– ಮಶ್ರೂಮ್‌ನಲ್ಲಿ ಫಂಗಸ್ ಬಂದಿತ್ತು, ಪನ್ನೀರ್‌ನಲ್ಲಿ ಜಿರಳೆ ಇತ್ತು: ಅಧಿಕಾರಿಗಳ ಮಾಹಿತಿ
ಬೆಂಗಳೂರು: ಸಿಲಿಕಾನ್ ಸಿಟಿಯ ಫೈವ್‌ಸ್ಟಾರ್, ತ್ರೀ ಸ್ಟಾರ್ ಹೊಟೇಲ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ ಮುಂದುವರಿದಿದೆ. ನಿನ್ನೆ ರಾತ್ರಿ ಕೂಡ ಅನೇಕ ಹೊಟೇಲ್‌ಗಳ ಮೇಲೆ ದಾಳಿ ಮಾಡಿ, ಅವಧಿ ಮೀರಿದ ಆಹಾರಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಕರಾಳ ಮುಖ ಅನಾವರಣಗೊಳ್ತಿದೆ. ಕಳೆದ 2-3 ದಿನಗಳಿಂದ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್‌ಗಳ ಮೇಲೆ ದಾಳಿ ಮುಂದುವರಿದಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ 3ನೇ ದಿನವು ಹೈಫೈ ಹೋಟೇಲ್‌ಗಳ ಕರಾಳ ಸತ್ಯ ಬಯಲು ಮಾಡಿದೆ.
ಬೆಂಗಳೂರಿನ ಹಾರ್ಟ್ ಆಫ್ ದಿ ಸೆಂಟರ್‌ನಲ್ಲಿರುವ ವಿಐಪಿಗಳು ಹಾಗೂ ಟೆಕ್ಕಿಗಳು ಹೆಚ್ಚಾಗಿ ಭೇಟಿ ನೀಡುವ ಪ್ರಸಿದ್ಧ ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಐಷಾರಾಮಿ ರೆಸ್ಟೋರೆಂಟ್, ಫುಡ್ ಔಟ್‌ಲೆಟ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಪಂಚತಾರಾ ಹೋಟೆಲ್‌ಗಳ ಅಡುಗೆ ಮನೆಗಳಲ್ಲಿನ ಅವ್ಯವಸ್ಥೆ ಬಯಲಾಗಿದೆ. ಪ್ರಸಿದ್ಧ ಯುಬಿ ಸಿಟಿ ಹಾಗೂ ಬ್ರಿಗೇಡ್ ರಸ್ತೆಯ ಐಷಾರಾಮಿ ರೆಸ್ಟೋರೆಂಟ್‌ಗಳಲ್ಲಿ ಆಹಾರ ಪ್ರಿಯರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸತತ 3ನೇ ದಿನ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಕೊಳೆತ ಮಾಂಸ ಹಾಗೂ ಅಪಾಯಕಾರಿ ಆಹಾರ ಪದಾರ್ಥಗಳು ಪತ್ತೆಯಾಗಿವೆ.

ಹೌಹಾರಿದ ಅಧಿಕಾರಿಗಳು
ಹೌದು. ವಿಕೆಂಡ್ ಹಿನ್ನೆಲೆ, ಹೆಚ್ಚು ಜನ ಪಬ್‌ಗಳಿಗೆ ಹೋಗ್ತಾರೆ, ಈ ವೇಳೆ ದಾಳಿ ಮಾಡಿದ್ರೆ ಸೂಕ್ತ ಅನ್ನೋ ಕಾರಣಕ್ಕೆ ನಿನ್ನೆ ರಾತ್ರಿ ಆಹಾರ ಸುರಕ್ಷತಾ ಅಧಿಕಾರಿಗಳು ರೇಡ್ ಮಾಡಿದ್ರು. 15 ಜನರ ಅಧಿಕಾರಿಗಳ ತಂಡವೇ ರೆಸ್ಟೋ ಬಾರ್‌ನಲ್ಲಿ ಶೇಖರಿಸಿ ಇಟ್ಟಿದ್ದ ಆಹಾರ ಕಂಡು ಶಾಕ್ ಆಗಿದ್ದಾರೆ. ಫ್ರೀಜರ್‌ಗಳಲ್ಲಿ 2 ವರ್ಷದಿಂದ ಇಟ್ಟಿದ್ದ ಚಿಕನ್, 1 ವರ್ಷದಷ್ಟು ಹಿಂದಿನ ಮೀನಿನ ಮಾಂಸ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
ಫುಡ್ ಆಫಿಸರ್ಸ್ 10ಕ್ಕೂ ಹೆಚ್ಚು ಹೋಟೆಲ್ ಮೇಲೆ ದಾಳಿ ಮಾಡಿದ್ದು, 5 ಹೊಟೇಲ್‌ಗಳಲ್ಲಿ ಈ ರೀತಿಯ ಸೇವೆನೆಗೆ ಸೂಕ್ತವಲ್ಲದ ಆಹಾರ ಪತ್ತೆಯಾಗಿದೆ. ಹಲವು ಕಡೆ ಲೇಬಲ್ ಇಲ್ಲದ ಕೇಕ್, ಬಳಕೆಗೆ ಸೂಕ್ತವಲ್ಲದ ತರಕಾರಿ, ಕೊಳತೆ ಮಾಂಸ ಪತ್ತೆಯಾಗಿದೆ. ಈ ಎಲ್ಲಾ ಆಹಾರವನ್ನ ಸೀಜ್ ಮಾಡಿರೋ ಅಧಿಕಾರಿಗಳ ತಂಡ ಆಹಾರವನ್ನ ಲ್ಯಾಬ್‌ಗೆ ರವಾನೆ ಮಾಡಿ, ಹೊಟೇಲ್‌ಗಳಿಗೆ ನೋಟಿಸ್ ನೀಡಿದೆ.

ಯಾವ್ಯಾವ ಹೋಟೆಲ್‌ಗಳಲ್ಲಿ ಏನೇನು ಪತ್ತೆ?
* ಹೋಟೆಲ್ ಸ್ಕೈ, ಯುಬಿ ಸಿಟಿ
45 ಕೆಜಿ ಕೊಳೆತ ಕೋಳಿ ಮಾಂಸ
6 ಕೆಜಿ ತರಕಾರಿ ಕಟ್ಲೆಟ್
15 ಲೀ. ಬಳಸಿದ ಅಡುಗೆ ಎಣ್ಣೆ
51 ಕೆಜಿ ಒಟ್ಟು ಆಹಾರ ಪದಾರ್ಥ ಸೀಜ್
ರಾಯಲ್ ಚೈನ್ ಹೋಟೆಲ್, ಯುಬಿ ಸಿಟಿ
50 ಕೆಜಿ ಬಾತುಕೋಳಿ
5 ಕೆಜಿ ಮೀನು –
55 ಕೆಜಿ ಒಟ್ಟು ಆಹಾರ ಪದಾರ್ಥ ಸೀಜ್
* ಮದ್ರಾಸ್ ಕಿಚನ್ ಹೋಟೆಲ್, ಯುಬಿ ಸಿಟಿ
5 ಕೆಜಿ ಹಸಿರು ಬಟಾಣಿ
* ಟೆಸ್ಕಾನ್ ಹೋಟೆಲ್, ಯುಬಿ ಸಿಟಿ
5 ಕೆಜಿ ಅಣಬೆ
* ಸೆನ್ಚೆಜ್ ಹೋಟೆಲ್, ಯುಬಿ ಸಿಟಿ
3 ಕೆಜಿ ಮೀನು
7 ಕೆಜಿ ಕೇಕ್, ಆಲೂಗಡ್ಡೆ, ಟ್ಯಾಕೋಸ್
* ಸ್ಕೈ ಲಾಂಜ್, ಯುಬಿ ಸಿಟಿ
ಅಡುಗೆ ಮನೆ ಕಳಪೆ ನಿರ್ವಹಣೆ
ಕೊಳೆತ ಮಾಂಸ, ಗೋಮಾಂಸ ಪತ್ತೆ
ಅವಧಿ ಮುಗಿದ ಹಾಲು-ಮೊಸರು ಪತ್ತೆ
* ಪೆಗ್ ಅಂಡ್ ಬಾಟಲ್ಸ್ ಪಬ್
ಫಂಗಸ್ ಬಂದ ಮಶ್ರೂಮ್
ಪನ್ನೀರ್‌ನಲ್ಲಿ ಸತ್ತ ಜಿರಳೆ
ಬೇಬಿಕಾರ್ನ್ ಪ್ಯಾಕೆಟ್‌ಗಳಲ್ಲಿ ಕೀಟ
ಅವಧಿ ಮೀರಿದ ಹಾಲು, ಮೊಸರು
ದಾಳಿಯಲ್ಲಿ ಒಟ್ಟು 132 ಕೆಜಿ ಆಹಾರ ಪದಾರ್ಥಗಳು, 15 ಲೀಟರ್ ಬಳಸಿದ ಎಣ್ಣೆಯನ್ನು ಸೀಜ್ ಮಾಡಲಾಗಿದೆ. ದಾಳಿ ಬಗ್ಗೆ ಆಹಾರ ಸುರಕ್ಷಾತೆ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, 3 ದಿನ ರೇಡ್ ಮಾಡಿದ್ದೇವೆ. ಯುಬಿಸಿಟಿ, ಬ್ರಿಗೇಡ್ ರೋಡ್ ಸುತ್ತಮುತ್ತ ರೇಡ್ ಮಾಡಲಾಗಿದೆ 3 ಕಡೆ ಚಿಕನ್, ಮಟನ್, ಮೀನು ಸರಿಯಾಗಿ ಫ್ರೀಜ್ ಮಾಡಿರಲಿಲ್ಲ. ಮೈನಸ್ 18 ಡಿಗ್ರಿಯಲ್ಲಿ ಒಂದು ವರ್ಷದವರೆಗೂ ಚಿಕನ್ ಮಟನ್ ಇಡಬಹುದು. ಫಿಶ್ ಒಂದು ತಿಂಗಳು ಮಾತ್ರ ಇಡಬಹುದು. ಆದ್ರೆ ಇಲ್ಲಿನ ಹೆಚ್ಚಿನ ಸಮಯ ಇಟ್ಟಿದ್ದಾರೆ. ಕೆಲವು ಕಡೆ ಡೇಟ್ ಚೇಂಜ್ ಮಾಡಿ ಸ್ಟಿಕರ್ ಪ್ಯಾಕೆಟ್ ಮೇಲೆ ಅಂಟಿಸಿದ್ದಾರೆ. ಅವರಿಗೆಲ್ಲಾ ನೊಟೀಸ್ ಕೊಟ್ಟಿದ್ದೇವೆ. 10-15 ಸ್ಯಾಂಪಲ್ ಕಲೆಕ್ಟ್ ಮಾಡಿದ್ದೇವೆ. ಹೊಟೇಲ್ ನಡೆಸೋರಿಗೆ ಸರಿಯಾಗಿ ರೂಲ್ಸ್ ಗೊತ್ತಿಲ್ಲ. ಕೂಡಲೇ ಅಡ್ವೈಸರಿ ಇಷ್ಯೂ ಮಾಡ್ತೀವಿ ಎಂದರು.

ಪೆಗ್ ಅಂಡ್ ಬಾಟಲ್ಸ್ ಪಬ್ ಮೇಲೆ ರೇಡ್ ಬಗ್ಗೆ FSSAI ಅಧಿಕಾರಿ ಅನಿಲ್ ಧವನ್ ಮಾತನಾಡಿ, ಕಿಚನ್‌ನಲ್ಲಿ ಯಾವುದೇ ರೀತಿಯಾದ ಶುಚಿತ್ವ ಕಾಪಾಡಿಕೊಂಡಿಲ್ಲ. ಆಹಾರ ಪದಾರ್ಥಗಳಲ್ಲಿ ಜಿರಳೆ, ಕೀಟಗಳು ಪತ್ತೆಯಾಗಿದೆ. ಕೆಲವು ಆಹಾರ ಪದಾರ್ಥಗಳು ಅವಧಿ ಮೀರಿವೆ. ಮಶ್ರೂಮ್‌ನಲ್ಲಿ (ಹಣಬೆ) ಫಂಗಸ್ ಬಂದಿತ್ತು, ಪನ್ನೀರ್‌ನಲ್ಲಿ ಜಿರಳೆ ಇತ್ತು. ಅವಧಿ ಮೀರಿದ ಹಾಲು ಹಾಗೂ ಮೊಸರಿನ ಪ್ಯಾಕೆಟ್ ಇತ್ತು. ಹೀಗಾಗಿ ನೋಟೀಸ್ ಕೊಟ್ಟು ಪೆಗ್ ಅಂಡ್ ಬಾಟಲ್ಸ್ ಪಬ್ ಕಿಚನ್ ಸೀಲ್ ಮಾಡಿದ್ದೇವೆ ಅಂತ ಮಾಹಿತಿ ಕೊಟ್ರು.
4 ಹೋಟೆಲ್‌ಗಳಿಗೆ ನೋಟಿಸ್ ಜಾರಿ
ಬೆಂಗಳೂರಿನಲ್ಲಿ ಒಟ್ಟು 60 ಐಷಾರಾಮಿ ಹೋಟೆಲ್‌ಗಳ ಮೇಲೆ ರೇಡ್ ಡನೆದಿದೆ. ಯುಬಿ ಸಿಟಿ ಸುತ್ತಮುತ್ತ ಹೋಟೆಲ್‌ಗಳ ಮೇಲೆ ದಾಳಿ ಬಳಿಕ ಆಹಾರ ಸುರಕ್ಷತಾ ಇಲಾಖೆ 4 ಹೋಟೆಲ್‌ಗಳಿಗೆ ನೋಟಿಸ್ ನಿಡಿದೆ. 14 ದಿನಗಳ ಒಳಗಡೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ನೋಟಿಸ್‌ಗೆ ಉತ್ತರ ಕೊಡದಿದ್ದರೆ ಬೀಗ ಬೀಳೋದು ಗ್ಯಾರಂಟಿ. ಇತ್ತ ಮೀನಿನ ಮಾಂಸ ಬಳಕೆಗೆ ಮಾರ್ಗಸೂಚಿ ಜಾರಿಗೆ ತರಲು ಆಹಾರ ಇಲಾಖೆ ನಿರ್ಧರಿಸಿದೆ. ಮೀನು ಮಾಂಸ ಒಂದು ತಿಂಗಳವರೆಗೂ ಸ್ಟೋರೆಜ್ ಮಾಡಬಹುದು. ಆದ್ರೆ ಹೋಟೆಲ್‌ಗಳು ನಿಯಮ ಉಲ್ಲಂಘಿಸಿ ಒಂದು ವರ್ಷದವರೆಗೂ ಸ್ಟೋರ್ ಮಾಡ್ತಿದ್ದಾರೆ. ಹೀಗಾಗಿ ಒಂದು ತಿಂಗಳ ವರೆಗೂ ಮೀನಿನ ಮಾಂಸ ಸ್ಟೋರೇಜ್ ಮಾಡಬೇಕು ಅಂತಾ ಮಾರ್ಗಸೂಚಿ ಜಾರಿಗೆ ನಿರ್ಧಾರ ಮಾಡಿದೆ.
ನಿಯಮ ಪಾಲಿಸದಿದ್ದರೆ ಮುಲಾಜಿಲ್ಲದೇ ಕ್ಲೋಸ್
ಆಹಾರ ಇಲಾಖೆ ದಾಳಿ ಬಳಿಕ ಪಂಚತಾರಾ ಹೋಟೆಲ್‌ಗಳ ಕರಾಳ ಮುಖವಾಡ ಬಯಲಾಗಿದೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಆರೋಗ್ಯ ಸಚಿವ ಯುಟಿ ಖಾದರ್, ನಿಯಮ ಪಾಲನೆ ಮಾಡದ ಹೊಟೇಲ್‌ಗಳನ್ನ ಮುಲಾಜಿಲ್ಲದೇ ಕ್ಲೋಸ್ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೊಟೇಲ್‌ಗಳು ಇನ್ನುಮುಂದೆ ಅಡುಗೆ ಮನೆಯಲ್ಲೂ ಗ್ರಾಹಕರು ನೋಡುವ ರೀತಿ ಕ್ಯಾಮೆರಾ ಅಳವಡಿಕೆ ಮಾಡಬೇಕು. ಮೊದಲ ಹಂತದಲ್ಲಿ ಜಾಗೃತಿ.. ಅದು ಆಗಲಿಲ್ಲ ಅಂದರೆ ಕ್ರಮ ಗ್ಯಾರಂಟಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

