪ್ಯಾಸೇಜ್‌ಗಳನ್ನು (Cross passages) ವಿನ್ಯಾಸಗೊಳಿಸಲಾಗಿದೆ.
ಯುರೋಪಿಯನ್ ಮಾದರಿಯ ಸುರಂಗಗಳ ಮಾದರಿಯಲ್ಲಿ ಇಲ್ಲಿ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಸುರಂಗದ ಒಳಗೆ ವಾಹನಗಳಿಂದ ಹೊರಬರುವ ಹೊಗೆಯನ್ನು ತಕ್ಷಣವೇ ಹೊರಹಾಕಿ, ಆಮ್ಲಜನಕದ ಕೊರತೆಯಾಗದಂತೆ ನೋಡಿಕೊಳ್ಳಲು ಬೃಹತ್ ಜೆಟ್ ಫ್ಯಾನ್‌ಗಳನ್ನು ಅಳವಡಿಸಲಾಗುತ್ತಿದೆ. ಸುರಂಗದ ಒಳಗೆ ಎಲ್ಲಾದರೂ ತಾಪಮಾನ ಹೆಚ್ಚಾದರೆ ಅಥವಾ ಬೆಂಕಿ ಕಾಣಿಸಿಕೊಂಡರೆ ತಕ್ಷಣವೇ ಕಂಟ್ರೋಲ್ ರೂಂಗೆ ಎಚ್ಚರಿಕೆ ರವಾನಿಸುವ ಲೀನಿಯರ್ ಹೀಟ್ ಡಿಟೆಕ್ಟರ್‌ಗಳು ಹಾಗೂ ಸ್ವಯಂಚಾಲಿತ ನೀರಿನ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗುತ್ತಿದೆ.
ಸುರಂಗದ ಒಳಗೆ ನೀರು ಸೋರಿಕೆಯಾಗದಂತೆ (Water seepage) ತಡೆಯಲು ಅತ್ಯಾಧುನಿಕ ಜಲನಿರೋಧಕ (Waterproofing Membrane) ತಂತ್ರಜ್ಞಾನ ಬಳಸಲಾಗುತ್ತಿದೆ. ಅಲ್ಲದೆ ಸುರಂಗದ ಒಳಗೆ ಸಂಗ್ರಹವಾಗುವ ನೀರನ್ನು ತಕ್ಷಣವೇ ಹೊರಹಾಕಲು ಬೃಹತ್ ಹೈಡ್ರೋಲಿಕ್ ಡ್ರೈನೇಜ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ವಯನಾಡ್ ಭೂಕುಸಿತ ʻಮಾನವ ನಿರ್ಮಿತʼ – ಜೂ. 20 ರಂದೇ ಮಣ್ಣು ತೆರವುಗೊಳಿಸಲು ಸೂಚಿಸಲಾಗಿತ್ತು: ಸಿಎಂ ಸತೀಶನ್

2025 ರಲ್ಲಿ ಆರಂಭ:
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಂತಿಮ ಅರಣ್ಯ ಅನುಮತಿ ನೀಡಿದ ನಂತರ ಪೂರ್ಣ ಪ್ರಮಾಣದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಸುರಂಗ ಮಾರ್ಗದ ಪ್ರಾಥಮಿಕ ಮೂಲಸೌಕರ್ಯ ಹಾಗೂ ರಸ್ತೆ ನಿರ್ಮಾಣದ ಸಿದ್ಧತಾ ಕಾರ್ಯಗಳು 2025 ರ ಆಗಸ್ಟ್ 31 ರಿಂದ ಅಧಿಕೃತವಾಗಿ ಆರಂಭವಾಗಿದ್ದವು. ಸುರಂಗಕ್ಕಾಗಿ ಬೆಟ್ಟಗಳನ್ನು ಕೊರೆಯುವ ಮತ್ತು ಬಂಡೆಗಳನ್ನು ನಿಯಂತ್ರಿತವಾಗಿ ಸ್ಫೋಟಿಸುವ (Controlled Rock Blasting) ಪ್ರಮುಖ ತಾಂತ್ರಿಕ ಕಾಮಗಾರಿ 2026ರ ಮಾರ್ಚ್ 6 ರಂದು ಆರಂಭವಾಯಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೋಯಿಕ್ಕೋಡ್‌ನ ಮಾರಿಪುಳದಲ್ಲಿ ಇದಕ್ಕೆ ಚಾಲನೆ ನೀಡಿದ್ದರು. 4 ವರ್ಷಗಳ ಅವಧಿಯಲ್ಲಿ ಅಂದರೆ 2029ರ ವೇಳೆಗೆ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ.

ಪರಿಸರವಾದಿಗಳಿಂದ ವಿರೋಧ
ಈ ಯೋಜನೆ ಇರುವ ಪಶ್ಚಿಮ ಘಟ್ಟಗಳ ಪರಿಸರ ಅತ್ಯಂತ ಸೂಕ್ಷ್ಮವಾಗಿದ್ದು (Eco-Sensitive Zone) ಪ್ರಸ್ತುತ ಈ ಯೋಜನೆ ಭಾರಿ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ. ವಯನಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿಶೇಷವಾಗಿ 2024ರ ಚೂರಲ್ಮಲ ಭೂಕುಸಿತದ ನಂತರ ಅತ್ಯಂತ ಸೂಕ್ಷ್ಮ ವಲಯಗಳಾಗಿವೆ. ಇಂತಹ ಕಡೆ ಆಳವಾದ ಜಿಯೋಲಾಜಿಕಲ್ ಮತ್ತು ಹೈಡ್ರೋಲಾಜಿಕಲ್ ಅಧ್ಯಯನ ನಡೆಸದೆ ಇಷ್ಟು ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅಪಾಯಕಾರಿ ಎಂದು ಪರಿಸರ ತಜ್ಞರು ಎಚ್ಚರಿಸುತ್ತಿದ್ದಾರೆ.
ಕೇರಳ ಸರ್ಕಾರ ಹೇಳಿದ್ದೇನು?
ಪಶ್ಚಿಮ ಘಟ್ಟಗಳ ಪರಿಸರಕ್ಕೆ ಧಕ್ಕೆಯಾಗದ ವಿನ್ಯಾಸ ಮಾಡಲಾಗಿದೆ. ಸಾಂಪ್ರದಾಯಿಕ ಘಾಟ್ ರಸ್ತೆಗಳನ್ನು ನಿರ್ಮಿಸುವಾಗ ಸಾವಿರಾರು ಹೆಕ್ಟೇರ್ ಅರಣ್ಯ ನಾಶ ಮಾಡಬೇಕಾಗುತ್ತದೆ ಮತ್ತು ಲಕ್ಷಾಂತರ ಮರಗಳನ್ನು ಕಡಿಯಬೇಕಾಗುತ್ತದೆ. ಆದರೆ ಈ ರಸ್ತೆಯು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಮತ್ತು ಬೆಟ್ಟಗಳ ಆಳದಲ್ಲಿ (ಭೂಮಿಯ ಒಳಗಡೆ) ಹಾದುಹೋಗುವುದರಿಂದ, ಮೇಲ್ಭಾಗದ ಅರಣ್ಯ ಜೀವಿಗಳ ಮುಕ್ತ ಸಂಚಾರಕ್ಕೆ ಮತ್ತು ಪರಿಸರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಪಿಣರಾಯ್ ವಿಜಯನ್ ಸರ್ಕಾರ ಯೋಜನೆಯನ್ನು ಸಮರ್ಥಿಸಿಕೊಂಡಿತ್ತು.
ಸಾಮಾನ್ಯವಾಗಿ ದೊಡ್ಡ ರಸ್ತೆ ಯೋಜನೆಗಳಿಗೆ ಸಾವಿರಾರು ಎಕರೆ ಕೃಷಿ ಭೂಮಿ ಅಥವಾ ಜನರ ವಸತಿ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಆದರೆ ಈ ಯೋಜನೆಯ ಬಹುಭಾಗ ಭೂಮಿಯ ಆಳದಲ್ಲಿ ಹಾದುಹೋಗುವುದರಿಂದ ಕೇವಲ ಅಂದಾಜು 11 ಹೆಕ್ಟೇರ್ ಖಾಸಗಿ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದು ಪರಿಸರ ಮತ್ತು ಸಾಮಾಜಿಕವಾಗಿ ಅತ್ಯಂತ ಕಡಿಮೆ ಪರಿಣಾಮ ಬೀರುವ ವಿನ್ಯಾಸವಾಗಿದೆ.
ಸವಾಲು ಏನು?
ಪಶ್ಚಿಮ ಘಟ್ಟಗಳ ಗಟ್ಟಿ ಕಲ್ಲುಗಳನ್ನು ಕೊರೆಯಲು ಅತ್ಯಾಧುನಿಕ ಟನಲ್ ಬೋರಿಂಗ್ ಮೆಷಿನ್ (TBM) ಮತ್ತು ನ್ಯೂ ಆಸ್ಟ್ರಿಯನ್ ಟನಲಿಂಗ್ ಮೆಥಡ್'(NATM) ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತಿದೆ. ಪರಿಸರ ಸೂಕ್ಷ್ಮ ವಲಯವಾಗಿರುವುದರಿಂದ ಇಷ್ಟೆಲ್ಲಾ ವಿಶೇಷತೆಗಳ ನಡುವೆಯೂ ಭೌಗೋಳಿಕ ಸುರಕ್ಷತೆ ಕಾಯ್ದುಕೊಳ್ಳುವುದು ಈ ಯೋಜನೆಯ ದೊಡ್ಡ ಸವಾಲಾಗಿದೆ.
