– ಬೆಂಗಳೂರಿನ ಏರ್ಪೋರ್ಟ್ ತಾಜ್ ಹೋಟೆಲ್‌ನಲ್ಲಿ ಘೋರ ಕೃತ್ಯ
ಬೆಂಗಳೂರು: ಇಲ್ಲಿನ ಏರ್‌ಪೋರ್ಟ್ ತಾಜ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಹೆಣ್ಣುಮಕ್ಕಳನ್ನ ಹತ್ಯೆ ಮಾಡಿರುವ ಘೋರ ಕೃತ್ಯ ನಡೆದಿದೆ. ಘಟನೆ ಬಳಿಕ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ.
ಆರೋಪಿ ತಂದೆ ಇಮ್ರಾನ್ ತನ್ನ ಇಬ್ಬರು ಮಕ್ಕಳನ್ನ ಹತ್ಯೆ ಮಾಡುವುದಕ್ಕೆ ಏರ್‌ಪೋರ್ಟ್ ತಾಜ್ ಹೋಟೆಲ್‌ನ 4ನೇ ಮಹಡಿಯಲ್ಲಿ ರೂಮ್ ಬುಕ್ ಮಾಡಿದ್ದ ಎಂದು ಹೇಳಲಾಗ್ತಿದೆ.
ಇಮ್ರಾನ್ ತನ್ನ 5 ಹಾಗೂ 10 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನ ಹತ್ಯೆ ಮಾಡಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಇಮ್ರಾನ್‌ನನ್ನ ಬಳಿಕ ಹೋಟೆಲ್ ಸಿಬ್ಬಂದಿಗಳೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಲೆಯಾದ ಮಕ್ಕಳನ್ನ ಶೇಕ್ ಜೆಹರಾ (5 ವರ್ಷ), ಶೇಕ್ ಜೋಯಾ (10 ವರ್ಷ) ಎಂದು ಗುರುತಿಸಲಾಗಿದೆ.

ಪತ್ನಿ ಅಕ್ರಮ ಸಂಬಂದಕ್ಕೆ ಬೇಸತ್ತಿದ್ದನಾ ಇಮ್ರಾನ್?
ಮಕ್ಕಳನ್ನ ಹತ್ಯೆ ಮಾಡಲು ಹೋಟೆಲ್‌ನಲ್ಲಿ ಮುಂಚಿತವಾಗಿಯೇ ರೂಂ ಬುಕ್ ಮಾಡಿದ್ದ ಎನ್ನಲಾಗಿದೆ. ಕೃತ್ಯದ ಬಳಿಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆದ್ರೆ ಮಕ್ಕಳಿಬ್ಬರ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇಮ್ರಾನ್ ಮೂಲತಃ ಬೆಂಗಳೂರಿನ ನಾಗವಾರದ ನಿವಾಸಿಯಾಗಿದ್ದು, Zimmy ಕ್ಯಾಬ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ. ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಇಮ್ರಾನ್‌ನನ್ನ ಸದ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ತಿಳಿಯುತ್ತಿದ್ದಂತೆ ಏರ್‌ಪೋರ್ಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

